Advertisement

ರಾಜ್ಯದಲ್ಲಿ ಹೆಚ್ಚಿದೆ ಬಾಲ್ಯವಿವಾಹ

10:23 AM Feb 23, 2020 | Sriram |

ಬೆಂಗಳೂರು: ಅನಕ್ಷರತೆ, ಬಡತನ, ಮೂಢನಂಬಿಕೆ, ಸಂಪ್ರದಾಯಗಳು,ಅರಿವಿನ ಕೊರತೆಯಿಂದಾಗಿ ರಾಜ್ಯದಲ್ಲಿ ಬಾಲ್ಯವಿವಾಹ ಹೆಚ್ಚುತ್ತಲೇ ಇದೆ. ಕಳೆದ ಐದು ವರ್ಷಗಳಲ್ಲಿ 453 ಬಾಲ್ಯ ವಿವಾಹ ನಡೆದಿದ್ದು, 276 ಎಫ್ ಐಆರ್‌ ದಾಖಲಾಗಿವೆ. 5,860 ಬಾಲ್ಯವಿವಾಹಗಳನ್ನು ತಡೆಯಲಾಗಿದೆ.

Advertisement

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಿವಿಧ ರೀತಿಯಲ್ಲಿ ಜಾಗೃತಿ ಮೂಡಿಸಿದರೂ ಬಾಲ್ಯ ವಿವಾಹ ನಿರ್ಮೂಲನೆಯಲ್ಲಿ ನಿರೀಕ್ಷಿಸಿದ ಮಟ್ಟದ ಯಶಸ್ಸು ಸಿಗದೆ ಇರುವುದು ಕಂಡು ಬಂದಿದೆ.

ಕೋರ್‌ ಕಮಿಟಿ ಶಿಫಾರಸು
ಬಾಲ್ಯವಿವಾಹವನ್ನು ಪರಿಣಾಮಕಾರಿಯಾಗಿ ತಡೆ ಗಟ್ಟಲು ಗ್ರಾಮ, ತಾಲೂಕು, ಜಿಲ್ಲಾ,ರಾಜ್ಯ ಮಟ್ಟದಲ್ಲಿ ಸಮಿತಿ ರಚಿಸಲಾಗಿದೆ.ಗ್ರಾ.ಪಂ.ಗಳಲ್ಲಿರುವ ಸಮಿತಿ ಎರಡು ತಿಂಗಳಿಗೊಮ್ಮೆ,ತಾಲೂಕು ಮತ್ತು ಜಿಲ್ಲಾ ಮಟ್ಟದ ಸಮಿತಿ 3 ತಿಂಗಳಿಗೊಮ್ಮೆ,ರಾಜ್ಯ ಮಟ್ಟದ ಸಮಿತಿ ಪ್ರತಿ ಆರು ತಿಂಗಳಿಗೊಮ್ಮೆ ಸಭೆ ನಡೆಸಬೇಕು ಎಂದು ಕೋರ್‌ ಕಮಿಟಿ ವರದಿ ಶಿಫಾರಸು ಮಾಡಿದೆ.

1 ಜಿಲ್ಲೆ, 9 ತಿಂಗಳು, 259 ಬಾಲ್ಯವಿವಾಹ ತಡೆ
ಕಲ್ಯಾಣ ಕರ್ನಾಟಕದ ಕೊಪ್ಪಳ ಜಿಲ್ಲೆಯಲ್ಲಿ 2019ರ ಎಪ್ರಿಲ್‌ನಿಂದ ಡಿಸೆಂಬರ್‌ ವರೆಗೆ ಕೇವಲ 9 ತಿಂಗಳಲ್ಲಿ 259 ಬಾಲ್ಯವಿವಾಹಗಳನ್ನು ಇಲಾಖೆ ಅಧಿಕಾರಿಗಳು, 1098 ಚೈಲ್ಡ್‌ಲೈನ್‌ ಸೇರಿದಂತೆ ವಿವಿಧ ಎನ್‌ಜಿಒಗಳು ತಡೆದಿವೆ. ಅಚ್ಚರಿ ಎಂದರೆ ಇಲ್ಲಿ ಇತರೆಲ್ಲ ಜಿಲ್ಲೆಗಿಂತಲೂ ಅಧಿಕ ಸಂಖ್ಯೆಯ ಬಾಲ್ಯ ವಿವಾಹಗಳನ್ನು ತಡೆಯಲಾಗಿದೆ.

ಮಹಿಳೆಯರೂ ಶಿಕ್ಷೆಗೆ ಅರ್ಹ
ಬಾಲ್ಯ ವಿವಾಹ ನಿಷೇಧ (ಕರ್ನಾಟಕ ತಿದ್ದು ಪಡಿ) ಅಧಿನಿಯಮ-2016ರ ಪ್ರಕಾರ ಪ್ರತೀ ಬಾಲ್ಯ ವಿವಾಹವು ಪ್ರಾರಂಭದಿಂದಲೇ ಅನೂರ್ಜಿತ ವಾಗುತ್ತದೆ. ಪ್ರತಿಯೊಬ್ಬ ಪೊಲೀಸ್‌ ಅಧಿಕಾರಿ ತನ್ನ ಅಧಿಕಾರ ವ್ಯಾಪ್ತಿಯಲ್ಲಿ ನಡೆದ ಅಪರಾಧದ ಸಂಜ್ಞೆà ಯತೆ ಗಮನಿಸಿ ಈ ಅಧಿನಿಯಮದಡಿ ಸ್ವಯಂ ಕ್ರಮ ತೆಗೆದುಕೊಳ್ಳಬೇಕು. ಈ ಕಾಯ್ದೆ ಯಡಿ ಮಹಿಳೆಯರೂ ಜೈಲು ವಾಸ ಶಿಕ್ಷೆಗೆ ಅರ್ಹರಾಗಿರುತ್ತಾರೆ.2011ರ ನವೆಂಬರ್‌ ನಲ್ಲಿ ಮಹಿಳಾ, ಮಕ್ಕಳ ಅಭಿವೃದ್ಧಿ ನಿರ್ದೇಶನಾಲಯ ದಡಿ ಬಾಲ್ಯ ವಿವಾಹ ನಿಷೇಧ ಉಸ್ತುವಾರಿ ಕೋಶವನ್ನು ಸ್ಥಾಪಿಸಲಾಗಿದೆ.

Advertisement

ಬೆಳಗಾವಿಯಲ್ಲಿ ತಡೆದದ್ದು ಹೆಚ್ಚು!
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರ ಜಿಲ್ಲೆ ಬೆಳಗಾವಿಯಲ್ಲಿ ಕಳೆದ ಐದು ವರ್ಷಗಳಲ್ಲಿ 576 ಬಾಲ್ಯ ವಿವಾಹಗಳನ್ನು ತಡೆಯಲಾಗಿದ್ದರೆ, 26 ಬಾಲ್ಯವಿವಾಹಗಳು ನಡೆದಿವೆ. ನಾಲ್ಕರ ವಿರುದ್ಧ ಎಫ್ಐಆರ್‌ ದಾಖಲಾಗಿದೆ. ರಾಜ್ಯದ 30 ಜಿಲ್ಲೆಗೆ ಹೋಲಿಸಿದರೆ ಬೆಳಗಾವಿಯಲ್ಲಿ ಅತಿ ಹೆಚ್ಚು ವಿವಾಹಗಳನ್ನು ತಡೆಯಲಾಗಿದೆ. ಬಾಲ್ಯ ವಿವಾಹ ತಡೆಯಲ್ಲಿ ಕಲ್ಯಾಣ ಕರ್ನಾಟಕದ ಕೊಪ್ಪಳ ಮತ್ತು ಕಲಬುರಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ.

ಮಂಡ್ಯ ಜಿಲ್ಲೆಯಲ್ಲಿ ನಡೆದದ್ದು ಹೆಚ್ಚು
2015-16ರಿಂದ 2019ರ ಡಿಸೆಂಬರ್‌ ವರೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು, 1098 ಚೈಲ್ಡ್‌ಲೈನ್‌, ಪೊಲೀಸ್‌ ಇಲಾಖೆ ಸೇರಿ ರಾಜ್ಯದಲ್ಲಿ ಒಟ್ಟು 5,860 ಬಾಲ್ಯವಿವಾಹಗಳನ್ನು ತಡೆದಿದ್ದಾರೆ. ಇದರಲ್ಲಿ 1,799 ವಿವಾಹಗಳನ್ನು ಕಲ್ಯಾಣ ಕರ್ನಾಟಕದಲ್ಲಿ ತಡೆಯಲಾಗಿದೆ. 5 ವರ್ಷಗಳಲ್ಲಿ ಮಂಡ್ಯ ಜಿಲ್ಲೆ ಒಂದರಲ್ಲೇ 74 ಬಾಲ್ಯವಿವಾಹಗಳು ನಡೆದಿದ್ದು, ಮೊದಲ ಸ್ಥಾನದಲ್ಲಿದೆ. ಉಡುಪಿಯಲ್ಲಿ 4, ದಕ್ಷಿಣ ಕನ್ನಡದಲ್ಲಿ 3 ಬಾಲ್ಯವಿವಾಹಗಳು ನಡೆದಿದ್ದು,ಕೊನೆಯ ಸ್ಥಾನದಲ್ಲಿವೆ.

3 ಪ್ರಕರಣಗಳಿಗೆ ಶಿಕ್ಷೆ
ಕೊಪ್ಪಳ ಜಿಲ್ಲೆಯಲ್ಲಿ 2012- 13ರಲ್ಲಿ ನಡೆದ ಬಾಲ್ಯವಿವಾಹ ಪ್ರಕರಣದಲ್ಲಿ ವರನಿಗೆ 2 ವರ್ಷ ಜೈಲು, 30 ಸಾವಿರ ರೂ. ದಂಡ. ಬಾಲಕಿಯ ತಾಯಿ ಮತ್ತು ಚಿಕ್ಕಮ್ಮನಿಗೂ 2 ವರ್ಷ ಜೈಲು, ತಲಾ 10 ಸಾವಿರ ರೂ. ದಂಡ.

ಕೊಪ್ಪಳ ಜಿಲ್ಲೆಯಲ್ಲಿ 2013- 14ರಲ್ಲಿ ನಡೆದ ಪ್ರಕರಣದಲ್ಲಿ ಅಪ್ರಾಪ್ತ ಬಾಲಕ ಮತ್ತು ಬಾಲಕಿಯ ಪೋಷಕರಿಗೆ ತಲಾ 2 ವರ್ಷ ಜೈಲು ಮತ್ತು ತಲಾ 10 ಸಾವಿರ ರೂ. ದಂಡ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 2015-16ನೇ ಸಾಲಿನಲ್ಲಿ ನಡೆದ ಪ್ರಕರಣದಲ್ಲಿ ಪೋಷಕರಿಗೆ 45 ಸಾವಿರ ರೂ. ದಂಡ.

ಬಾಲ್ಯವಿವಾಹ ವಿರುದ್ಧ ಗ್ರಾಮ ಮಟ್ಟದಲ್ಲಿ ಸಮಿತಿ ರಚಿಸಿ ಜಾಗೃತಿ ಮೂಡಿಸಲಾಗುತ್ತಿದೆ. ಕೊಪ್ಪಳದಲ್ಲಿ ನಡೆದ ಬಾಲ್ಯವಿವಾಹ ಪ್ರಕರಣದಲ್ಲಿ ಪೋಷಕರಿಗೆ ಶಿಕ್ಷೆ ನೀಡಲಾಗಿದೆ.
– ಶಶಿಕಲಾ ಜೊಲ್ಲೆ,
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ.

-  ಮಂಜುನಾಥ ಗಂಗಾವತಿ

Advertisement

Udayavani is now on Telegram. Click here to join our channel and stay updated with the latest news.

Next