Advertisement

ಹಲಸಿನ ಹಣ್ಣಿಗೆ ಹೆಚ್ಚಾದ ಬೇಡಿಕೆ: ಬೆಳೆಗಾರರಲ್ಲಿ ಸಂತಸ

12:17 PM Jul 26, 2019 | Team Udayavani |

ಕೊರಟಗೆರೆ: ಗ್ರಾಮೀಣ ಭಾಗದಲ್ಲಿ ಅಲಕ್ಷ್ಯಕ್ಕೆ ಒಳಗಾಗಿದ್ದ ಹಲಸಿನ ಹಣ್ಣಿಗೆ ಉತ್ತಮ ಬೇಡಿಕೆ ಬಂದಿದ್ದು ಬೆಳಗಾರರಲ್ಲಿ ಸಂತಸ ಮೂಡಿಸಿದೆ. ತಾಲೂಕಿನ ಚನ್ನರಾಯನದುರ್ಗಾ ಹೋಬಳಿಯ ತೋವಿನಕೆರೆ ಸುತ್ತಮುತ್ತಲಿನ ಪ್ರದೇಶ ಹಾಗೂ ಗುಬ್ಬಿ ತಾಲೂಕಿನ ಚೇಳ್ಳೋರು ಗ್ರಾಮದ ಸುತ್ತಮುತ್ತ ಅತಿಹೆಚ್ಚು ಹಲಸಿನ ಮರಗಳಿವೆ. ಈ ಭಾಗದ ಯಾದವ ಸಮುದಾಯವರ ಪ್ರತಿ ಜಮೀನಿನಲ್ಲೂ ಬದುವಿನ ಮೇಲೆ ಹಲಸಿನ ಮರಗಳು ಕಾಣ ಸಿಗುತ್ತವೆ. ಆದರೆ, ಬೆಳೆಗಾರರು ಎಂದಿಗೂ ಈ ಹಲಸಿನ ಹಣ್ಣನ್ನು ಆರ್ಥಿಕ ಬೆಳೆ ಎಂದು ನಂಬಿ ಕೊಂಡಿರಲಿಲ್ಲ. ಪ್ರತಿ ವರ್ಷ ಶೇ.40 ಭಾಗ ಹಣ್ಣು ಗಳು ನೆಲಕ್ಕೆ ಬಿದ್ದು ಹಾಳಾಗುತ್ತಿದ್ದ ಹಣ್ಣುಗಳನ್ನು ಕಿತ್ತು ಸಂಬಂಧಿಗಳಿಗೆ ಹಾಗೂ ಪರಿಚಯಸ್ಥರಿಗೆ ಉಚಿತವಾಗಿ ಕೊಟ್ಟು ಸಂತೋಷ ಪಡುವುದೇ ಹೆಚ್ಚಾಗಿ ಕಂಡು ಬರುತ್ತಿತ್ತು.

Advertisement

ಔಷಧೀಯ ಗುಣ ಹೊಂದಿದೆ:ಆದರೆ, ಹಲಸಿನ ಹಣ್ಣುಗಳ ವಿಷಯದಲ್ಲಿ ಈಗ ಸನ್ನಿವೇಶ ಸಂಪೂರ್ಣವಾಗಿ ಬದಲಾಗಿದೆ. ಕಳೆದ 5 ವರ್ಷಗಳಿಂದ ಹಲಸಿನ ಹಣ್ಣು ಔಷಧಿಗುಣವುಳ್ಳ ಹಾಗೂ ಆರೋಗ್ಯಕ್ಕೆ ಪೂರಕವಾಗಿದೆ ಎಂದು ತಿಳಿಯುತ್ತಿದ್ದಂತೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಣ್ಣು ಗಳು ರಾಜ್ಯದ ವಿವಿಧ ಕಡೆ ಮತ್ತು ಹೊರ ರಾಜ್ಯ ಗಳನ್ನು ತಲುಪುತ್ತಿವೆ. ತೋವಿನಕೆರೆಗೆ ಬಂದು ಖರೀದಿಸುವ ಪ್ರಕ್ರಿಯೆಗಳು ಪ್ರಾರಂಭವಾಗಿವೆ. ಕೇರಳ, ಚೆನ್ನೈ ಉದ್ಯಮಿಗಳು ಭೇಟಿ ನೀಡಿ ಬೆಳೆಗಾರರ ಹಾಗೂ ದಲ್ಲಾಳಿಗಳ ಜೊತೆ ಮಾತುಕತೆ ನಡೆಸಿ ಖರೀದಿಯಲ್ಲಿ ತೊಡಗುತ್ತಿದ್ದಾರೆ.

ದಕ್ಷಿಣ ವಿಯೆಟ್ನಾಂ ನಿಂದ ಬಂದ ವಿಜ್ಞಾನಿ ವ್ಯಾನ್‌ ಟ್ರೇ ಸ್ಥಳೀಯ ಹಲಸಿನ ಬಗ್ಗೆ ಮಾಹಿತಿ ಪಡೆದು ಕೊಂಡಿದ್ದಾರೆ. ತೋವಿನಕೆರೆಯಲ್ಲಿ ಸಂಗ್ರಹಣೆ ಮಾಡಿದ ಹಲಸಿನ ಹಣ್ಣುಗಳು ಪ್ರತಿ ಬುಧವಾರ ನಡೆಯುವ ಮಧುಗಿರಿ ಸಂತೆಗೆ ಹೋಗುತ್ತವೆ. ಅಲ್ಲಿಗೆ ಆಂಧ್ರ ಪ್ರದೇಶದ ಹಿಂದೂಪುರ, ಅನಂತ ಪುರ, ಕರ್ನೂಲು, ಹೈದರಾಬಾದ್‌ ಸೇರಿದಂತೆ ಗಡಿ ಭಾಗದವರು ಬಂದು ಖರೀದಿ ಮಾಡುತ್ತಾರೆ. ವಿಶೇಷವೆಂದರೆ ಖರೀದಿದಾರರಲ್ಲಿ ಹೆಚ್ಚಿನವರು ಬೀದಿಗಳಲ್ಲಿ ಹಣ್ಣು ಬಿಡಿಸಿ ಮಾರಾಟ ಮಾಡುವವರೇ ಆಗಿದ್ದಾರೆ.

ಆಂಧ್ರದ ವ್ಯಾಪಾರಿಗಳು ಆಗಮನ: ಕೆಲ ಸ್ಥಳೀಯರು ರೈತರಿಂದ ಖರೀದಿಸಿ ಇಲ್ಲಿಂದ ಹಿಂದೂಪುರಕ್ಕೆ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಾರೆ. ಹಲವು ವರ್ಷಗಳಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದಾಬಸ್‌ಪೇಟೆ ಮಾರಾಟ ಗಾರರು ಬಂದು ಸ್ಥಳೀಯ ಮಧ್ಯವರ್ತಿಗಳ ನೆರವಿ ನಿಂದ ಉತ್ತಮ ಹಣ್ಣುಗಳನ್ನು ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಿದ್ದಾರೆ. ಅಕ್ಟೋಬರ್‌ನಿಂದ ಪ್ರಾರಂಭವಾಗಿ ಜನವರಿವರೆಗೂ ಪ್ರತಿ ದಿನ ಒಂದು ಟನ್‌ ಎಳೆಯ ಹಲಸಿನಕಾಯಿ ದೇಶದ ಬೇರೆ ಕಡೆಗಳಿಗೆ ಹೋಗುತ್ತದೆ. 300 ರಿಂದ 400 ವರೆಗೆ ಎಳೆಕಾಯಿಗಳು ಬಿಟ್ಟಿರುವ ಮರಗಳನ್ನು ಕರಡಿ ಕಾಟ ಎಂದು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಾರೆ. ಮಧ್ಯವರ್ತಿಗಳು ಕಿತ್ತು ತೂಕದ ಲೆಕ್ಕದಲ್ಲಿ ಹೊರ ರಾಜ್ಯಗಳಿಗೆ ಕಳುಹಿಸಿ ಉತ್ತಮ ಲಾಭ ಗಳಿಸುತ್ತಿದ್ದಾರೆ.

ಸಾಗಣೆ ಖರ್ಚು ಹೆಚ್ಚು: ತಾಲೂಕಿನ ತೋವಿನಕೆರೆ ಗ್ರಾಮದ ಸುತ್ತಮುತ್ತ ಹಲಸಿನ ಹಣ್ಣುಗಳು ಕಡಿಮೆ ಬೆಲೆಗೆ ದೊರೆ ಯುತ್ತದೆ. ಆದರೆ, ಕೀಳುವವರು, ಮರದಿಂದ ಕೆಳಗೆ ಇಳಿಸುವ ಕೂಲಿ ಖರ್ಚು, ಸಾಗಾಣಿಕೆ ಖರ್ಚುಗಳನ್ನು ಲೆಕ್ಕಹಾಕಿದರೆ ದುಬಾರಿ ಯಾಗುತ್ತದೆ. ಕೆಲವು ಸಲ ಉತ್ತಮ ಬೆಲೆ ಸಿಗುತ್ತದೆ. ಆಗ ಹಿಂದಿನ ನಷ್ಟ ಸರಿದೂಗಿಸಿ ಕೊಳ್ಳಬಹುದು ಎನ್ನುವ ಆಸೆಯಿಂದ ಹಲಸಿನ ಹಣ್ಣಿನ ವ್ಯಾಪಾರ ಮಾಡುತ್ತಿದ್ದೇನೆ ಎಂದು ತೋವಿನಕೆರೆ ಹಲಸಿನ ಹಣ್ಣಿನ ಖರೀದಿದಾರ ಮುಬಾರಕ್‌ ತಿಳಿಸಿದ್ದಾರೆ.

 

Advertisement

● ಪದ್ಮನಾಭ್‌

Advertisement

Udayavani is now on Telegram. Click here to join our channel and stay updated with the latest news.

Next