Advertisement

ಬೆಂಬಲ ಬೆಲೆಯ ಭತ್ತ ಖರೀದಿ ಕೇಂದ್ರಕ್ಕೆ ಹೆಚ್ಚಿದ ಬೇಡಿಕೆ

12:16 AM Nov 13, 2019 | mahesh |

ಕೋಟ: ಕರಾವಳಿಯಲ್ಲಿ ಮಳೆ ಹಿಂದೆ ಸರಿದು ಭತ್ತದ ಕಟಾವು ಚುರುಕುಗೊಂಡಿದೆ. ಸರಕಾರ ಈ ಬಾರಿ ಸಾಮಾನ್ಯ ವರ್ಗದ ಭತ್ತ ಕ್ವಿಂಟಾಲ್‌ಗೆ 1,815 ರೂ. ಮತ್ತು ಎ ಗ್ರೇಡ್‌ಗೆ 1,835 ರೂ. ಬೆಂಬಲ ಬೆಲೆ ನಿಗದಿಪಡಿಸಿದೆ. ಆದರೆ ಖಾಸಗಿ ಮಿಲ್‌ಗ‌ಳು 1,600 ರೂ.ನಂತೆ ಖರೀದಿಸುತ್ತಿರುವ ಕಾರಣ ರೈತರಿಗೆ ನಷ್ಟವಾಗುತ್ತಿದೆ. ಹೀಗಾಗಿ ಸರಕಾರದಿಂದಲೇ ಬೆಂಬಲ ಬೆಲೆಯ ಭತ್ತ ಖರೀದಿ ಕೇಂದ್ರ ಶೀಘ್ರ ಸ್ಥಾಪಿಸಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ.

Advertisement

ದ.ಕ.ದಲ್ಲಿ ಬೆಂಬಲ ಬೆಲೆಯ ಭತ್ತ ಖರೀದಿ ಕೇಂದ್ರ ಸ್ಥಾಪನೆಗೆ ಬೇಡಿಕೆ ಇಲ್ಲ. ಆದರೆ ಉಡುಪಿಯಲ್ಲಿ ಕೇಳಿಬಂದಿದೆ. ಜಿಲ್ಲಾಧಿಕಾರಿಗಳ ಸೂಚನೆಯಂತೆ ಕೃಷಿ ಮಾರುಕಟ್ಟೆ, ಜಿಲ್ಲಾ ಆಹಾರ ನಿಗಮದ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದ್ದು ಅನುಮತಿ ನಿರೀಕ್ಷಿ ಸಲಾಗಿದೆ. ಮುಂಗಾರು ಹಂಗಾಮಿನಲ್ಲಿ ಉಡುಪಿ ಜಿಲ್ಲೆಯಲ್ಲಿ 34,730 ಹೆಕ್ಟೇರ್‌ ಮತ್ತು ದ.ಕ. ಜಿಲ್ಲೆಯಲ್ಲಿ 10,600 ಹೆಕ್ಟೇರ್‌ಗಳಲ್ಲಿ ಭತ್ತದ ನಾಟಿಯಾ ಗಿದ್ದು, ಕಟಾವಿಗೆ ಸಿದ್ಧವಾಗಿದೆ. ಜಿಲ್ಲೆಗೆ ಒಂದೆರಡು ಕೇಂದ್ರಗಳನ್ನು ಮಾತ್ರ ಸ್ಥಾಪಿಸಿದಲ್ಲಿ ಸಾಗಾಟ ಸಮಸ್ಯೆ, ಕಾಯಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಪ್ರತಿ ತಾಲೂಕಿನಲ್ಲೂ ದಾಸ್ತಾನು ವ್ಯವಸ್ಥೆ ಮಾಡಿ ಖರೀದಿ ಕೇಂದ್ರ ತೆರೆಯಬೇಕು ಎನ್ನುವುದು ರೈತರ ಬೇಡಿಕೆ.

ಗ್ರೇಡಿಂಗ್‌ ತಲೆನೋವು
ಈ ಹಿಂದೆ ಖರೀದಿ ಕೇಂದ್ರಗಳಲ್ಲಿ ಗ್ರೇಡಿಂಗ್‌ ರೈತರಿಗೆ ಸಮಸ್ಯೆ ಉಂಟು ಮಾಡಿತ್ತು. ಕಠಿನ ನಿಯಮಗಳನ್ನು ಹೇರಿ ತೇವಾಂಶ, ಜಳ್ಳು ಮುಂತಾದ ಕಾರಣಗಳಿಗಾಗಿ ಖರೀದಿ ನಿರಾಕರಿಸಲಾಗಿತ್ತು. ಆದ್ದರಿಂದ ಗ್ರೇಡಿಂಗ್‌ ವಿಧಾನವನ್ನು ಸರಳಗೊಳಿಸಬೇಕು ಎನ್ನುವುದು ರೈತರ ಬೇಡಿಕೆ.

ದರ ಕಡಿತಕ್ಕೆ ಸಮರ್ಥನೆ
ಕಟಾವಾದ ತತ್‌ಕ್ಷಣ ಮಾರುಕಟ್ಟೆ ಪ್ರವೇಶಿಸುವ ಭತ್ತದಲ್ಲಿ ತೇವಾಂಶವಿರುತ್ತದೆ ಮತ್ತು ಗುಣಮಟ್ಟ ವಿರುವುದಿಲ್ಲ. ಒಣಹಾಕಿದಾಗ ಶೇ. 10ರ ವರೆಗೆ ತೂಕ ಕಡಿಮೆಯಾಗುತ್ತದೆ. ಇದರ ಜತೆ ಹೊರ ಜಿಲ್ಲೆಯವರು ಪೈಪೋಟಿಯಲ್ಲಿ ಅತೀ ಕಡಿಮೆ ದರಕ್ಕೆ ನಮ್ಮಲ್ಲಿ ಭತ್ತ, ಅಕ್ಕಿ ಮಾರಾಟ ಮಾಡುತ್ತಾರೆ. ಹೀಗಾಗಿ ಗುಣಮಟ್ಟವಿಲ್ಲದ ಭತ್ತಕ್ಕೆ ಆರಂಭದಲ್ಲಿ ಕಡಿಮೆ ಬೆಲೆ ನಿಗದಿಪಡಿಸಲಾಗುತ್ತದೆ. ಒಂದೆರಡು ತಿಂಗಳ ಅನಂತರ ನಾವೂ ಬೆಂಬಲ ಬೆಲೆಯಲ್ಲೇ ಖರೀದಿ ಮಾಡುತ್ತೇವೆ ಎನ್ನುವುದು ಖಾಸಗಿ ಮಿಲ್‌ನವರ ಸ್ಪಷ್ಟನೆ.

ಜಿಲ್ಲಾಧಿಕಾರಿಗಳ ಸೂಚನೆಯಂತೆ ಬೆಂಬಲ ಬೆಲೆ ಭತ್ತ ಖರೀದಿ ಕೇಂದ್ರ ಸ್ಥಾಪಿಸುವ ಕುರಿತು ಜಿಲ್ಲಾ ಆಹಾರ ನಿಗಮದ ಮೂಲಕ ಸರಕಾರಕ್ಕೆ ಮನವಿ ಮಾಡಲಾಗಿದೆ. ಆದೇಶ ಬಂದ ಬಳಿಕ ಕೇಂದ್ರ ಸ್ಥಾಪಿಸಲಾಗುತ್ತದೆ.         
– ಭಾರತಿ , ಕಾರ್ಯದರ್ಶಿಗಳು, ಎಪಿಎಂಸಿ ಉಡುಪಿ

Advertisement

ದ.ಕ. ಜಿಲ್ಲೆಯಲ್ಲಿ ಭತ್ತ ಬೆಳೆಯುವ ಪ್ರಮಾಣ ಕಡಿಮೆ, ಖಾಸಗಿ ಮಾರಾಟ ಹೆಚ್ಚು. ಆದ್ದರಿಂದ ಖರೀದಿ ಕೇಂದ್ರಕ್ಕೆ ಬೇಡಿಕೆ ಬಂದಿಲ್ಲ ಮತ್ತು ಸರಕಾರಕ್ಕೆ ಮನವಿ ಮಾಡಿಲ್ಲ.
– ಸೀತಾ ,
ಜಂಟಿ ಕೃಷಿ ನಿರ್ದೇಶಕರು, ದ.ಕ. ಜಿಲ್ಲೆ

ಖಾಸಗಿ ಮಿಲ್‌ಗ‌ಳ ಹಿಡಿತ ಸಡಿಲಿಸುವ ಸಲುವಾಗಿ ಪ್ರತಿ ತಾಲೂಕಿನಲ್ಲಿ ಬೆಂಬಲ ಬೆಲೆಯ ಭತ್ತ ಖರೀದಿ ಕೇಂದ್ರ ಸ್ಥಾಪಿಸಬೇಕು. ಗ್ರೇಡಿಂಗ್‌ ಮುಂತಾದ ವಿಚಾರದಲ್ಲಿ ಕಠಿನ ನಿಯಮಗಳನ್ನು ಅಳವಡಿಸದೆ ಸರಳವಾಗಿ ಖರೀದಿ ನಡೆಸಬೇಕು.- ಜಯರಾಮ್‌ ಶೆಟ್ಟಿ
ಅಧ್ಯಕ್ಷರು ರೈತಧ್ವನಿ ಸಂಘಟನೆ, ಕೋಟ

– ರಾಜೇಶ್‌ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next