Advertisement

ಕೈಗಾ ಸುತ್ತಮುತ್ತ ಹೆಚ್ಚಿದ ಕ್ಯಾನ್ಸರ್‌

06:15 AM Jun 23, 2018 | Team Udayavani |

ಕಾರವಾರ: ಕೈಗಾ ಅಣುಸ್ಥಾವರದ ಸುತ್ತ ಮುತ್ತಲ ಹಳ್ಳಿಗಳಲ್ಲಿ ಕ್ಯಾನ್ಸರ್‌ ಹೆಚ್ಚಿದೆ ಎಂಬ ಆಘಾತಕಾರಿ ವರದಿ ಬಹಿರಂಗವಾಗಿದೆ. ಮುಂಬೈನ ಟಾಟಾ ಮೆಮೂರಿಯಲ್‌ ಕ್ಯಾನ್ಸರ್‌ ಆಸ್ಪತ್ರೆ ಅಧೀನದ ನುರಿತ ಸಿಬ್ಬಂದಿ 2010-13ರಲ್ಲಿ ಮಾಡಿದ ಸರ್ವೇ ವರದಿ 2018ರ ಮಾರ್ಚ್‌ನಲ್ಲಿ ಜಿಲ್ಲಾಡಳಿತಕ್ಕೆ ಸಲ್ಲಿಕೆಯಾಗಿದ್ದು, ಅದೀಗ
ಬಹಿರಂಗವಾಗಿದೆ.

Advertisement

ಕಾರವಾರ ತಾಲೂಕಿನಲ್ಲೇ 316 ಕ್ಯಾನ್ಸರ್‌ ರೋಗಿಗಳು ಇದ್ದಾರೆಂಬ ಅಂಶ ಹೊರ ಬಂದಿದ್ದು, ಯಲ್ಲಾಪುರ,
ಅಂಕೋಲಾ, ಜೋಯಿಡಾ ತಾಲೂಕಿನ ಕ್ಯಾನ್ಸರ್‌ ರೋಗಿಗಳ ಸಂಖ್ಯೆ ಸೇರಿದಲ್ಲಿ ಸಾವಿರ ದಾಟಿದೆ. ಆದರೆ ಈ
ಸಂಗತಿಯನ್ನು ರಹಸ್ಯವಾಗಿ ಇಡಲಾಗಿದೆ.

ಕಳೆದ 5 ವರ್ಷಗಳಿಂದ ಟಾಟಾ ಮೆಮೋರಿಯಲ್‌ ಕ್ಯಾನ್ಸರ್‌ ಆಸ್ಪತ್ರೆ ಸಿಬ್ಬಂದಿ ಇಲ್ಲಿನ ಆರೋಗ್ಯ ಇಲಾಖೆಯ
ಅಧೀನ ಕಚೇರಿಯಲ್ಲಿ ಪ್ರತ್ಯೇಕ ಶಾಖೆ ತೆರೆದು ದಿನನಿತ್ಯ ಕಾರವಾರ ತಾಲೂಕಿನ ನಿರ್ದಿಷ್ಟ ಹಳ್ಳಿಗಳಿಗೆ ತೆರಳಿ
ಜನರ ಆರೋಗ್ಯದ ಸ್ಥಿತಿಗತಿಗಳನ್ನು ದಾಖಲಿಸುತ್ತಿದ್ದಾರೆ. ಅಲ್ಲದೆ, ಯಲ್ಲಾಪುರ ತಾಲೂಕಿನ ಕೈಗಾ ಸಮೀಪದ ಕೆಲ
ಹಳ್ಳಿಗಳು, ಅಂಕೋಲಾ, ಜೋಯಿಡಾ ತಾಲೂಕಿನ ಕೆಲ ಹಳ್ಳಿಗಳು ಸಹ ಈ ಸರ್ವೇಯಲ್ಲಿ ಸೇರಿವೆ. ಈ ಸಂಬಂಧದ
ವರದಿಯ ಪ್ರತಿಯನ್ನು ಆರು ತಿಂಗಳಿಗೆ ಒಮ್ಮೆ ಸರ್ಕಾರಕ್ಕೆ ಮತ್ತು ಟಾಟಾ ಮೆಮೋರಿಯಲ್‌ ಆಸ್ಪತ್ರೆಯ ಮುಂಬೈ
ಶಾಖೆಗೆ ಸಲ್ಲಿಸಲಾ ಗುತ್ತಿದೆ. ಸದಾನಂದಗೌಡರು ಮುಖ್ಯ ಮಂತ್ರಿಯಾಗಿದ್ದಾಗ ಪರಿಸರವಾದಿಗಳು ಪ್ರತ್ಯೇಕ ಸರ್ವೇಗೆ ಆಗ್ರಹಿಸಿದ್ದರು. ಸದಾನಂದಗೌಡರು ಮುಂಬೈನ ಟಾಟಾ ಮೆಮೋರಿಯಲ್‌ ಕ್ಯಾನ್ಸರ್‌ ಆಸ್ಪತ್ರೆಗೆ ಸರ್ವೇ ಜವಾಬ್ದಾರಿ ವಹಿಸಿದ್ದರು.

ಅಲ್ಲಿಂದ ಅಧ್ಯಯನ ನಡೆಯುತ್ತಲೇ ಇದೆ.ಕ್ಯಾನ್ಸರ್‌ ರೋಗಿಗಳ ಸಂಖ್ಯೆಯನ್ನು ಮಾತ್ರ ಬಹಿರಂಗ ಮಾಡದೆ ರಹಸ್ಯ
ಕಾಪಾಡಿಕೊಂಡು ಬರಲಾಗಿತ್ತು. ಆದರೆ ಇದೀಗ ಕಾರವಾರ ತಾಲೂಕಿನಲ್ಲೇ ಕ್ಯಾನ್ಸರ್‌ ರೋಗಿಗಳ ಸಂಖ್ಯೆ ಹೆಚ್ಚಳವಾಗಿರುವ ಆತಂಕಕಾರಿ ಸಂಗತಿ ಬಯಲಾಗಿದೆ. ಕಾರವಾರ ತಾಲೂಕು ಒಂದರಲ್ಲೇ 316 ಕ್ಯಾನ್ಸರ್‌ ರೋಗಿಗಳು ಪತ್ತೆಯಾಗಿದ್ದು,2010 -2018ರವರೆಗೆ ಕ್ಯಾನ್ಸರ್‌ ರೋಗಿಗಳ ಪ್ರಮಾಣ ಶೇ.200 ರಷ್ಟು ಹೆಚ್ಚಾಗಿದೆ ಎಂಬ ಅಂಶ ಹೊರ ಬಂದಿದೆ. ಇದಕ್ಕೆ ಕೈಗಾ ಅಣುಸ್ಥಾವರದ ವಿಕಿರಣ ಕಾರಣವೇ ಎಂಬ ಅಂಶ ಮಾತ್ರ ಖಚಿತವಾಗಿಲ್ಲ.

ಎಲ್ಲೆಲ್ಲಿ ಚಿಕಿತ್ಸೆ?: ಕಾರವಾರ ತಾಲೂಕಿನ 316 ಕ್ಯಾನ್ಸರ್‌ ರೋಗಿಗಳು ಬೆಂಗಳೂರು, ಚೆನ್ನೈ, ಮಣಿಪಾಲ, 
ಮಂಗಳೂರು,ಹುಬ್ಬಳ್ಳಿ, ಮುಂಬೈ, ಗೋವಾ ಸೇರಿ ವಿವಿಧ 30 ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. 129 ಪುರುಷರು, 187 ಜನ ಮಹಿಳೆಯರಲ್ಲಿ ಕ್ಯಾನ್ಸರ್‌ ಪತ್ತೆಯಾಗಿದೆ. ತಂಬಾಕು ಸೇವನೆ,ಗುಟ್ಕಾ, ಪಾನ್‌, ಅಡಕೆಯಿಂದ ಪುರುಷರಲ್ಲಿ ಕ್ಯಾನ್ಸರ್‌ಗೆ ಕಾರಣವಾಗಿದ್ದರೆ, ಮಹಿಳೆಯರಲ್ಲಿನ ಕ್ಯಾನ್ಸರ್‌ಗೆ ಬೇರೆಯದೇ ಕಾರಣವಿದೆ. ಚಿಪ್ಪೆಕಲ್ಲು, ಥಿಸರೇ, ಕಲ್ವಾ ಆಹಾರ ಸೇವನೆಯಿಂದ ಏನಾದರೂ ಕ್ಯಾನ್ಸರ್‌ ಬರುತ್ತಿದೆಯೇ ಎಂಬುದು ಅಧ್ಯಯನದಿಂದಷ್ಟೇ ತಿಳಿದು ಬರಬೇಕಿದೆ.

Advertisement

ಇತರ ದೇಶಗಳಲ್ಲಿ
ಅಣುಸ್ಥಾವರ ಘಟಕಗಳಿರುವ ಚೀನಾದ ಶಾಂಘೈ ನಗರ, ಜಪಾನ್‌ನ ಓಸಕಾ ನಗರ,ಫಿನ್‌ ಲ್ಯಾಂಡ್, ಬ್ರಿಟನ್‌ನ
ಆಕ್ಸ್‌ ಫ‌ರ್ಡ್‌, ಯುಎಸ್‌ಎ, ಫ್ರಾನ್ಸ್‌ನ ಹೌಟ್‌ರಿನ್‌ ನಗರಗಳಲ್ಲಿನ ಕ್ಯಾನ್ಸರ್‌ ರೋಗಿಗಳ ಸಂಖ್ಯೆ ಗಮ ನಿಸಿದರೆ ಕಾರವಾರ ತಾಲೂಕಿನ ನಗರ, ಗ್ರಾಮೀಣ ಪ್ರದೇಶದಲ್ಲಿನ ಕ್ಯಾನ್ಸರ್‌ ರೋಗಿ ಗಳ ಪ್ರಮಾಣ ಕಡಿಮೆ ಎಂದು ಟಾಟಾ ಮೆಮೋರಿಯಲ್‌ ಕ್ಯಾನ್ಸರ್‌ ಆಸ್ಪತ್ರೆಯ ಅಧ್ಯಯನ ಸಂಸ್ಥೆ ಹೇಳಿದೆ.

ನಿರಾಕರಣೆ
ಕೈಗಾ ಘಟಕದ ವಿಜ್ಞಾನಿಗಳು ಮಾತ್ರ ಅಣುವಿಕಿರಣವೇ ಇಲ್ಲ. ಇನ್ನು ಕೈಗಾದಿಂದ ಕ್ಯಾನ್ಸರ್‌ ಬರಲು ಹೇಗೆ ಸಾಧ್ಯ ಎಂದು ವಾದಿ ಸುತ್ತಲೇ ಇದ್ದಾರೆ. ಅತಿ ಹೆಚ್ಚು ಪ್ರಮಾಣದಲ್ಲಿ ಅಣುಸ್ಥಾವರ ಉತ್ಪಾದನೆ ಸಹ ವಿಕಿರಣ ಹೆಚ್ಚು ಹೊರಸೂಸಲು ಕಾರಣ ಎಂದು ಅಣು ವಿದ್ಯುತ್‌ ವಿರೋಧಿ ಪರಿಸರ ವಿಜ್ಞಾನಿಗಳು ಹೇಳುತ್ತಲೇ ಇದ್ದಾರೆ. ಈ ಬಗ್ಗೆ ಇದೀಗ ಆರೋಗ್ಯ ಸಚಿವರು, ಸರ್ಕಾರ ಮೌನ ಮುರಿಯಬೇಕಿದೆ.

– ನಾಗರಾಜ ಹರಪನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next