ಸಕಲೇಶಪುರ: ಕೊರೊನಾ ವೈರಸ್ ಭೀತಿ ತಾಲೂಕಿನಲ್ಲೂ ಸಹ ಆವರಿಸಿದೆ. ಇದರಿಂದಾಗಿ ಪಟ್ಟಣದ ಮೆಡಿಕಲ್ ಶಾಪ್‌ಗಳಲ್ಲಿ ಮಾಸ್ಕ್ (ಮುಖಗವಸು)ಬೇಡಿಕೆ ಹೆಚ್ಚಾಗಿ ಮಾಸ್ಕ್ಗಳು ಲಭ್ಯವಿಲ್ಲದಂತಾಗಿದೆ. ಪಟ್ಟಣದ ಕೆಲವು ಖಾಸಗಿ ಶಾಲೆಗಳಲ್ಲಿ ಕೊರೊನಾ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಮಾಸ್ಕ್ ಧರಿಸಿ ಬರಲು ಆದೇಶಿಸಲಾಗಿದ್ದು ಇದರಿಂದಾಗಿ ಪಟ್ಟಣದ ಮೆಡಿಕಲ್ ಷಾಪ್‌ಗಳಲ್ಲಿ ಮಾಸ್ಕ್ಗಳ ಲಭ್ಯತೆಯಿಲ್ಲದಂತಾಗಿದ್ದು, ವಿದ್ಯಾರ್ಥಿಗಳ ಪೋಷಕರು ಮಾಸ್ಕ್ಗಳಿಗಾಗಿ ಹುಡುಕಾಡುವ ಪರಿಸ್ಥಿತಿ ಉಂಟಾಗಿದೆ. ಮೆಡಿಕಲ್ ಶಾಪ್‌ಗಳಲ್ಲಿ ಮಾಸ್ಕ್ಗಳ ಕೊರತೆ ಕಾಡುತ್ತಿದೆ. ಸಾನಿಟೈಜರ್‌ಗಳು ಬಹುತೇಕವಾಗಿ ಲಭ್ಯವಿದೆ.
ಪರೀಕ್ಷೆಗಳು ಶೀಘ್ರ ಆರಂಭ: ಕೊರೊನಾ ಭಯದಿಂದ ಮಾರ್ಚ್ 3 ನೇ ವಾರದಲ್ಲಿ ಪ್ರಾರಂಭವಾಗಬೇಕಾಗಿದ್ದ ಪರೀಕ್ಷೆಗಳನ್ನು ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‌ಕುಮಾರ್ ಅವರ ಹೇಳಿಕೆ ಮೇರೆಗೆ ಮಾರ್ಚ್ 2ನೇ ವಾರದಲ್ಲೇ ಪರೀಕ್ಷೆಗಳನ್ನು ನಡೆಸಲು ಶಾಲೆಗಳು ಸಿದ್ಧತೆ ನಡೆಸಿವೆ. ಮಾರ್ಚ್ 18ರ ಒಳಗೆ ಪರೀಕ್ಷೆ ಮುಗಿಸಿ ಮಾರ್ಚ್ 20ರ ಹೊತ್ತಿಗೆ ರಜೆ ನೀಡಲು ಎಲ್ಲಾ ಶಾಲೆಗಳು ಸಿದ್ಧತೆ ನಡೆಸಿವೆ. ಈಗಾಗಲೇ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುತ್ತಿದ್ದು, ಎಸ್ಸೆಸ್ಸೆಲ್ಸಿ ಪರೀಕ್ಷೆ ಪೂರ್ವನಿಗದಿತ ದಿನಾಂಕಗಳಂದೇ ನಡೆಯಲಿದೆ.
ರೆಸಾರ್ಟ್ ಹೋಂಸ್ಟೇಗಳಿಗೆ ನಷ್ಟ: ಕೊರೊನಾ ಹಿನ್ನೆಲೆಯಲ್ಲಿ ರೆಸಾರ್ಟ್‌ಗಳಿಗೆ ಆಗಮಿಸುವವರು ಈಗಾಗಲೇ ಕಡಿಮೆಯಾಗಿದ್ದು, ಇದರಿಂದಾಗಿ ರೆಸಾರ್ಟ್ ಹಾಗೂ ಹೋಂಸ್ಟೇಗಳ ಮಾಲಿಕರು ನಷ್ಟ ಅನುಭವಿಸುವ ಭೀತಿ ಎದುರಿಸುತ್ತಿದ್ದಾರೆ. ರೆಸಾರ್ಟ್‌ಗಳಿಗೆ ಬರುವವರ ಮೇಲೆ ನಿಗಾ ಇಡುವಂತೆ ಈಗಾಗಲೇ ತಾಲೂಕು ಆಡಳಿತ ಆದೇಶ ಹೊರಡಿಸಿದೆ. ಕೊರೊನಾ ಸೋಂಕು ಹೆಚ್ಚಾಗಿ ಕಂಡು ಬಂದಲ್ಲಿ ರೆಸಾರ್ಟ್ ಹಾಗೂ ಹೋಂ ಸ್ಟೇಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಿದರೆ ಪ್ರವಾಸೋದ್ಯಮಕ್ಕೆ ತೀವ್ರ ಪೆಟ್ಟು ಬೀಳುವ ಸಾಧ್ಯತೆಗಳಿದೆ.
ತಾಲೂಕು ಆಡಳಿತದಿಂದ ಸಿದ್ಧತೆ: ಈಗಾಗಲೇ ತಾಲೂಕು ಆಡಳಿತ ಕೊರೊನಾ ಎದುರಿಸಲು ಸಿದ್ಧತೆ ನಡೆಸಿದ್ದು ಆಟೋಗಳಲ್ಲಿ ಧ್ವನಿವರ್ಧಕಗಳ ಮುಖಾಂತರ ಹಾಗೂ ಕೊರೊನಾ ಕುರಿತು ಮಾಹಿತಿ ಇರುವ ಕರಪತ್ರಗಳನ್ನು ಜನರಿಗೆ ಹಂಚುವ ಮುಖಾಂತರ ಅರಿವು ಮೂಡಿಸಲಾಗುತ್ತಿದೆ. ಕೊರೊನಾ ಕುರಿತು ಉಪವಿಭಾಗ ಮಟ್ಟದ ಆರೋಗ್ಯ ರಕ್ಷಾ ಸಮಿತಿಯ ಸಭೆಯನ್ನು ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪಟ್ಟಣದ ಕ್ರಾಫರ್ಡ್ ಆಸ್ಪತ್ತೆಯಲ್ಲಿ ನಡೆಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ 4 ಹಾಸಿಗೆಗಳನ್ನು ಕೊರೊನಾ ರೋಗಿಗಳಿಗೆ ಮೀಸಲಿಡಲಾಗಿದೆ. ಪಟ್ಟಣದ ಕ್ರಾಪರ್ಡ್ ಆಸ್ಪತ್ರೆಯನ್ನು ಸ್ವತ್ಛವಾಗಿಡಲು ಕ್ರಮ ಕೈಗೊಳ್ಳಲಾಗಿದೆ.
ಕೊರೊನಾ ಭೀತಿ ಹಿನ್ನೆಲೆಯಲ್ಲಿ ಪರೀಕ್ಷೆಗಳನ್ನು ಬೇಗನೆ ನಡೆಸಲು ತೀರ್ಮಾನಿಸಲಾಗಿದ್ದು ಸರ್ಕಾರದ ಆದೇಶ ಬಂದ ನಂತರ ಅಧಿಕೃತವಾಗಿ ತೀರ್ಮಾನ ಕೈಗೊಳ್ಳಲಾಗುವುದು. ಎಸ್ಸೆಸ್ಸೆಲ್ಸಿ ಪರೀಕ್ಷೆ ನಿಗದಿತ ದಿನಾಂಕದಂತೆ ನಡೆಯಲಿದೆ.
-ಶಿವಾನಂದ್, ಕ್ಷೇತ್ರ ಶಿಕ್ಷಣಾಧಿಕಾರಿ
ಕೊರೊನಾ ಕುರಿತು ಜನರು ಆತಂಕ ಪಡುವುದು ಬೇಡ. ಯಾರಿಗಾದರು ಅತಿಯಾದ ಶೀತ, ಕೆಮ್ಮು, ಕಪ ಕಾಣಿಸಿಕೊಂಡಲ್ಲಿ ಕೂಡಲೇ ಸರ್ಕಾರಿ ಆಸ್ಪತ್ರೆಗೆ ಬಂದು ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಂಡರೆ ಒಳ್ಳೆಯದು.
-ಮಹೇಶ್, ತಾಲೂಕು ವೈದ್ಯಾಧಿಕಾರಿ
* ಸುಧೀರ್ ಎಸ್.ಎಲ್