Advertisement

ದಕ್ಷಿಣ ಕನ್ನಡದಲ್ಲಿ ಹೋಂ ಸ್ಟೇ ನಿರ್ಮಾಣಕ್ಕೆ ಹೆಚ್ಚಿದ ಬೇಡಿಕೆ

10:51 PM Oct 11, 2019 | Team Udayavani |

ಮಂಗಳೂರು: ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳನ್ನು ಹೊಂದಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗ ಹೋಂ ಸ್ಟೇ ಪರಿಕಲ್ಪನೆಗೆ ಉತ್ತೇಜನ ಮತ್ತು ಬೇಡಿಕೆ ಉಂಟಾಗಿದೆ. 2 ವರ್ಷದ ಹಿಂದೆ ಕೇವಲ 2 ಹೋಂ ಸ್ಟೇಗಳಷ್ಟೇ ಇದ್ದ ಜಿಲ್ಲೆಯಲ್ಲಿ ಈಗ ಇರುವ ಹೋಂ ಸ್ಟೇಗಳ ಸಂಖ್ಯೆ 25. ಧರ್ಮಸ್ಥಳ ಮತ್ತು ಮೂಡುಬಿದಿರೆಗಳಲ್ಲಿ ತಲಾ 1, ಬಂಟ್ವಾಳ-ಬೆಳ್ತಂಗಡಿಗಳಲ್ಲಿ ತಲಾ 2 ಮತ್ತು ಮಂಗಳೂರಿನಲ್ಲಿ 19 ಅಧಿಕೃತ ಹೋಂ ಸ್ಟೇಗಳಿವೆ. ಈ ಪೈಕಿ 5 ಕಡಲ ತೀರದಲ್ಲಿವೆ.

Advertisement

ಕಳೆದ 3 ವರ್ಷಗಳಲ್ಲಿ ಜಿಲ್ಲೆಯಲ್ಲಿ ಪ್ರವಾಸಿಗರ ಸಂಖ್ಯೆಯೂ ಏರಿಕೆಯಾಗಿದೆ. 2016 -17ರಲ್ಲಿ 1 ಕೋಟಿ, 2017-18ರಲ್ಲಿ 1.2 ಕೋಟಿ, 2018-19ರಲ್ಲಿ 1.4 ಕೋಟಿ ಮತ್ತು 2019ರಲ್ಲಿ ಈಗಾಗಲೇ 1 ಕೋಟಿ ಪ್ರವಾಸಿಗರು ಬಂದು ಹೋಗಿದ್ದಾರೆ. ಬೀಚ್‌ ಹೋಂ ಸ್ಟೇಗಳಿಗೆ ಬೇಡಿಕೆ ಹೆಚ್ಚು.

ಪ್ರವಾಸೋದ್ಯಮ ಇಲಾಖೆಯಿಂದ ಪರವಾನಿಗೆ
ಹೋಂ ಸ್ಟೇ ಆರಂಭಿಸಲು ಪ್ರವಾಸೋದ್ಯಮ ಇಲಾಖೆ 5 ವರ್ಷಗಳಿಗೆ ಪರವಾನಿಗೆ ನೀಡುತ್ತದೆ. ಇದಕ್ಕೆ 500 ರೂ. ನೋಂದಣಿ ಶುಲ್ಕ ಪಾವತಿಸಬೇಕು. ಪ್ರವಾಸಿಗರಿಗೆ ನೀಡುವ ಕೊಠಡಿ ಕನಿಷ್ಠ 2, ಗರಿಷ್ಠ 5ರ ಮಿತಿಯಲ್ಲಿರಬೇಕು. ಪೊಲೀಸ್‌ ಇಲಾಖೆ, ಸ್ಥಳೀಯಾಡಳಿತ ಸಂಸ್ಥೆಗಳ ನಿರಾಕ್ಷೇಪಣ ಪತ್ರ ಆವಶ್ಯಕ. ಮಹಾನಗರ ಪಾಲಿಕೆ ವ್ಯಾಪ್ತಿಯಾದರೆ ಮಂಗಳೂರು ಪೊಲೀಸ್‌ ಆಯಕ್ತರು ಮತ್ತು ಪಾಲಿಕೆ, ಹೊರಗಿನದಾದರೆ ಎಸ್‌ಪಿ ಮತ್ತು ಗ್ರಾ.ಪಂ., ನಗರ ಸಭೆ, ಪುರಸಭೆಯಿಂದ ಎನ್‌ಒಸಿ ಬೇಕು.

ಯಾವುದೇ ಅನಪೇಕ್ಷಿತ ವಿದ್ಯಮಾನ, ವ್ಯವಹಾರಗಳಿಗೆ ಆಸ್ಪದ ನೀಡಬಾರದು. ಪ್ರತಿ ಪ್ರವಾಸಿಗರಿಂದ ಗುರುತು ಚೀಟಿ ಪಡೆದೇ ವಸತಿ ನೀಡಬೇಕು. ಹೋಂ ಸ್ಟೇಗೆ ಬರುವ ಅತಿಥಿಗಳ ವಿವರ ನೋಂದಣಿ ಪುಸ್ತಕ ಮತ್ತು ಗಣಕೀಕರಣಗೊಳಿಸಬೇಕು.

ಗ್ರಾಮೀಣ ಶೈಲಿಗೆ ಬೇಡಿಕೆ
ಕರಾವಳಿಗೆ ಬರುವ ಪ್ರವಾಸಿಗರು ಹೆಚ್ಚಾಗಿ ಗುತ್ತಿನ ಮನೆ ಸೇರಿದಂತೆ ಗ್ರಾಮೀಣ ಶೈಲಿಯ ಹೋಂ ಸ್ಟೇಗಳಲ್ಲಿ ಇರಲು ಇಷ್ಟಪಡುತ್ತಾರೆ. ತುಳುನಾಡಿನ ಪಾರಂಪರಿಕ ವಿನ್ಯಾಸದ ಹೋಂ ಸ್ಟೇಗಳಿಗೆ ಬೇಡಿಕೆ ಹೆಚ್ಚು.

Advertisement

ಕರಾವಳಿ ಪ್ರವಾಸೋದ್ಯಮಕ್ಕೆ ರಾಜ್ಯ ಸರಕಾರ ಹೆಚ್ಚಿನ ಉತ್ತೇಜನ ನೀಡುತ್ತಿದೆ. ಹೋಂ ಸ್ಟೇ ನಿರ್ಮಾಣಕ್ಕೆ ಹೆಚ್ಚಿನ ಮಂದಿ ಮುಂದೆ ಬರುತ್ತಿದ್ದಾರೆ. ಮತ್ತಷ್ಟು ಉತ್ತೇಜನ ನೀಡುವ ನಿಟ್ಟಿನಲ್ಲಿ ಸರಕಾರದ ವಲಯದಲ್ಲಿ ಚರ್ಚೆ ಮಾಡುತ್ತೇವೆ.
– ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಉಸ್ತುವಾರಿ ಸಚಿವ

ಹೋಂ ಸ್ಟೇ ಸೇರಿದಂತೆ ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿಗೆ ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ನದಿ ಅಳಿವೆ, ಬೋಟ್‌ ಹೌಸ್‌, ಧಾರ್ಮಿಕ ಕ್ಷೇತ್ರಗಳು, ಜಲ ಕ್ರೀಡೆಗಳು ಸೇರಿದಂತೆ ಇನ್ನಿತರ ವಲಯಗಳ ಬಗ್ಗೆ 2 ತಿಂಗಳಿನಲ್ಲಿ ಸಮಗ್ರ ಯೋಜನೆ ರೂಪಿಸುತ್ತೇವೆ. ಸಲಹೆ ಪಡೆಯುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದಲ್ಲಿ ಟೂರಿಸಂ ಟಾಸ್ಕ್ ಫೋರ್ಸ್‌ ರಚನೆ ಮಾಡಲಾಗುತ್ತದೆ.
– ಸಿ.ಟಿ. ರವಿ, ಪ್ರವಾಸೋದ್ಯಮ ಸಚಿವ

ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಹೊಸದಾಗಿ ಹೋಂ ಸ್ಟೇ ಆರಂಭಿಸಲು ಸದ್ಯ 30ಕ್ಕೂ ಹೆಚ್ಚು ಮಂದಿ ಮುಂದೆ ಬಂದಿದ್ದಾರೆ.
– ಸುಧೀರ್‌ ಗೌಡ, ದ.ಕ. ಜಿಲ್ಲಾ ಪ್ರವಾಸೋದ್ಯಮ ಸಮಾಲೋಚಕ

– ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next