Advertisement
ತಾಲೂಕಿನ ವಿವಿಧೆಡೆ ಮಡಕೆ ಮಾರಾಟ ಮಾಡುವ ಅಂಗಡಿಗಳಲ್ಲಿ ಮಡಕೆ ಖರೀದಿಸುವ ದೃಶ್ಯಗಳು ಕಾಣಸಿಗುತ್ತವೆ. ಬೇಸಗೆಯಲ್ಲಿ ಮುಖ್ಯ ವ್ಯಾಪಾರಗಳಲ್ಲಿ ಒಂದಾಗಿರುವ ಮಡಕೆ ವ್ಯಾಪಾರವೂ ಜನವರಿಯಿಂದಲೇ ಶುರುವಾಗಿದೆ. ನಾನಾ ಬಗೆಯ ಆಕೃತಿಯ ಮಡಕೆಗಳು ಗ್ರಾಹಕರನ್ನು ಸೆಳೆಯುತ್ತಿವೆ. ಮಡಕೆಯ ವಿನ್ಯಾಸ, ಅದರ ಗಾತ್ರದ ಆಧಾರದ ಮೇಲೆ ದರ ನಿಗದಿಪಡಿಸಿದ್ದಾರೆ.
ಬೇಸಗೆಯಲ್ಲಿ ಕೆಲವರು ತಣ್ಣನೆಯ ನೀರಿಗಾಗಿ ಫ್ರಿಜ್ ಬಳಸುತ್ತಾರೆ. ದುಬಾರಿ ರೆಫ್ರಿಜಿರೇಟರ್ ಖರೀದಿಸಲಾಗದವರು ಮಡಕೆಯ ಮೊರೆ ಹೋಗುತ್ತಾರೆ. ಎಂಥಾ ಸುಡುಬೇಸಗೆಯಲ್ಲೂ ವಿದ್ಯುತ್ ಅಗತ್ಯವಿಲ್ಲದೇ ತಂಪಾದ ನೀರು ಕೊಡುವ ಮಣ್ಣಿನ ಮಡಕೆ ಬಡವರ ಫ್ರಿಜ್ ಎಂದೇ ಜನಜನಿತವಾಗಿದೆ. ಫ್ರಿಜ್‌ನಲ್ಲಿನ ನೀರು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಮಾಹಿತಿಯಿಂದ ಮಣ್ಣಿನ ಮಡಕೆಗೆ ಬೇಡಿಕೆ ವ್ಯಕ್ತವಾಗಿದೆ. ಮಡಕೆಯಲ್ಲಿನ ನೀರು ಕುಡಿಯುವುದರಿಂದ ಆರೋಗ್ಯಕ್ಕೆ ಉಪಕಾರಿ. ಬೇಸಗೆಯಲ್ಲಿ ಮಡಕೆ ಖರೀದಿ ಜಾಸ್ತಿ. ಫ್ರಿಜ್‌ಗಿಂತಲೂ ಬಹಳಷ್ಟು ಜನರು ಮಡಕೆ ಖರೀದಿಸಿ ನೀರು ಕುಡಿಯುತ್ತಾರೆ. ಆರೋಗ್ಯಕ್ಕೆ ತಂಪು
ನೈಸರ್ಗಿಕವಾಗಿ ನೀರನ್ನು ತಂಪಾಗಿಸುವ ಗುಣ ಹೊಂದಿರುವ ಮಡಕೆ, ಫ್ರಿಜ್‌ಗಿಂತ ಉತ್ತಮ. ಆರೋಗ್ಯದ ದೃಷ್ಟಿಯಿಂದಲೂ ಅನುಕೂಲ. ದಾಹವನ್ನು ಬೇಗ ತಣಿಸಿ ಉಷ್ಣಾಂಶ ಕಡಿಮೆ ಮಾಡುತ್ತದೆ. ಮಣ್ಣಿನಲ್ಲಿರುವ ವಿಶಿಷ್ಟ ಗುಣಗಳು ದೇಹದೊಳಗಿನ ಕೆಲವು ಬ್ಯಾಕ್ಟೀರಿಯಾಗಳ ಮೇಲೆ ಪ್ರಭಾವ ಬೀರುತ್ತವೆ. ಇದು ಆರೋಗ್ಯ ರಕ್ಷಣೆಗೆ ಅನುಕೂಲವಾಗುತ್ತದೆ. ಕಡಿಮೆ ಖರ್ಚಿನಲ್ಲಿ ಬಹು ರೀತಿಯ ಲಾಭ ನೀಡುವ ಮಡಕೆಯಿಂದ ಪರಿಸರಕ್ಕೂ ಯಾವುದೇ ಹಾನಿಯಿಲ್ಲ. ಮಣ್ಣಿನ ಮಡಕೆಯೊಳಗೆ ತುಂಬಿಸಿದ ನೀರಿಗೆ ತಾಮ್ರದ ತಗಡನ್ನು ಹಾಕಿದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುತ್ತಾರೆ. ಕಳೆದ 4 ವರ್ಷಗಳಿಂದ ಮಣ್ಣಿನ ಮಡಕೆಯ ನೀರನ್ನು ಬಳಸುತ್ತಿರುವ ಬೆಳಂದೂರು ಈಡನ್ ಗ್ಲೋಬಲ್ ಶಿಕ್ಷಣ ಸಂಸ್ಥೆಯ ಶಿಕ್ಷಕ ಶಶಿಕುಮಾರ್ ಬಿ.ಎನ್ ಅವರು.
Related Articles
ನಮ್ಮಲ್ಲಿ ಒಂದು ಲೀಟರ್‌ನಿಂದ ಹಿಡಿದು 25 ಲೀಟರ್ ಸಾಮರ್ಥಯದವರೆಗೆ ತರಹೇವಾರಿ ಮಡಕೆಗಳು ಸಿಗುತ್ತವೆ. ನಳ್ಳಿ ಅಳವಡಿಸಿರುವ ದೊಡ್ಡ ಮಡಕೆಗಳೂ ಇವೆ. ಹೋದ ವರ್ಷವೂ ಬೇಸಗೆಯಲ್ಲಿ ವ್ಯಾಪಾರ ಜೋರಾಗಿತ್ತು. ನಮ್ಮಲ್ಲಿ ಗಾತ್ರ ಹಾಗೂ ವಿನ್ಯಾಸ ಆಧರಿಸಿ 120ರಿಂದ 2,500 ರೂಪಾಯಿವರೆಗೆ ಮಡಕೆ ಮಾರಾಟ ಮಾಡಲಾಗುತ್ತದೆ. ಜನವರಿಯಿಂದ ಮಣ್ಣಿನ ಮಡಕೆ ವ್ಯಾಪಾರ ಆರಂಭವಾಗುತ್ತದೆ. ಮಾರ್ಚ್, ಎಪ್ರಿಲ್ ಮತ್ತು ಮೇಯಲ್ಲಿ ಮಡಕೆಗಳಿಗೆ ಬೇಡಿಕೆ ಹೆಚ್ಚಿರುತ್ತದೆ. ಇದೀಗ ದಿನಕ್ಕೆ 10 ರಿಂದ 20 ಮಡಕೆಗಳು ಕೌಡಿಚ್ಚಾರು ಕುಂಬಾರರ ಗುಡಿಕೈಗಾರಿಕೆ ಸಂಸ್ಥೆಯಿಂದ ಮಾರಾಟವಾಗುತ್ತಿದೆ. ತಾಲೂಕಿನಲ್ಲಿ ದಿನವೊಂದಕ್ಕೆ 100ಕ್ಕಿಂತ ಹೆಚ್ಚು ಮಣ್ಣಿನ ಮಡಕೆಗಳು ಮಾರಾಟವಾಗುತ್ತದೆ ಎಂದು ಹೇಳುತ್ತಾರೆ ದೀಪಕ್ ಕುಲಾಲ್ ಕೌಡಿಚ್ಚಾರು.
Advertisement
ಪ್ರವೀಣ್ ಚೆನ್ನಾವರ