Advertisement

ಪದವೀಧರ ಶಿಕ್ಷಕರ ನೇಮಕ ಅಭ್ಯರ್ಥಿಗಳಲ್ಲಿ ಹೆಚ್ಚಿದ ಗೊಂದಲ

06:10 AM Jul 28, 2018 | |

ಬೆಂಗಳೂರು:ಪದವೀಧರ ಶಿಕ್ಷಕರ ನೇಮಕಾತಿ ಸಂಬಂಧ ಕಟ್‌ ಆಫ್ ಮಾರ್ಕ್ಸ್ ವಿಚಾರದಲ್ಲಿ ರಾಜ್ಯ ಸರ್ಕಾರ ಸುತ್ತೋಲೆ ಮೇಲೆ ಸುತ್ತೋಲೆ ಹೊರಡಿಸುತ್ತಿರುವುದರಿಂದ ಅಭ್ಯರ್ಥಿಗಳಲ್ಲಿ ಇನ್ನಷ್ಟು ಗೊಂದಲ ಉಂಟಾಗುತ್ತಿದೆ.

Advertisement

10 ಸಾವಿರ ಪದವೀಧರ ಶಿಕ್ಷಕರ ನೇಮಕ ಸಂಬಂಧ ಜೂನ್‌ ಅಂತ್ಯದಲ್ಲಿ 1:2 ಅನುಪಾತದಲ್ಲಿ ಅರ್ಹತಾ ಅಭ್ಯರ್ಥಿಗಳ ಪಟ್ಟಿಯನ್ನು ಸರ್ಕಾರ ಪ್ರಕಟಿಸಿತ್ತು.  10 ಸಾವಿರ ಹುದ್ದೆಗೆ ಕೇವಲ 2500 ಅಭ್ಯರ್ಥಿಗಳು ಮಾತ್ರ ಅರ್ಹತೆ ಪಡೆದಿದ್ದರು.ತದನಂತರ ನೇಮಕಾತಿಗೆ ನಡೆದ ಸ್ಪರ್ಧಾತ್ಮಕ ಪರೀಕ್ಷೆಯ ಪೇಪರ್‌ 2ರ ಕನಿಷ್ಠ ಅಂಕ ಶೇ.50 ಹಾಗೂ ಪೇಪರ್‌ 3ರ ಕನಿಷ್ಠ ಅಂಕ ಶೇ.60ರಷ್ಟು ನಿಗದಿ ಮಾಡಿರುವುದನ್ನು ರದ್ದು ಮಾಡಿ ಜುಲೈ 17ರಂದು ಆದೇಶ ಹೊರಡಿಸಿತ್ತು.

ಇದರ ಬೆನ್ನಲ್ಲೇ ಕನಿಷ್ಠ ಅಂಕ ರದ್ದು ಪಡಿಸಿದ್ದನ್ನು ಖಂಡಿಸಿ ಪದವಿಯ ನಾನ್‌ಸೆಮಿಸ್ಟರ್‌ ಅಭ್ಯರ್ಥಿಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗಾಗಿ ಜುಲೈ 26ರಂದು ಹೊಸ ಸುತ್ತೋಲೆ ಹೊರಡಿಸಿ, ಜುಲೈ 17ರಂದು ಹೊರಡಿಸಿದ ಸುತ್ತೋಲೆ ಎಲ್ಲ ಅಭ್ಯರ್ಥಿಗಳಿಗೆ ಅನ್ವಯ ಆಗುವುದಿಲ್ಲ ಎಂದು ಹೇಳಿದೆ. ಇದರಿಂದ ಇನ್ನಷ್ಟು ಅಭ್ಯರ್ಥಿಗಳಲ್ಲಿ ಆತಂಕ ಹೆಚ್ಚಾಗಿದೆ.

ಈ ನಡುವೆ, ಜಿಲ್ಲಾವಾರು ಉಳಿಯಬಹುದಾದ ಹೆಚ್ಚುವರಿ ಹುದ್ದೆಗೆ ಎನ್‌ಐಸಿ ತಂತ್ರಾಂಶ ಆಧರಿಸಿ ಪೇಪರ್‌ 2 ಮತ್ತು 3ರಲ್ಲಿ ಶೇ.1ರಿಂದ 5ರಷ್ಟು ಕನಿಷ್ಠ ಅಂಕ ಕಡಿಮೆ ಮಾಡಲು ಸರ್ಕಾರ ಹೊಸದಾಗಿ ನಿರ್ಧರಿಸಿದೆ. ಈ ಹಿಂದೆ ಕನಿಷ್ಠ ಅಂಕವೇ ರದ್ದು ಮಾಡಿದ ಸರ್ಕಾರ ಈಗ ಶೇ.1ರಿಂದ 5ರಷ್ಟು ಕಡಿಮೆ ಮಾಡುವಂತೆ ಆದೇಶ ಹೊರಡಿಸಿದ್ದು, ಕೌನ್ಸೆಲಿಂಗ್‌ ಆಸೆಯಲ್ಲಿರುವ ಅಭ್ಯರ್ಥಿಗಳಲ್ಲಿ ಗೊಂದಲಕ್ಕೆ ಕಾರಣವಾಗಿದೆ.

ಶೇ.50 ಮತ್ತು 60ರ ಕನಿಷ್ಠ ಅಂಕದ ಆಧಾರದಲ್ಲಿ ಪ್ರಕಟಿಸಿದ್ದ ಪಟ್ಟಿಯಲ್ಲಿ ಇರುವ ಅಭ್ಯರ್ಥಿಗಳಿಗೆ ಜುಲೈ 26ರ ಆದೇಶ ಅನ್ವಯಿಸುವುದಿಲ್ಲ. ಕನಿಷ್ಠ ಅಂಕ ಸಡಿಲಿಕೆಯಿಂದ ಎಷ್ಟು ಅಭ್ಯರ್ಥಿಗಳು ಅನುಕೂಲ ಪಡೆದಿದ್ದಾರೆ ಎಂಬುದರ ಜಿಲ್ಲಾವಾರು ಮಾಹಿತಿಯನ್ನು  ಎನ್‌ಐಸಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಮೂಲಕ ಸರ್ಕಾರಕ್ಕೆ ನೀಡುವಂತೆಯೂ ಸೂಚಿಸಿದೆ.

Advertisement

ಸರ್ಕಾರ ಮೇಲಿಂದ ಮೇಲೆ ಪರಿಷ್ಕರಣೆ ಸುತ್ತೋಲೆ  ಹೊರಡಿಸುತ್ತಿರುವುದರಿಂದ ಅಭ್ಯರ್ಥಿಗಳು ಜಿಜ್ಞಾಸೆಗೆ ಒಳಾಗಿಗಿದ್ದು  ಮೂಲ ಪಟ್ಟಿಯ ಆಧಾರದಲ್ಲೇ ನೇಮಕಾತಿ ನಡೆಯುತ್ತದೋ ಅಥವಾ ಹೊಸ ಪಟ್ಟಿ ಬಿಡುಗಡೆಯಾಗಿ ಅದರ ಆಧಾರದಲ್ಲಿ ಕೌನ್ಸೆಲಿಂಗ್‌ ನಡೆಸುತ್ತಾರೋ ಎಂಬುದ ಬಗ್ಗೆ ಗೊಂದಲ ಮೂಡಿದೆ.

ಚೆಕ್‌ ಮೂಲಕ ವೇತನ ನೀಡದಿರಲು ಸೂಚನೆ
ಬೆಂಗಳೂರು:
ರಾಜ್ಯದ ಪದವಿ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಚೆಕ್‌ ಮೂಲಕ ವೇತನ ನೀಡ ಕೂಡದು
ಎಂದು ಎಲ್ಲ ಕಾಲೇಜಿನ ಪ್ರಾಂಶುಪಾಲರಿಗೂ ಕಾಲೇಜು ಶಿಕ್ಷಣ ಇಲಾಖೆ ಖಡಕ್‌ ಎಚ್ಚರಿಕೆ ನೀಡಿದೆ. ಬೋಧಕ ಮತ್ತು ಬೋಧಕೇತರ
ಸಿಬ್ಬಂದಿ ವೇತನ ಹಾಗೂ ಇತರ ಭತ್ಯೆಯನ್ನು ಪ್ರಾಂಶುಪಾಲರು ನೇರವಾಗಿ ತಮ್ಮ ಖಾತೆಗೆ ಜಮಾ ಮಾಡಿಕೊಂಡು, ನಂತರ ಚೆಕ್‌
ಮೂಲಕ ಸಿಬ್ಬಂದಿ ವರ್ಗಕ್ಕೆ ವಿತರಿಸುತ್ತಿರುವ ಬಗ್ಗೆ ಇಲಾಖೆಗೆ ದೂರು ಬಂದಿದೆ. 

ಈ ಹಿನ್ನೆಲೆಯಲ್ಲಿ ಎಲ್ಲ ಪ್ರಾಂಶುಪಾಲರಿಗೂಎಚ್ಚರಿಕೆ ನೀಡಿರುವ ಇಲಾಖೆ, ಯಾವುದೇ ಕಾರಣಕ್ಕೂ ಚೆಕ್‌ ಮೂಲಕ ವೇತನ ನೀಡ ಕೂಡದೆಂದು ಸ್ಪಷ್ಟವಾಗಿ ತಿಳಿಸಿದೆ. ಚೆಕ್‌ ಮೂಲಕ ವೇತನ ನೀಡುವುದರಿಂದ ಸಿಬ್ಬಂದಿಗೆ ವೇತನ ಕೈ ಸೇರುವಾಗ ವಿಳಂಬವಾಗುತ್ತಿದೆ ಮತ್ತು ಅವ್ಯವಹಾರ ಆಗುವ ಸಾಧ್ಯತೆಯೂ ಹೆಚ್ಚಿದೆ. ಹೀಗಾಗಿ, ಇಸಿಎಸ್‌ (ಎಲೆಕ್ಟ್ರಾನಿಕ್‌ ಕ್ಲಿಯರಿಂಗ್‌ ಸರ್ವಿಸ್‌) ವ್ಯವಸ್ಥೆ ಮೂಲಕವೇ ವೇತನ ನೀಡುವಂತೆ ನಿರ್ದೇಶಿಸಿದೆ. 

ಹಾಗೆಯೇ, ಎಚ್‌ಆರ್‌ಎಂಎಸ್‌ ಜತೆಗೆ ಸಿಇಎಸ್‌ ಲಿಂಕ್‌ ಮಾಡಬೇಕು. ಚೆಕ್‌ ಮೂಲಕ ವೇತನ ನೀಡುವುದು ಕಂಡು ಬಂದರೆ, ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಪ್ರಾಂಶುಪಾಲರಿಗೆ ಇಲಾಖೆ ಎಚ್ಚರಿಕೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next