Advertisement
ನದಿಗಳು ಉಕ್ಕಿ ಹರಿದ ಪರಿಣಾಮ ಉಂಟಾದ ನೆರೆಯಿಂದ ನಗರ-ಪಟ್ಟಣಗಳಲ್ಲಿ ಹೆಚ್ಚಾಗಿ ಹಾನಿಯಾಗದೆ ಇದ್ದರೂ ನಿರಂತರವಾಗಿ ಸುರಿದ ಭಾರಿ ಮಳೆಯ ಪರಿಣಾಮವಾಗಿ ರಸ್ತೆ, ಕುಡಿಯುವ ನೀರು ಪೂರೈಸುವ ಪಂಪ್‌ಹೌಸ್, ವಿದ್ಯುತ್ ಘಟಕ ಹಾಗೂ ನೀರು ಸರಬರಾಜು ಮಾಡುವ ಉಪಕರಣಗಳಿಗೆ ಹಾನಿಯಾಗಿದೆ.
18.6ಲಕ್ಷ ಪರಿಹಾರ ನಿರೀಕ್ಷೆ: ಅತಿವೃಷ್ಟಿಯಿಂದ ಹಾವೇರಿ ನಗರದಲ್ಲಿ 7.5ಕಿಮೀ, ರಾಣಿಬೆನ್ನೂರು ನಗರದಲ್ಲಿ 10ಕಿಮೀ, ಬ್ಯಾಡಗಿ ಪಟ್ಟಣದಲ್ಲಿ 2 ಕಿಮೀ., ಹಿರೇಕೆರೂರು ಪಟ್ಟಣದಲ್ಲಿ 1.5ಕಿಮೀ, ಸವಣೂರು ಪಟ್ಟಣದಲ್ಲಿ 2 ಕಿಮೀ, ಶಿಗ್ಗಾವಿ ಪಟ್ಟಣದಲ್ಲಿ 5ಕಿಮೀ, ಹಾನಗಲ್ಲ ಪಟ್ಟಣದಲ್ಲಿ 3ಕಿಮೀಯಷ್ಟು ರಸ್ತೆ ಹಾಳಾಗಿದೆ. ಪ್ರಾಕೃತಿಕ ವಿಕೋಪ ಪರಿಹಾರ ನಿಧಿ ನಿಯಮಾನುಸಾರ 18.6ಲಕ್ಷ ರೂ.ಗಳ ಪರಿಹಾರ ನಿರೀಕ್ಷಿಸಲಾಗಿದೆ.
ಅಸಮರ್ಪಕ ನಿರ್ವಹಣೆ: ಅತಿವೃಷ್ಟಿಯಿಂದ ಆಗಿರುವ ಆಕಸ್ಮಿಕ ಹಾನಿಯ ಜತೆಗೆ ಸ್ಥಳೀಯ ಆಡಳಿತ ಸಂಸ್ಥೆಗಳ ನಿರ್ಲಕ್ಷ್ಯ ಹಾಗೂ ಅಸಮರ್ಪಕ ನಿರ್ವಹಣೆಯಿಂದಾಗಿಯೂ ಅಪಾರ ಪ್ರಮಾಣದಲ್ಲಿ ಹಾನಿಯಾಗಿದ್ದು, ಈ ಬಗ್ಗೆ ಯಾರೂ ಹಾನಿ ಲೆಕ್ಕ ಹಾಕಿಲ್ಲ. ಪಟ್ಟಣಗಳ ರಾಜಕಾಲುವೆ, ಚರಂಡಿ, ಗಟಾರಗಳ ನಿರ್ವಹಣೆ ಮಾಡದೆ ಇರುವುದರಿಂದ ನಗರ-ಪಟ್ಟಣಗಳಲ್ಲಿ ಮಳೆ ನೀರು ಮನೆ, ಅಂಗಡಿ, ಕಚೇರಿಗಳಿಗೆ ನುಗ್ಗಿ ಅಪಾರ ಪ್ರಮಾಣದ ವಸ್ತುಗಳು ಹಾನಿಯಾಗಿವೆ. ಕೆಲ ಬಟ್ಟೆ ಅಂಗಡಿಕಾರರಂತೂ ಮಳೆ ನೀರು, ಕೊಳಚೆ ನೀರು ನುಗ್ಗಿದ್ದರಿಂದ ಅಪಾರ ಪ್ರಮಾಣದಲ್ಲಿ ನಷ್ಟ ಅನುಭವಿಸಿದ್ದಾರೆ. ಒಟ್ಟಾರೆ ಅತಿವೃಷ್ಟಿ ಗ್ರಾಮೀಣ ಜನಜೀವನ, ಆಸ್ತಿಪಾಸ್ತಿಗೆ ಹಾನಿ ಮಾಡುವ ಜತೆಗೆ ನಗರವಾಸಿಗಳಿಗೂ ತನ್ನ ಬಿಸಿ ಮುಟ್ಟಿಸಿ ಅಪಾರ ಪ್ರಮಾಣದಲ್ಲಿ ನಷ್ಟವನ್ನುಂಟು ಮಾಡಿದೆ.
•ಎಚ್.ಕೆ. ನಟರಾಜ