Advertisement
ಸೋಂಕು ಹೆಚ್ಚಳವಾದ ಕಳೆದ ಎರಡು ವಾರಗಳಿಂದ ನಗರದ ಜನರು ದೊಡ್ಡ ಆಸ್ಪತ್ರೆಗಳಿಂದ ದೂರ ಸರಿದು ಗಲ್ಲಿ ಕ್ಲಿನಿಕ್‌ಗಳತ್ತ ಮುಖ ಮಾಡುತ್ತಿದ್ದಾರೆ. ಸಾಮಾನ್ಯ ದಿನಗಳಿಂತ ರೋಗಿಗಳ ಪ್ರಮಾಣ ಶೇ.30 ರಷ್ಟು ಹೆಚ್ಚಳವಾಗಿದೆ. ಇನ್ನೊಂದೆಡೆ ಕ್ಲಿನಿಕ್‌ಗಳಿಗೆ ಹೋಂ ಐಸೋಲೇಷನ್ ಇರುವ ಸೋಂಕಿತರ ಭೇಟಿ ಮತ್ತು ಮುಂಜಾಗ್ರತಾ ಕ್ರಮಪಾಲನೆಯಾಗದ ಹಿನ್ನೆಲೆ ವೈದ್ಯರು ಕೂಡಾ ಕೊರೊನಾ ಸೋಂಕಿತರಾಗುತ್ತಿದ್ದಾರೆ.
Related Articles
Advertisement
ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ; ಮಾತ್ರೆ , ಚೀಟಿಗೆ ಸೀಮಿತ:
ಕೆಲ ಕ್ಲಿನಿಕ್‌ಗಳಲ್ಲಿ ವೈದ್ಯರು ಕೋವಿಡ್ ಭಯದಿಂದ ರೋಗಿಗಳನ್ನು ಮುಟ್ಟದೆ ದೂರದಲ್ಲಿಯೇ ಕೂರಿಸಿ ಮಾತನಾಡಿಸಿ ಮಾತ್ರೆ, ಔಷಧ ಚೀಟಿ ಬರೆದು ಕಳುಹಿಸುತ್ತಿದ್ದಾರೆ. ಅನೇಕ ಕ್ಲಿನಿಕ್‌ಗಳಲ್ಲಿ ಚುಚ್ಚುಮದ್ದು ಬಂದಾಗಿದೆ. ಸಣ್ಣಪುಟ್ಟ ಗಾಯದ ಡೆಸ್ಸಿಂಗ್ ಇಲ್ಲ. ಹೊರ ರೋಗಿಗಳು ಸೂಕ್ತ ಚಿಕಿತ್ಸೆ ಇಲ್ಲದೆ ಅಲೆದಾಡುತ್ತಿದ್ದಾರೆ.
ಸೋಂಕಿನ ಲಕ್ಷಣ ಇದ್ದರೂ ಪರೀಕ್ಷೆಗೆ ಒಪ್ಪಲ್ಲ :
ಸದ್ಯ ಸೋಂಕು ಸಮುದಾಯಕ್ಕೆ ಹರಡಿರುವುದಾಗಿ ಸೋಂಕು ತಜ್ಞರು ತಿಳಿಸಿದ್ದಾರೆ. ಬರುತ್ತಿರುವ 10 ರೋಗಿಗಳ ಪೈಕಿ 7 ಮಂದಿಗೆ ಸೋಂಕಿನ ಲಕ್ಷಣಗಳಿರುತ್ತವೆ. ಆದರೆ, ಸೋಂಕು ತಪಾಸಣೆ ಮಾಡಿಸಲು ಹಿಂದೇಟು ಹಾಕುತ್ತಾರೆ. ಸಮೀಪದ ಬಿಬಿಎಂಪಿ ಆರೋಗ್ಯ ಕೇಂದ್ರ ಅಥವಾ ಖಾಸಗಿ ಪ್ರಯೋಗಾಲಯಕ್ಕೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಿ ಎಂದರೂ ಮಾತ್ರೆ ನೀಡಿ ಎರಡು ದಿನ ಕಾದುನೋಡೋಣ ಎಂದು ಪರೀಕ್ಷೆಗೆ ಹಿಂದೇಟು ಹಾಕುತ್ತಾರೆ ಎಂದು ಗಂಗಾನಗರ ವೈದ್ಯ ಡಾ.ರಮೇಶ್ ಬೇಸರ ವ್ಯಕ್ತಪಡಿಸಿದ್ದಾರೆ.
ವೈದ್ಯರಿಗೆ ಕೋವಿಡ್ ಕಾಟ :
ಕ್ಲಿನಿಕ್ ಬರುವ ರೋಗಿಗಳ ಪೈಕಿ ಬಹುತೇಕರು ಸೋಂಕು ಲಕ್ಷಣ ಹೊಂದಿರುತ್ತಾರೆ. ಹೋಂ ಐಸೋಲೇಷನ್ ಇದ್ದವರು ಕೂಡಾ ಸಾಮಾನ್ಯ ರೋಗಿಗಳಂತೆ ಭೇಟಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಿಂದಾಗಿ ವೈದ್ಯರು ಕೂಡಾ ಸೋಂಕಿತರಾಗುತ್ತಿ ದ್ದಾರೆ. “ಸದ್ಯ ನಗರದಲ್ಲಿ 18 ಸಾವಿರಕ್ಕೂ ಅಧಿಕ ಐಎಂಎ ವೈದ್ಯರಿದ್ದಾರೆ. ಕ್ಲಿನಿಕ್‌ಗಳಿಗೆ ಆಗಮಿಸುವ ಸೋಂಕಿತರು ಮತ್ತು ಸೋಂಕು ಲಕ್ಷಣ ಇದ್ದವರಿಗೆ ಚಿಕಿತ್ಸೆ ನೀಡಿ ಅನೇಕ ವೈದ್ಯರು ಸೋಂಕು ತಗುಲಿಸಿ ಕೊಂಡಿದ್ದಾರೆ. ಚಿಕ್ಕ ಕ್ಲಿನಿಕ್ ನಡೆಸುವ ವೈದ್ಯರಿ ಗೆ ನಿತ್ಯ ಪಿಪಿಇ ಕಿಟ್ ಖರೀದಿಸುವ ಆರ್ಥಿಕ ಶಕ್ತಿ ಇರುವುದಿಲ್ಲ. ನಾಲ್ವರಲ್ಲಿ ಒಬ್ಬ ಕ್ಲಿನಿಕ್ ವೈದ್ಯ ಈ ಬಾರಿ ಸೋಂಕಿತರಾಗಿದ್ದಾರೆ ಎಂದು ಭಾರತೀಯ ವೈದ್ಯರ ಸಂಘ (ಐಎಂಎ) ಮಕ್ಕಳ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಡಾ.ಎಸ್. ಶ್ರೀನಿವಾಸ್ ಉದಯವಾಣಿಗೆ ತಿಳಿಸಿದ್ದಾರೆ.
ಬರುತ್ತಿರುವವರಲ್ಲಿ ಭಯವೇ ಹೆಚ್ಚು! :
ಆರ್.ಟಿ ನಗರದ ಪಾಷಾ ಕ್ಲಿನಿಕ್ ವೈದ್ಯ ಅಲೀಂ ಪಾಷಾ ಹೇಳುವಂತೆ, ಕ್ಲಿನಿಕ್‌ಗಳಿಗೆ ತಪಾಸಣೆಗೆ ಬರುತ್ತಿರುವ ರೋಗಿಗಳಲ್ಲಿ ಕೋವಿಡ್ ಸೋಂಕಿನ ಭಯವೇ ಹೆಚ್ಚಿದೆ. ಅನೇಕರು ನಮ್ಮ ಸಂಬಂಧಿಗೆ ಕೋವಿಡ್ ಪಾಸಿಟಿವ್ ಬಂದಿತ್ತು. ನನಗೂ ತಲೆ ನೋವು, ಜ್ವರ ಆರಂಭವಾಗಿದೆ ಎನ್ನುತ್ತಾರೆ. ಸೋಂಕಿನ ಭಯದಿಂದ ರಕ್ತದೊತ್ತಡ, ಮಧುಮೇಹ ಹೆಚ್ಚಿಸಿಕೊಂಡವರು ಹಾಗೂ ಕೋವಿಡ್ ರೋಗನಿರೋಧಕ ಶಕ್ತಿ ಹೆಚ್ಚಿಸಲು ಆಹಾರಪದ್ಧತಿ ವ್ಯತ್ಯಯ ಮಾಡಿಕೊಂಡು ಆರೋಗ್ಯ ಏರುಪೇರಾದ ರೋಗಿಗಳು ಕ್ಲಿನಿಕ್‌ಗಳಿಗೆ ಆಗಮಿಸುತ್ತಿದ್ದಾರೆ.
ಮುಂಜಾಗ್ರತಾ ಮರೀಚಿಕೆ :
ಬಹುತೇಕ ಕ್ಲಿನಿಕ್‌ಗಳಲ್ಲಿ ಕೋವಿಡ್ ಮುಂಜಾಗ್ರತಾ ಕ್ರಮ ಪಾಲನೆಯಾಗುತ್ತಿಲ್ಲ. ಬಹುತೇಕ ಕ್ಲಿನಿಕ್‌ಗಳು ಚಿಕ್ಕ ಕೊಠಡಿಗಳಲ್ಲಿ ನಡೆಯುತ್ತಿದ್ದು, ಇಲ್ಲಿಗೆ ಬರುವ ರೋಗಿಗಳ ನಡುವೆ ಸಾಮಾಜಿಕ ಅಂತರ ಪಾಲನೆಯಾಗುತ್ತಿಲ್ಲ. ಸದ್ಯ ಕ್ಲಿನಿಕ್ ಬರುವವರ ಸಂಖ್ಯೆ ಹೆಚ್ಚಳವಾಗಿರುವ ಹಿನ್ನೆಲೆ ಒಂದೇ ಕೊಠಡಿಯಲ್ಲಿ 10 ರಿಂದ 15 ಮಂದಿ ಕುಳಿತಿರುತ್ತಾರೆ. ಇನ್ನು ವೈದ್ಯರು ಕೂಡಾ ಸ್ವಯಂರಕ್ಷಣೆಯನ್ನು ಮರೆತಂತಿದ್ದು, ಪಿಪಿಇ ಕಿಟ್ ಧರಿಸದೇ ರೋಗಿಗಳನ್ನು ತಪಾಸಣೆ ಮಾಡುತ್ತಿದ್ದಾರೆ. ರೋಗಿಯೊಬ್ಬ ಬಳಸಿದ ಸ್ಥಳವನ್ನುಸ್ಯಾನಿಟೈಸರ್‌ನಿಂದ ಸ್ವತ್ಛಗೊಳಿಸುತ್ತಿಲ್ಲ. ಈ ಮೂಲಕ ಸೋಂಕು ಉಲ್ಬಣಕ್ಕೆ ಕ್ಲಿನಿಕ್‌ಗಳೇ ದಾರಿಯಾಗುತ್ತಿವೆ.
ಸೋಂಕು ದೃಢಪಟ್ಟು ಹೋಂ ಐಸೋಲೇಷನ್‌ನಲ್ಲಿರುವವರು ಸುಳ್ಳು ಹೇಳಿಕೊಂಡು ಬಂದು ಚಿಕಿತ್ಸೆ ಪಡೆಯುತ್ತಾರೆ. ಪರೀಕ್ಷೆ ಮಾಡಿಸಿಕೊಳ್ಳಿ ಎಂದರೂ ಒಪ್ಪುವುದಿಲ್ಲ. ನಾವು ರೋಗಿಗಳ ನಂಬಿ ಚಿಕಿತ್ಸೆ ನೀಡುತ್ತೇವೆ. ನನ್ನನ್ನು ಸೇರಿದಂತೆ ಕ್ಲಿನಿಕ್ ಸಹಾಯಕ ಸಿಬ್ಬಂದಿಗೆ ಸೋಂಕು ತಗುಲಿತ್ತು. -ಅಲೀಂ ಪಾಷಾ, ಕ್ಲಿನಿಕ್ ವೈದ್ಯ
ಕೋವಿಡ್ ಹೆಚ್ಚಳದಿಂದ ಸಾಕಷ್ಟು ಜನ ಸಣ್ಣಪುಟ್ಟ ಕ್ಲಿನಿಕ್ ಅವಲಂಭಿಸಿದ್ದಾರೆ.ಅಲ್ಲಿನ ವೈದ್ಯರು ಜೀವಪಣಕ್ಕಿಟ್ಟು ಚಿಕಿತ್ಸೆ ನೀಡುತ್ತಿದ್ದಾರೆ. ಕಳೆದ ಬಾರಿಯಂತೆ ಈಬಾರಿಯೂ ಕ್ಲಿನಿಕ್ ವೈದ್ಯರಿಗೆ ಸರ್ಕಾರವು ಕೋವಿಡ್ ವಿಮೆ ನೀಡಬೇಕು. – ಡಾ.ಎಸ್.ಶ್ರೀನಿವಾಸ, ಐಎಂಎ, ಮಕ್ಕಳ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ
-ಜಯಪ್ರಕಾಶ್ ಬಿರಾದಾರ್