Advertisement

ತಾಲೂಕಿನ ಎಳನೀರಿಗೆ ಹೆಚ್ಚಿದ ಬೇಡಿಕೆ

01:29 PM May 27, 2019 | Team Udayavani |

ಚನ್ನರಾಯಪಟ್ಟಣ: ಮುಂಗಾರು ಪ್ರಾರಂಭವಾದರೂ ಬಿಸಿಲ ಬೇಗೆ ದಿನೇ ದಿನೇ ಹೆಚ್ಚುತ್ತಿರುವು ದರಿಂದ ತಾಲೂಕಿನ ಎಳನೀರಿಗೆ ಎಲ್ಲಿಲ್ಲದ ಬೇಡಿಕೆ ಬಂದಿದ್ದು ಹೊರ ಜಿಲ್ಲೆ ಹಾಗೂ ಹೊರ ರಾಜ್ಯಕ್ಕೆ ರವಾನಿಸಲಾಗುತ್ತಿದೆ.

Advertisement

ರಾಜ್ಯದ ಮೈಸೂರು, ಬೆಂಗಳೂರ‌ಲ್ಲದೇ ದೇಶದ ರಾಜ್ಯದಾನಿ ದೆಹಲಿ ಸೇರಿದಂತೆ ಹೊರ ರಾಜ್ಯಗಳಾದ ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ಗೋವಾ ರಾಜ್ಯಕ್ಕೆ ಚನ್ನರಾಯಪಟ್ಟಣದ ರೈತರು ಬೆಳೆದಿರುವ ಲಕ್ಷಾಂತರ ಎಳನೀರು ನಿತ್ಯ ಹತ್ತಾರು ಲಾರಿಯಲ್ಲಿ ರಫ್ತಾಗುತ್ತಿದೆ, ಇದರಿಂದ ಉತ್ತಮ ಎಳನೀರು ಬಿಡುವ ತೆಂಗಿನ ತೋಟದ ಮಾಲೀಕರ ಮೊಗದಲ್ಲಿ ಕೊಂಚ ಸಂತಸ ಕಾಣಲಾರಂಭಿಸಿದೆ.

ಮುಂಗಾರಿನಲ್ಲೂ ಬಿಸಿಲ ಬೇಗೆ: ಬಡವರ ಊಟಿ ಎಂದೇ ಖ್ಯಾತಿ ಪಡೆದಿರುವ ಹಾಸನ ಜಿಲ್ಲೆಯಲ್ಲಿ 38 ಡಿಗ್ರಿಗೂ ಹೆಚ್ಚಿನ ತಾಪಮಾನ ಇರುವುದರಿಂದ ಜಿಲ್ಲೆಯಲ್ಲಿ ತಾಲೂಕಿನ ಎಳನೀರಿಗೆ ಬಹಳ ಬೇಡಿಕೆ ಇದೆ. ತಾಲೂಕು ಅರೆಮಲೆನಾಡು ಪ್ರದೇಶ ಆಗಿರುವುದರಿಂದ ಎಳನೀರು ಕುಡಿಯಲು ತುಂಬಾ ಸವಿಯಾಗಿದ್ದು ದಣಿವಾರಿಸುವಲ್ಲಿ ನೈಸರ್ಗಿಕ ಪಾನೀಯದಲ್ಲಿ ಮೊದಲನೇ ಸ್ಥಾನದಲ್ಲಿದೆ.

ಕುಸಿದ ಅಂತರ್ಜಲ: ಬರಗಾಲ ಆವರಿಸಿರುವುದರಿಂದ ಅಂತರ್ಜಲ ಕುಸಿದಿದ್ದು, ಕೊಳವೆ ಬಾವಿಯಲ್ಲಿ ನೀರಿಲ್ಲದೇ ರೈತರು ತರಕಾರಿ ಹಾಗೂ ಇತರ ಬೆಳೆ ಬೆಳೆಯಲು ಸಾಧ್ಯವಾಗದೇ ಆರ್ಥಿಕವಾಗಿ ತೊಂದರೆ ಅನುಭವಿಸುತ್ತಿದ್ದಾರೆ. ಈ ವೆಳೆಯಲ್ಲಿ ತೆಂಗಿನ ತೋಟ ಹೊಂದಿರುವ ರೈತರು ತೆಂಗಿನ ಕಾಯಿ ಹಾಗೂ ಕೊಬ್ಬರಿಯಿಂದ ಹಣಗಳಿಸಿ ಕುಟುಂಬ ನಿರ್ವಹಣೆ ಮಾಡೋಣ ಎಂದರೆ ಬೆಲೆ ಸಲ್ಪಮಟ್ಟಿಗೆ ಕುಸಿದಿದೆ.

ತೋಟಕ್ಕೆ ಹೋಗಿ ಖರೀದಿ: ಈಗಾಗಲೇ ತೆಂಗಿನ ಮರದಲ್ಲಿನ ಕಾಯಿ ಕಿತ್ತು ಕೊಬ್ಬರಿಗಾಗಿ ಶೇಖರಣೆ ಮಾಡಿರುವ ರೈತರ ಸ್ಥಿತಿ ಹೇಳತೀರದು. ರೈತರು ಕುಟುಂಬ ನಿರ್ವಹಣೆ ಮಾಡಲು ಹಣ ಇಲ್ಲದೇ ತೆಂಗಿನ ಮರದಲ್ಲಿನ ಎಳನೀರು ಮಾರಾಟ ಮಾಡುತ್ತಿದ್ದಾರೆ. ಬೇಸಿಗೆ ರೀತಿ ಬಿಸಿಲಿನ ತಾಪ ಇರುವುದರಿಂದ ಎಳನೀರಿಗೆ ಬಂಪರ್‌ ಬೆಲೆ ಸಿಕ್ಕಿದೆ ಒಂದು ಎಳನೀರಿಗೆ ತೋಟದಲ್ಲಿಯೇ 13ರಿಂದ 15ರೂ. ನೀಡಿ ವರ್ತಕರು ಖರೀದಿಸುತ್ತಾರೆ.

Advertisement

ಕಲ್ಪತರು ತಾಲೂಕಿನಲ್ಲಿಯೇ ಒಂದು ಎಳನೀರಿಗೆ ಮಾರುಕಟ್ಟೆಯಲ್ಲಿ 25 ರಿಂದ 30 ರೂ. ಕೊಟ್ಟು ಸಾರ್ವಜನಿಕರು ದಾಹ ನೀಗಿಸಿಕೊಳ್ಳುತ್ತಿದ್ದಾರೆ. ಸ್ಥಳೀಯ ಮಾರುಕಟ್ಟೆಯಲ್ಲಿನ ಬೆಲೆ ಹಾಗೂ ಬಿಸಿಲಿನ ಝಳವನ್ನು ಮನಗಂಡಿರುವ ರೈತರು ತಮ್ಮ ತೋಟಕ್ಕೆ ಬಂದು ಎಳನೀರು ಖರೀದಿ ಮಾಡುವ ವರ್ತಕರಿಗೆ ಹೆಚ್ಚು ಹಣ ನೀಡುವಂತೆ ಬೇಡಿಕೆ ಇಡುತ್ತಿದ್ದಾರೆ. ಇದೇ ರೀತಿ ಬಿಸಿಲ ತಾಪಮಾನ ಹೆಚ್ಚಿದರೆ ತೋಟದಲ್ಲಿಯೇ 20 ರೂ. ನೀಡಿ ಎಳನೀರು ಕೊಳ್ಳುವ ಪರಿಸ್ಥಿತಿ ವರ್ತಕರದ್ದಾಗಿರುತ್ತದೆ.

● ಶಾಮಸುಂದರ್‌ ಕೆ. ಅಣ್ಣೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next