ಕಲಬುರಗಿ: ಮಹಾಮಾರಿ ಕೋವಿಡ್ ಸೋಂಕಿನಿಂದ ರಕ್ಷಣೆ ಹೊಂದಲು ಜಿಲ್ಲೆಯಲ್ಲಿ ಇದುವರೆಗೆ ಐದು ಸಾವಿರಕ್ಕೂ ಹೆಚ್ಚು ಆರೋಗ್ಯ ಸಿಬ್ಬಂದಿ ಲಸಿಕೆ ಪಡೆದಿದ್ದಾರೆ. ಇವರಲ್ಲಿ ಯಾವುದೇ ರೀತಿಯ ಗಂಭೀರವಾದ ಅಡ್ಡ ಪರಿಣಾಮ ಕಂಡುಬಾರದ ಹಿನ್ನೆಲೆಯಲ್ಲಿ ಲಸಿಕೆ ಪಡೆಯುವವರ ಬೇಡಿಕೆ ಹೆಚ್ಚಾಗಿದೆ. ಕಳೆದ ಹತ್ತು ದಿನಗಳಲ್ಲಿ ಆರು ಸಾವಿರಕ್ಕೂ ಹೆಚ್ಚು ಆರೋಗ್ಯ ಸಿಬ್ಬಂದಿ ಲಸಿಕೆ ಪಡೆಯಲು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ.
ಮೊದಲ ಹಂತದ ಲಸಿಕೆ ಪಡೆಯಲು 11,315 ಸರ್ಕಾರಿ, 10,459 ಖಾಸಗಿ ಜನರು ಸೇರಿ ಒಟ್ಟು 21,774ಆರೋಗ್ಯ ಸಿಬ್ಬಂದಿ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದರು. ಈಗ ಈ ಸಂಖ್ಯೆ 28,386ಕ್ಕೆ ಏರಿಕೆಯಾಗಿದೆ. ಜ.16ರಿಂದ ಕೋವಿಡ್ ಲಸಿಕೆ ವಿತರಣೆ ಆರಂಭಿಸಲಾಗಿದ್ದು,ಆರಂಭದ ಲಸಿಕೆಯನ್ನು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರನ್ನು ಒಳಗೊಂಡು ಸರ್ಕಾರಿ ವಲಯದ ಆರೋಗ್ಯ ಸಿಬ್ಬಂದಿಗೆ ನೀಡಲಾಗಿದೆ. ವಾರದಲ್ಲಿ ಸೋಮವಾರ, ಬುಧ ವಾರ, ಶುಕ್ರವಾರದಂತೆ ಲಸಿಕೆಕೊಡಲಾಗಿದ್ದು, ಜ.25ರ ವರೆಗೆ ಒಟ್ಟು 5,350 ಜನ ಆರೋಗ್ಯ ಸಿಬ್ಬಂದಿ ಲಸಿಕೆ ಪಡೆದಿದ್ದಾರೆ.
ಜಿಮ್ಸ್ ಆಸ್ಪತ್ರೆ ಮತ್ತು ಜಿಮ್ಸ್ ವೈದ್ಯಕೀಯ ಕಾಲೇಜು, ತಾಲೂಕು ಆಸ್ಪತ್ರೆಗಳು, ನಗರ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿ ಒಟ್ಟು 137 ಕೇಂದ್ರಗಳಲ್ಲಿ ಸರ್ಕಾರಿ ಸಿಬ್ಬಂದಿಗೆ ಲಸಿಕೆ ನೀಡಲಾಗಿದೆ. ಬುಧವಾರದಿಂದ ಖಾಸಗಿ ಆರೋಗ್ಯ ಸಿಬ್ಬಂದಿ ಲಸಿಕೆ ಪಡೆಯಲು ಶುರು ಮಾಡಿದ್ದಾರೆ.
ಯುನೈಟೆಡ್ ಆಸ್ಪತ್ರೆ, ಬಸವೇಶ್ವರ ಆಸ್ಪತ್ರೆ, ಚಿರಾಯು ಆಸ್ಪತ್ರೆ, ಕೆಬಿಎನ್ ಆಸ್ಪತ್ರೆ, ಬಹಮನಿ ಆಸ್ಪತ್ರೆ ಸೇರಿ 10 ಕೇಂದ್ರಗಳಲ್ಲಿ ಖಾಸಗಿ ಆರೋಗ್ಯ ಕಾರ್ಯಕರ್ತರು ಕೋವಿಡ್ ಲಸಿಕೆ ಪಡೆಯುತ್ತಿದ್ದಾರೆ. ಲಸಿಕೆ ಪಡೆದ ಆರಂಭದಲ್ಲಿ ಕೆಲವರಲ್ಲಿ ಸಣ್ಣ ಪ್ರಮಾಣದ ತಲೆ ನೋವು, ಮೈ-ಕೈ ನೋವು ಮತ್ತು ಜ್ವರದಂತಹ ಅನುಭವವಾಗಿತ್ತೇ ಹೊರತು ಬೇರೆ ಯಾವುದೇ ಗಂಭೀರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿಲ್ಲ ಎನ್ನುತ್ತಾರೆ ಲಸಿಕೆ ಪಡೆದ ವಾರಿಯರ್ಸ್ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು. ಕೋವಿಡ್ ದಿಂದ ರಕ್ಷಣೆ ಪಡೆ ಯುವ ನಿಟ್ಟಿನಲ್ಲಿ ಲಸಿಕೆ ನೀಡ ಲಾಗುತ್ತಿದೆ. ಲಸಿಕೆ ಹೊಸದಾಗಿರುವ ಪರಿಣಾಮ ಆರಂಭದಲ್ಲಿ ಕೆಲವರು ಹಿಂಜರಿಯವುದು ಕಾಣುತ್ತಿತ್ತು. ನಾವು ಯಾರಿಗೂ ಒತ್ತಾಯವಾಗಿ ಲಸಿಕೆ ನೀಡುತ್ತಿಲ್ಲ.
ಇದನ್ನೂ ಓದಿ:“ಆತ್ಮ ಬರ್ಬಾದ್” ಬಜೆಟ್ ಘೋಷಿಸಿದ್ದಾರೆ ನಿರ್ಮಲಾ : ಸಿದ್ದರಾಮಯ್ಯ
ಲಸಿಕೆಯಿಂದ ಯಾವ ಅಡ್ಡ ಪರಿಣಾಮವೂ ಇಲ್ಲ ಎನ್ನುವ ಅರಿವು ಮಾಡಿಸಲಾಗುತ್ತಿದೆ.ಇದನ್ನು ಮನಗಂಡು ಹಲವರು ತಾವೇ ಮುಂದೆ ಬಂದು ಲಸಿಕೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಾಜಶೇಖರ ಮಾಲಿ ಮಾಹಿತಿ ತಿಳಿಸಿದ್ದಾರೆ.