Advertisement

ಬೆಂಗೇರಿಯ ತಿರಂಗಾಕ್ಕೆ ಹೆಚ್ಚಿದ ಬೇಡಿಕೆ

11:05 AM Jan 25, 2020 | Suhan S |

ಹುಬ್ಬಳ್ಳಿ: ರಾಷ್ಟ್ರಧ್ವಜಕ್ಕೆ ಈ ಬಾರಿ ಬೇಡಿಕೆ ಹೆಚ್ಚಿದೆ. ವಿಶೇಷವಾಗಿ ಕಾರು ಸೇರಿದಂತೆ ವಿವಿಧ ವಾಹನಗಳಿಗೆ ಹಾಕುವ, ಟೇಬಲ್‌ ಮೇಲೆ ಇರಿಸುವ ರಾಷ್ಟ್ರಧ್ವಜಗಳಿಗೆ ಹೆಚ್ಚಿನ ಬೇಡಿಕೆ ಬಂದಿದ್ದು, ರಾಷ್ಟ್ರಧ್ವಜ ನಿರ್ಮಾಣ ಕಾರ್ಯ ಬೆಂಗೇರಿಯ ಖಾದಿ ಮತ್ತು ಗ್ರಾಮೋದ್ಯೋಗ ಸಂಸ್ಥೆಯಲ್ಲಿ ಭರದಿಂದ ಸಾಗಿದೆ.

Advertisement

ಬಿಐಎಸ್‌ ಪ್ರಮಾಣೀಕೃತ ರಾಷ್ಟ್ರಧ್ವಜ ತಯಾರು ಮಾಡುವ ಈ ಸಂಸ್ಥೆಯ ತಯಾರಿಸ್ಪಟ್ಟ ರಾಷ್ಟ್ರಧ್ವಜವೇ ದೆಹಲಿಯ ಕೆಂಪುಕೋಟೆ ಮೇಲೆ ಹಾಗೂ ಸಂಸತ್‌ ಭವನ ಮೇಲೆ ಹಾರಾಡುತ್ತಿವೆ. ಇಲ್ಲಿ ತಯಾರಾದ ವಿವಿಧ ಅಳತೆಯ ರಾಷ್ಟ್ರಧ್ವಜಗಳು ದೇಶ-ವಿದೇಶಗಳಿಗೆ ರವಾನೆಯಾಗುತ್ತಿವೆ. ಸ್ವಾತಂತ್ರೊತ್ಸವ, ಗಣರಾಜ್ಯೋತ್ಸವದಂತಹ ರಾಷ್ಟ್ರೀಯ ಹಬ್ಬದ ಸಂದರ್ಭದಲ್ಲಿ ರಾಷ್ಟ್ರಧ್ವಜಗಳಿಗೆ ಎಲ್ಲಿಲ್ಲದ ಬೇಡಿಕೆ ಬರುತ್ತದೆ. ಪ್ಲಾಸ್ಟಿಕ್‌ ರಾಷ್ಟ್ರಧ್ವಜ ಬಳಕೆ ನಿಷೇಧಿಸಿದ ಹಿನ್ನೆಲೆಯಲ್ಲಿ ಸಣ್ಣ ಅಳತೆ ರಾಷ್ಟ್ರಧ್ವಜಗಳಿಗೂ ಬೇಡಿಕೆ ಹೆಚ್ಚಿದೆ. ಕಳೆದ ವರ್ಷ ಬೆಂಗೇರಿ ಖಾದಿ ಮತ್ತು ಗ್ರಾಮೋದ್ಯೋಗ ಸಂಸ್ಥೆಯಿಂದ ಒಟ್ಟಾರೆ 3 ಕೋಟಿ ರೂ. ಮೌಲ್ಯದ ರಾಷ್ಟ್ರಧ್ವಜ ಮಾರಾಟವಾಗಿದ್ದರೆ, ಈ ಬಾರಿ 3.50 ಕೋಟಿ ರೂ. ಮೌಲ್ಯದ ರಾಷ್ಟ್ರಧ್ವಜ ವಹಿವಾಟು ಸಾಧ್ಯತೆ ಇದ್ದು, ಈಗಾಗಲೇ 2.80 ಕೋಟಿ ರೂ. ವಹಿವಾಟು ಆಗಿದೆ.

ರಾಷ್ಟ್ರ ಧ್ವಜವನ್ನು ಎಲ್ಲೆಂದರಲ್ಲಿ ತಯಾರಿಸುವಂತಿಲ್ಲ. ರಾಷ್ಟ್ರ ಧ್ವಜಕ್ಕೆ ತನ್ನದೆಯಾದ ನಿಯಮಗಳಿವೆ. ಹುಬ್ಬಳ್ಳಿ ಬೆಂಗೇರಿಯ ಖಾದಿ ಗ್ರಾಮೋದ್ಯೋಗ ಸಂಸ್ಥೆ ರಾಷ್ಟ್ರಧ್ವಜ ನಿರ್ಮಾಣಕ್ಕೆ ಭಾರತೀಯ ಮಾನಕ ಸಂಸ್ಥೆ (ಬಿಐಎಸ್‌)ಯಿಂದ ಮಾನ್ಯತೆ ಪಡೆದ ದೇಶದ ಏಕೈಕ ಸಂಸ್ಥೆಯಾಗಿದೆ.

ದೇಶದ ಎಲ್ಲ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೂ ಅಧಿಕೃತವಾಗಿ ರಾಷ್ಟ್ರಧ್ವಜ ಸರಬರಾಜು ಮಾಡುತ್ತಿದೆ. ಕೇಂದ್ರದಲ್ಲಿ 9 ಅಳತೆಯ ರಾಷ್ಟ್ರಧ್ವಜಗಳನ್ನು ನಿರ್ಮಾಣ ಮಾಡಲಾಗುತ್ತದೆ. ಧ್ವಜ ಸಂಹಿತೆಗೆ ಧಕ್ಕೆ ಬಾರದಂತೆ ಘನತೆ ಕಾಪಾಡಿಕೊಂಡು ರಾಷ್ಟ್ರಧ್ವಜ ತಯಾರು ಮಾಡಲಾಗುತ್ತಿದೆ. ಹತ್ತಿ ಖರೀದಿಯಿಂದ ಆರಂಭಿಸಿ ನೂಲು ನೇಯ್ದು ಬಟ್ಟೆಯಾಗಿ ಹೋಲಿಗೆ ಹಾಕಿ, ಅಶೋಕ ಚಕ್ರ ಲಾಂಛನ ಅಳವಡಿಸಿ ರಾಷ್ಟ್ರ ಧ್ವಜ ಸಿದ್ಧವಾಗುವಷ್ಟರಲ್ಲಿ 15-18 ಬಾರಿ ಪರಿಶೀಲನೆಗೆ ಒಳಪಡುತ್ತದೆ.

1×1, 1/2, 2×3, 3×4 1/2, 4×6, 6×9, 8×12, 14×21 ಅಡಿ ಅಳತೆಯ ರಾಷ್ಟ್ರಧ್ವಜಗಳನ್ನು ಇಲ್ಲಿ ತಯಾರಿಸಲಾಗುತ್ತದೆ. ಧ್ವಜಾರೋಹಣಕ್ಕೆ ಹೆಚ್ಚು ಬೇಡಿಕೆ ಬರುವುದು 2x 3 ಅಡಿ ಅಳತೆ ರಾಷ್ಟ್ರಧ್ವಜಕ್ಕೆ. ಎಲ್ಲ ಕಚೇರಿಗಳ ಮೇಲೆ, ಸರಕಾರಿ ಹಾಗೂ ಸಂಘ-ಸಂಸ್ಥೆಗಳ ಮೇಲೆ ಹಾರಾಡುವ ರಾಷ್ಟ್ರಧ್ವಜ ಈ ಅಳತೆಯದ್ದಾಗಿದೆ. 3 ರೂ.ಗಳ ಪಾಕೇಟ್‌ ಧ್ವಜದಿಂದ ಹಿಡಿದು 14×21 ಅಡಿ ಅಳತೆಯ 24 ಸಾವಿರ ರೂ.ವರೆಗಿನ ಧ್ವಜ ಇಲ್ಲಿ ತಯಾರಾಗುತ್ತದೆ.

Advertisement

ಸಂಘದ ಉತ್ಪಾದನೆ ಪ್ರತಿವರ್ಷ ನಿರೀಕ್ಷೆಗೂ ಮೀರಿ ಏರಿಕೆಯಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್‌, ಟೆರ್ರಿಕಾಟ್‌, ಬಟ್ಟೆಯಿಂದ ತಯಾರಿಸಲಾದ ಧ್ವಜಗಳು ಸಂಘದ ರಾಷ್ಟ್ರಧ್ವಜಕ್ಕೆ ಪೈಪೋಟಿ ನೀಡುತ್ತಿವೆ. ರಾಜ್ಯ-ಕೇಂದ್ರ ಸರ್ಕಾರ ಕಳಪೆ ಹಾಗೂ ನಕಲಿ ಧ್ವಜಗಳಿಗೆ ಕಡಿವಾಣ ಹಾಕಿದರೆ ನಮ್ಮ ರಾಷ್ಟ್ರಧ್ವಜ ನಿರ್ಮಿಸುವ ಕೇಂದ್ರ ಮತ್ತಷ್ಟು ಲಾಭ ಗಳಿಸಲಿದೆ. ಶಿವಾನಂದ ಮಠಪತಿ, ಗ್ರಾಮೋದ್ಯೋಗ ಸಂಸ್ಥೆ ಕಾರ್ಯದರ್ಶಿ

 

-ಬಸವರಾಜ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next