Advertisement
ಕೇಂದ್ರ ಸರಕಾರ ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆ ಅಡಿಯಲ್ಲಿ ದೇಶಾದ್ಯಂತ ರೈತ ಉತ್ಪಾದಕ ಸಂಸ್ಥೆಗಳನ್ನು ರಚಿಸಿ ಉತ್ತೇಜನ ನೀಡಲಾಗುತ್ತಿದ್ದು, ರಾಜ್ಯಕ್ಕೆ ಹಂಚಿಕೆಯಾಗಿರುವ 192 ಎಫ್ಪಿಒಗಳ ರಚನೆ ಈಗಾಗಲೇ ಪೂರ್ಣಗೊಂಡಿದ್ದು, ಹೆಚ್ಚುವರಿಯಾಗಿ ಇನ್ನೂ 150 ಎಫ್ಪಿಒಗಳಿಗೆ ಬೇಡಿಕೆ ಇಡಲಾಗಿದ್ದು, ಶೀಘ್ರವೇ ರಾಜ್ಯಕ್ಕೆ ಹೊಸ ಎಫ್ಪಿಒ ದೊರೆಯಲಿವೆ.
Related Articles
Advertisement
ರಾಜ್ಯದಲ್ಲಿ ಕೇಂದ್ರ ಸರಕಾರ ನೀಡುವ ಎಫ್ ಪಿಒಗಳ ಜತೆಗೆ ರಾಜ್ಯ ಸರಕಾರವೂ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ 750 ಅಮೃತ ಎಫ್ಪಿಒಗಳ ರಚನೆಗೆ ಮುಂದಾಗಿದ್ದು, ಪ್ರತಿ ವರ್ಷ 250 ಎಫ್ಪಿಒಗಳ ಸ್ಥಾಪನೆಗೆ ಗುರಿ ನಿಗದಿಪಡಿಸಲಾಗಿದ್ದು, ಈಗಾಗಲೇ 324 ಎಫ್ಪಿಒಗಳ ರಚನೆ ಮಾಡಲಾಗಿದೆ. ಪ್ರಸ್ತುತ ರಾಜ್ಯದಲ್ಲಿ 1096 ಎಫ್ಪಿಒಗಳ ರಚನೆ ಮಾಡಲಾಗಿದೆ.
5 ವರ್ಷ ಕೇಂದ್ರದ ಬೆಂಬಲ :
ರೈತ ಉತ್ಪಾದಕ ಸಂಸ್ಥೆ ಸ್ಥಾಪಿಸಲು ಕೇಂದ್ರ ಸರಕಾರ ಐದು ವರ್ಷಗಳವರೆಗೆ ಸುಮಾರು 50 ಲಕ್ಷ ರೂ.ಗಳವರೆಗೂ ಎಲ್ಲ ರೀತಿಯ ಸಹಾಯಧನ ನೀಡುತ್ತದೆ. ಸಂಸ್ಥೆಯ ಕಚೇರಿ ಸ್ಥಾಪನೆ, ಬಾಡಿಗೆ, ಸಿಬಂದಿಗಳ ಸಂಬಳ, ಕಚೇರಿಗೆ ಬೇಕಾಗುವ ಪೀಠೊಪಕರಣ ಸೇರಿ ಅಗತ್ಯ ಎಲ್ಲ ಸೌಕರ್ಯಗಳನ್ನು ಮಾಡಿಕೊಳ್ಳಲು ಕೇಂದ್ರ ಸರಕಾರವೇ ನೆರವು ನೀಡುತ್ತಿದೆ. ರಾಜ್ಯ ಸರಕಾರದ ಯೋಜನೆ ಅಡಿ ಆರಂಭವಾಗುವ ಎಫ್ಪಿಒಗಳಿಗೆ ರಾಜ್ಯ ಸರಕಾರ 30 ಲಕ್ಷ ರೂ. ಸಹಾಯಧನ ನೀಡಲಿದೆ.
ರೈತ ಮೋರ್ಚಾದಿಂದ ಜಾಗೃತಿ :
ರಾಜ್ಯದಲ್ಲಿ ಆರಂಭದಲ್ಲಿ ಎಫ್ಪಿಒಗಳ ಸ್ಥಾಫನೆ ಮಾಡಿಕೊಳ್ಳುವಂತೆ ರೈತರಿಗೆ ಮನವಿ ಮಾಡಿದ್ದರೂ, ಸರಿಯಾದ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಬಿಜೆಪಿ ರೈತ ಮೋರ್ಚಾ ಪ್ರತಿ ಜಿಲ್ಲೆಗಳಿಗೂ ತೆರಳಿ ರೈತರಿಗೆ ಈ ಯೋಜನೆಯ ಪ್ರಯೋಜನಗಳನ್ನು ತಿಳಿಸಿ, ಕಾರ್ಯಕರ್ತರ ಮೂಲಕ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿ, ಎಫ್ಪಿಒಗಳ ಸ್ಥಾಪನೆಗೆ ರೈತರು ಆಸಕ್ತಿ ತೋರುವಂತೆ ಮಾಡಿದ್ದಾರೆ.
ರಾಜ್ಯದಲ್ಲಿ ಎಫ್ಪಿಒಗಳ ಮೂಲಕ ಮಾರಾಟವಾಗುವ ಎಲ್ಲ ಉತ್ಪನ್ನಗಳಿಗೂ ಏಕ ರೂಪದ ಬ್ರ್ಯಾಂಡ್ ಮತ್ತು ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಬ್ರ್ಯಾಂಡ್ ಹೆಸರು ಮತ್ತು ಲಾಂಛನ ರೂಪಿಸಲು ಸಾರ್ವಜನಿಕರಿಂದ ಸ್ಪರ್ಧೆಗೆ ಆಹ್ವಾನಿಸಿದ್ದು, ಸೂಕ್ತ ಬ್ರ್ಯಾಂಡ್ ಹೆಸರು ಮತ್ತು ಲಾಂಛನ ಮೂಲಕ ಹೆಚ್ಚಿನ ಮಾರುಕಟ್ಟೆ ಒದಗಿಸಲು ಸರಕಾರ ಪ್ರಯತ್ನ ನಡೆಸಿದೆ.
ರೈತರ ಉತ್ಪನ್ನಗಳಿಗೆ ಸರಿಯಾದ ಪ್ಯಾಕಿಂಗ್ ಮಾಡಿ, ಬ್ರ್ಯಾಂಡ್ ಮಾಡಿ ಮಾರಿದರೆ, ಅವರ ಆದಾಯವೂ ಹೆಚ್ಚಾಗುತ್ತದೆ. ರಾಜ್ಯದಲ್ಲಿ ಎಫ್ ಪಿಒ ಗಳ ಸ್ಥಾಪನೆಗೆ ರೈತರು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಇನ್ನೂ ಹೆಚ್ಚು ಎಫ್ಪಿಒಗಳ ಸ್ಥಾಪನೆ ಸರಕಾರ ಅಗತ್ಯ ಸಹಾಯ ಮಾಡಲಿದೆ.-ಬಿ.ಸಿ. ಪಾಟೀಲ್, ಕೃಷಿ ಸಚಿವ