Advertisement
ಬ್ರಿಟಿಷರ ಕಾಲದಿಂದಲೂ ಲಕ್ಷದ್ವೀಪಕ್ಕೆ ಆಹಾರ ಉತ್ಪನ್ನಗಳು, ನಿರ್ಮಾಣ ಸಾಮಗ್ರಿಗಳ ಸಹಿತ ಬಹುತೇಕ ಎಲ್ಲ ಅಗತ್ಯ ಸರಕುಗಳನ್ನು ಮಂಗಳೂರಿನ ಹಳೆ ಬಂದರಿನಿಂದಲೇ ಸಾಗಿಸಲಾಗುತ್ತಿದೆ. ಸರಬರಾಜಾಗುವ ಪ್ರಮುಖ ಸಾಮಗ್ರಿಗಳಲ್ಲಿ ಮರಳು ಕೂಡ ಒಂದು. ಕಳೆದ ನಾಲ್ಕು ವರ್ಷಗಳಿಂದ ಕರಾವಳಿಯಲ್ಲಿ ಉಂಟಾಗಿರುವ ಮರಳು ಕೊರತೆ ಲಕ್ಷದ್ವೀಪದ ನಿರ್ಮಾಣ ಕಾಮಗಾರಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಮರಳಿಗೆ ಹೆಚ್ಚಿನ ಬೇಡಿಕೆ ಇತ್ತಾದರೂ ಒದಗಿಸಲು ಸಾಧ್ಯವಾಗಿರಲಿಲ್ಲ. ಪ್ರಸ್ತುತ ಸಾಗಾಟ ಸಂಪೂರ್ಣ ನಿಂತಿದೆ.
ಲಕ್ಷದ್ವೀಪದಲ್ಲಿ ನಡೆಯುವ ಕಾಮಗಾರಿಗಳ ಪೈಕಿ ಶೇ.90 ಸರಕಾರದಿಂದ ನಡೆಯುವಂತಹವು. ಬ್ರೇಕ್‌ವಾಟರ್ ನಿರ್ಮಾಣ, ವಿಮಾನ ನಿಲ್ದಾಣ, ಸೌರಶಕ್ತಿ ಘಟಕಗಳು, ಕೇಂದ್ರೀಯ ವಿದ್ಯಾಲಯ, ಹಾಸ್ಟೆಲ್ ಮೊದಲಾದ ಎಲ್ಲ ಕಾಮಗಾರಿಗಳಲ್ಲಿಯೂ ಮಂಗಳೂರು ಹಳೆ ಬಂದರಿನಿಂದ ಸಾಗಣೆಯಾದ ಸಾಮಗ್ರಿಗಳ ಪಾಲು ದೊಡ್ಡದು. ಕೆಲವು ಪರಿಕರಗಳು ಮಾತ್ರ ಕೇರಳದ ಬೇಪೂರ್ ಬಂದರಿನಿಂದ ರಫ್ತಾಗುತ್ತವೆ. ಸದ್ಯ ಲಕ್ಷದ್ವೀಪವು ಕಟ್ಟಡ ಸಾಮಗ್ರಿಗಳಾದ ಎಂ- ಸ್ಯಾಂಡ್, ಜಲ್ಲಿ, ಬೋಲ್ಡರ್‌ಗಳಿಗೆ ಮಂಗಳೂರು ಬಂದರನ್ನೇ ಅವಲಂಬಿಸಿದೆ.
Related Articles
ಕೇರಳದಲ್ಲಿಯೂ ಎಂ-ಸ್ಯಾಂಡ್ ಲಭ್ಯವಿದೆ. ಆದರೆ ಅಲ್ಲಿ ದರ ಹೆಚ್ಚು. ಹಾಗಾಗಿ ಮಂಗಳೂರಿ ನಿಂದಲೇ ಪೂರೈಸಲಾಗುತ್ತಿದೆ ಎನ್ನುತ್ತಾರೆ ವಿವಿಧ ಸಾಮಗ್ರಿಗಳನ್ನು ಪೂರೈಕೆ ಮಾಡುವ ಉಸ್ಮಾನ್.
Advertisement
ರವಾನೆ ಹೇಗೆ?ಯಾಂತ್ರೀಕೃತ ಹಾಯಿದೋಣಿಗಳ (ಮೆಕ್ಯಾನೈಸ್ಡ್ ಸೈಲಿಂಗ್ ವೆಸೆಲ್ಸ್) ಮೂಲಕ ಸಾಮಗ್ರಿಗಳನ್ನು ಕಳುಹಿಸಲಾಗುತ್ತದೆ. ಅಂಡಮಾನ್‌ನ ಒಟ್ಟು 13 ದ್ವೀಪ ಸಮೂಹ ಪೈಕಿ 10ರಲ್ಲಿ ಜನವಸತಿ ಇದೆ. ಮಂಗಳೂರಿಗೆ ಹತ್ತಿರವಿರುವ ಆ್ಯಂಥ್ರೊಡ್ ಮತ್ತು ಕಿಲ್ತಾನ್ ದ್ವೀಪಗಳನ್ನು ತಲುಪಲು 24 ತಾಸು ಸಾಕು. ಇತರ ದ್ವೀಪಗಳಿಗೆ 36, 48 ತಾಸುಗಳು ಬೇಕು. ಲಕ್ಷದ್ವೀಪದಲ್ಲಿ ಮೀನು ಮತ್ತು ತೆಂಗಿನಕಾಯಿ ಮಾತ್ರವೇ ಸಿಗುತ್ತದೆ. ಮಂಗಳೂರಿನಿಂದ ಪ್ರತಿದಿನ 4-6 ದೋಣಿಗಳು ಅಗತ್ಯ ಸಾಮಗ್ರಿಗಳನ್ನು ಹೊತ್ತು ಸಾಗುತ್ತವೆ.
-ಗೌಸ್ ಆಲಿ, ಅಧಿಕಾರಿ, ಮಂಗಳೂರು ಹಳೆ ಬಂದರು – ಸಂತೋಷ್ ಬೊಳ್ಳೆಟ್ಟು