Advertisement

ಕೊಳವೆಬಾವಿ ಹೆಚ್ಚಳದಿಂದ ಅಂತರ್ಜಲಕ್ಕೆ ಅಪಾರ ಹಾನಿ

06:42 PM Mar 25, 2022 | Team Udayavani |

ಚಿತ್ರದುರ್ಗ: ಭಾರತದಲ್ಲಿರುವ ಕೊಳವೆ ಬಾವಿಗಳ ಸಂಖ್ಯೆ ಆಗಸದಲ್ಲಿ ಕಾಣಿಸುವ ನಕ್ಷತ್ರದಷ್ಟಿವೆ. ಒಂದು ಅಂದಾಜಿನ ಪ್ರಕಾರ 50 ವರ್ಷಗಳಲ್ಲಿ 6 ಕೋಟಿ ಕೊಳವೆಬಾವಿ ಕೊರೆಯಿಸಲಾಗಿದೆ. ಇದರಿಂದ ಶೇ. 80ರಷ್ಟು ಅಂತರ್ಜಲ ಖಾಲಿಯಾಗಿದೆ ಎಂದು ಜಲತಜ್ಞ ಡಾ| ಎನ್‌.ಜೆ. ದೇವರಾಜ ರೆಡ್ಡಿ ಆತಂಕ ವ್ಯಕ್ತಪಡಿಸಿದರು.

Advertisement

ನಗರದ ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣದ ಮುಂಭಾಗ ಸರ್ವ ಪ್ರೇರಣಾ ಸಂಸ್ಥೆ ಮತ್ತು ಜಿಯೋ ರೇನ್‌ ವಾಟರ್‌ ಬೋರ್ಡ್‌ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಜಲ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಭಾರತದಲ್ಲಿ ಕೊಳವೆಬಾವಿ ವ್ಯಾಮೋಹ ಹೆಚ್ಚಾಗಿದೆ. ನಮ್ಮ ರೈತರು ಅತಿ ಹೆಚ್ಚು ಹಣವನ್ನು ಕೊಳವೆಬಾವಿ ಕೊರೆಯಿಸಲು ವ್ಯಯ ಮಾಡುತ್ತಿದ್ದಾರೆ.

ಇದು ರೈತರ ಆತ್ಮಹತ್ಯೆ ಹಾಗೂ ಜಲಕ್ಷಾಮಕ್ಕೂ ಕಾರಣವಾಗುತ್ತಿದೆ. ಭೂಮಿಯ ರಂಧ್ರ ಮತ್ತು ಬಿರುಕುಗಳಲ್ಲಿ ಲಭ್ಯವಾಗುತ್ತಿದ್ದ ಅಂತರ್ಜಲ ಅಗೋಚರವಾಗುತ್ತಿದೆ. ಕಣ್ಣಿಗೆ ಕಾಣದಷ್ಟು ಪಾತಾಳಕ್ಕೆ ಸೇರಿಕೊಳ್ಳುತ್ತಿದೆ ಎಂದರು. ಇತ್ತೀಚೆಗೆ ಕರಾವಳಿ ಮತ್ತು ಪಶ್ಚಿಮಘಟ್ಟದಲ್ಲಿಯೂ ಮಳೆ
ಕಡಿಮೆಯಾಗುತ್ತಿದೆ. ಉಡುಪಿ, ಮಂಗಳೂರು, ಕುಂದಾಪುರದಂತಹ ಊರುಗಳಲ್ಲೂ ನೀರಿನ ಕೊರತೆ ಉಂಟಾಗಿತ್ತು. ಈ ಎಲ್ಲಾ ಸ್ಥಿತಿಗಳಿಂದ ತಪ್ಪಿಸಿಕೊಳ್ಳಲು ಓಡುವ ನೀರನ್ನು ನಡೆಯುವಂತೆ, ನಡೆಯುವ ನೀರನ್ನು ನಿಲ್ಲುವಂತೆ, ನಿಂತಿರುವ ನೀರನ್ನು ಭೂಮಿಗೆ ಇಂಗುವಂತೆ ಮಾಡಿದಾಗ ಮಾತ್ರ ಮುಂದಿನ ದಿನಗಳಲ್ಲಿ ಉಂಟಾಗುವ ಭೀಕರ ಜಲಕ್ಷಾಮವನ್ನು ತಪ್ಪಿಸಬಹುದು ಎಂದು ಸಲಹೆ ನೀಡಿದರು.

ಪ್ರತಿ ಮನೆಯಲ್ಲೂ ಮಳೆ ನೀರು ಸಂಗ್ರಹ ಮಾಡಿಕೊಂಡು ಬಳಕೆ ಮಾಡುವ ಪದ್ಧತಿ ರೂಢಿಸಿಕೊಂಡರೆ ನಗರಸಭೆ ಅಥವಾ ಸ್ಥಳೀಯ ಸಂಸ್ಥೆಗಳ ಮೇಲೆ ಅವಲಂಬನೆಯಾಗುವುದು ತಪ್ಪುತ್ತದೆ. ಮಳೆಗಾಲದಲ್ಲಿ ಸುರಿಯುವ ಮಳೆ ನೀರನ್ನು 13 ಸಾವಿರ ಲೀಟರ್‌ವರೆಗೆ ಸಂಗ್ರಹ ಮಾಡಿಟ್ಟುಕೊಳ್ಳಬಹುದು. ಇದರಿಂದ ಒಂದು ಕುಟುಂಬ ವರ್ಷವಿಡೀ ಈ ನೀರು ಬಳಕೆ ಮಾಡಿಕೊಳ್ಳಬಹುದು. ಇಂದು ಯಾವ ವಿವೇಚನೆ ಮತ್ತು ದೂರದೃಷ್ಟಿ ಇಲ್ಲದೆ ಅಂತರ್ಜಲವನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ.

ನೀರಿನ ಮಹತ್ವ ಅರಿಯದಿದ್ದರೆ ಮುಂದಿನ ಪೀಳಿಗೆಯ ಭವಿಷ್ಯ ಭೀಕರವಾಗಲಿದೆ. ಎಲ್ಲೆಲ್ಲೂ ಜಲಕ್ಷಾಮ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.ವಿಶ್ವ ಜಲ ದಿನಾಚರಣೆ ಕಾರ್ಯಕ್ರಮದಲ್ಲಿ 18 ಮಂದಿ ಕೋವಿಡ್‌ ವಾರಿಯರ್ಸ್‌ಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಪಾಪಯ್ಯ, ಬಡಾವಣೆಯ ಮುಖಂಡರಾದ ಕರಿಯಪ್ಪ, ಜಗದೀಶ್‌, ತಿಪ್ಪೇರುದ್ರಸ್ವಾಮಿ, ಮಂಜುನಾಥ್‌ ಮತ್ತಿತರರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next