Advertisement

ಬೆಂವಿವಿ ದೂರ ಶಿಕ್ಷಣಕ್ಕೆ ಹೆಚ್ಚಿದ ಬೇಡಿಕೆ

11:57 AM Nov 22, 2017 | Team Udayavani |

ಬೆಂಗಳೂರು: ಮೈಸೂರಿನ ರಾಜ್ಯ ಮುಕ್ತ ವಿಶ್ವವಿದ್ಯಾಲಯವು ಯುಜಿಸಿ ಮಾನ್ಯತೆ ಪಡೆಯಲು ವಿಫ‌ಲವಾಗಿದ್ದರಿಂದ ಬೆಂಗಳೂರು ವಿಶ್ವವಿದ್ಯಾಲಯ ಅಂಚೆ ತೆರಪು ಹಾಗೂ ದೂರ ಶಿಕ್ಷಣ ನಿರ್ದೇಶನಾಲಯದ ವಿವಿಧ ಕೋರ್ಸ್‌ಗಳಿಗೆ ಈಗ ಬೇಡಿಕೆ ಹೆಚ್ಚಾಗಿದೆ.

Advertisement

ಉದ್ಯೋಗ ಅಥವಾ ಇನ್ನಿತರೇ ಒತ್ತಡದಿಂದ ಪಿಯುಸಿ ನಂತರದ ಶಿಕ್ಷಣ ಪಡೆಯಲು ಸಾಧ್ಯವಾಗದ ಅನೇಕರು ಉನ್ನತ ಶಿಕ್ಷಣ ಮುಂದುವರಿಸಲು ಸಹಜವಾಗಿಯೇ ಅಂಚೆ ತೆರಪಿನ ಕೋರ್ಸ್‌ಗಳ ಮೊರೆ ಹೋಗುತ್ತಾರೆ. ಕಲಾ ಮತ್ತು ವಾಣಿಜ್ಯ ವಿಭಾಗದ ಪದವಿ ಸ್ನಾತಕೋತ್ತರ ಪದವಿಯನ್ನು ಎಲ್ಲಾ ವಿಶ್ವವಿದ್ಯಾಲಯದ ಅಂಚೆತೆರಪಿನ ಹಾಗೂ ದೂರಶಿಕ್ಷಣ ನಿರ್ದೇಶನಾಲಯದಿಂದ ನೀಡಲಾಗುತ್ತದೆ.

ಇದರ ಜತೆಗೆ ರಾಜ್ಯ ಸರ್ಕಾರ ದೂರ ಶಿಕ್ಷಣದ ಮೂಲಕವೇ ಪದವಿ, ಸ್ನಾತಕೋತ್ತರ ಪದವಿ ಪಡೆಯುವವರ ಅನುಕೂಲಕ್ಕಾಗಿ ಮೈಸೂರಿನಲ್ಲಿ ರಾಜ್ಯ ಮುಕ್ತ ವಿಶ್ವವಿದ್ಯಾಲಯ ತೆರೆದಿದೆ. 2013ರ ನಂತರ ಮೈಸೂರಿನ ಕೆಎಸ್‌ಒಯು ಕೆಲವೊಂದು ಕೋರ್ಸ್‌ಗಳಿಗೆ ಯುಜಿಸಿ ಮಾನ್ಯತೆ ಪಡೆಯಲು ಸಂಪೂರ್ಣ ವಿಫ‌ಲವಾಗಿದೆ.

ಇದೇ ಕಾರಣದಿಂದ ಬೆಂಗಳೂರು ವಿವಿಯ ಅಂಚೆ ತೆರಪು ಹಾಗೂ ದೂರ ಶಿಕ್ಷಣ ನಿರ್ದೇಶನಾಲಯದಿಂದ ನೀಡುವ ಬಿ.ಎ, ಬಿ.ಕಾಂ, ಬಿಬಿಎ ಹಾಗೂ ಅರ್ಥಶಾಸ್ತ್ರ, ಇತಿಹಾಸ, ಇಂಗ್ಲಿಷ್‌ ಮೊದಲಾದ ವಿಷಯದ ಎಂ.ಎ, ಎಂ.ಕಾಂ ಜತೆಗೆ ಕೆಲವೊಂದು ಡಿಪ್ಲೊಮಾ ಕೋರ್ಸ್‌ಗೆ ಬೇಡಿಕೆ ಹೆಚ್ಚಿದೆ. 

ಇಲ್ಲೂ ವಿಳಂಬವಾಗಿತ್ತು: 2017-18 ನೇ ಸಾಲಿಗೆ ಮಾನ್ಯತೆ ಪಡೆಯಬೇಕಿರುವ ಬೆಂವಿವಿ ದೂರ ಶಿಕ್ಷಣ ಸಂಸ್ಥೆಯ ಸೆ.23ರೊಳಗೆ ಯುಜಿಸಿಗೆ ಅಗತ್ಯ ದಾಖಲೆ ಸಲ್ಲಿಸಬೇಕಿತ್ತು. 2016-17ನೇ ಸಾಲಿನ ಪ್ರವೇಶಾತಿಯ ದತ್ತಾಂಶ, ಅಧ್ಯಯನ ಕೇಂದ್ರಗಳ ಮಾಹಿತಿ, ಸಿಬ್ಬಂದಿ ಮಾಹಿತಿ, ಮುಂದಿನ ಕಾರ್ಯಯೋಜನೆಗಳು ಹಾಗೂ ಹೊಸ ಕೋರ್ಸ್‌ಗಳ ಅವಶ್ಯಕತೆಯ ಬಗ್ಗೆ ಮಾಹಿತಿ ನಿಗದಿತ ಸಮಯದಲ್ಲಿ ನೀಡಬೇಕಿತ್ತು.

Advertisement

ಹಿಂದಿನ ನಿರ್ದೇಶಕರ ನಿವೃತ್ತಿಯಿಂದಾಗಿ ಸ್ವಲ್ಪ ವಿಳಂಬವಾಗಿತ್ತು. ಆನಂತರ ಎಲ್ಲಾ ಮಾಹಿತಿಗಳನ್ನು ಯುಜಿಸಿಗೆ ಒಪ್ಪಿಸಿ, 2017-18ನೇ ಸಾಲಿಗೆ ಅನುಮತಿ ಪಡೆಯಲಾಗಿದೆ. ಪ್ರತಿ ವರ್ಷ ಜುಲೈನಲ್ಲಿ ಪ್ರವೇಶ ಪ್ರಕ್ರಿಯೆ ನಡೆಯುತ್ತದೆ. ಯುಜಿಸಿ ಮಾನ್ಯತೆ ಹಿಂಪಡೆದಿದ್ದರಿಂದ 2016-17ನೇ ಸಾಲಿನ ಪ್ರವೇಶ ಪ್ರಕ್ರಿಯೆ ವಿಳಂಬವಾಗಿತ್ತು.

ಫೆಬ್ರವರಿ ಪ್ರವೇಶ ಪ್ರಕ್ರಿಯೆ ಪ್ರಾರಂಭಿಸಿದ್ದು, 2600 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು. 2017-18ನೇ ಸಾಲಿಗೆ ಈಗ ಪ್ರವೇಶ ಪ್ರಕ್ರಿಯೆ ಆರಂಭವಾಗಿದ್ದು, ಬಿ.ಎ, ಬಿ.ಕಾಂ ಹಾಗೂ ಎಂ.ಎ, ಎಂ.ಕಾಂ ಕೋರ್ಸ್‌ಗಳಿಗೆ ಹೆಚ್ಚಿನ ಬೇಡಿಕೆ ಇದೆ. 2004 ರಿಂದ 2008ರ ಅವಧಿಯಲ್ಲಿ 45,000 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು ಎಂಬ ಮಾಹಿತಿ ಬೆಂವಿವಿ ಮೂಲದಿಂದ ತಿಳಿದುಬಂದಿದೆ.

ನಿರ್ದೇಶಕರಾಗಿ ಪ್ರೊ.ಮೈಲಾರಪ್ಪ: ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವರಾಗಿದ್ದ ಸಮಾಜ ಶಾಸ್ತ್ರ ವಿಭಾಗದ ಮುಖ್ಯಸ್ಥರೂ ಆದ ಪ್ರೊ.ಬಿ.ಸಿ.ಮೈಲಾರಪ್ಪರನ್ನು ಬೆಂವಿವಿ ಅಂಚೆ ತೆರಪು ಹಾಗೂ ದೂರ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕರಾಗಿ ನೇಮಿಸಲಾಗಿದೆ. ಈ ಹಿಂದೆಯೂ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿರುವ ಅನುಭವನ್ನು ಹೊಂದಿದ್ದಾರೆ.  ಬೆಂವಿವಿ ದೂರ ಶಿಕ್ಷಣ ಕೇಂದ್ರವನ್ನು ಇನ್ನಷ್ಟು ಬಲಿಷ್ಠಗೊಳಿಸುವ ಉದ್ದೇಶದಿಂದ ಮೈಲಾರಪ್ಪರನ್ನು ನಿರ್ದೇಶಕರಾಗಿ ನೇಮಿಸಲಾಗಿದೆ ಎಂದು ವಿವಿಯ ಆಡಳಿತ ಮಂಡಳಿ ತಿಳಿಸಿದೆ.

ಪ್ರಸಕ್ತ ಸಾಲಿನಲ್ಲಿ ದೂರ ಶಿಕ್ಷಣಕ್ಕೆ ಸಾಕಷ್ಟು ಅರ್ಜಿಗಳು ಬರುತ್ತಿದೆ. ಕಲಾ ಮತ್ತು ವಾಣಿಜ್ಯ ವಿಭಾಗದ ಕೆಲವು ಕೋರ್ಸ್‌ಗಳಿಗೆ ಬೇಡಿಕೆ ಹೆಚ್ಚಿದೆ. ಅರ್ಜಿ ಪ್ರಕ್ರಿಯೆ ಮುಗಿದ ನಂತರ ಅಂಕಿಸಂಖ್ಯೆಯ ಸ್ಪಷ್ಟ ಮಾಹಿತಿ ನೀಡಲಾಗುವುದು.
-ಪ್ರೊ.ಬಿ.ಸಿ.ಮೈಲಾರಪ್ಪ, ನಿರ್ದೇಶಕ, ಅಂಚೆ ಮತ್ತು ದೂರ ಶಿಕ್ಷಣ ನಿರ್ದೇಶನಾಲಯ

Advertisement

Udayavani is now on Telegram. Click here to join our channel and stay updated with the latest news.

Next