ಉಡುಪಿ: ಕೋವಿಡ್-19 ನಿಯಂತ್ರಿಸುವಲ್ಲಿ ಯಶಸ್ವಿಯಾಗಿ ಹಸುರು ಜಿಲ್ಲೆ ಎಂಬ ಮಾನ್ಯತೆ ಪಡೆದಿದ್ದ ಉಡುಪಿ ಜಿಲ್ಲೆಯಲ್ಲಿ ಎರಡು ದಿನಗಳಲ್ಲಿ ಪತ್ತೆಯಾದ ಪ್ರಕರಣಗಳೀಗ ಜನರಲ್ಲಿ ಆತಂಕ ಸೃಷ್ಟಿಸಿದೆ.
ಹೊರರಾಜ್ಯ ಮತ್ತು ವಿದೇಶಗಳಲ್ಲಿದ್ದ ಉಡುಪಿ ಮೂಲದವರನ್ನು ಕರೆತರಲಾಗಿದ್ದು, ಅವರಲ್ಲಿ ಒಟ್ಟು 7 ಮಂದಿಗೆ ಕೋವಿಡ್-19 ದೃಢಪಟ್ಟಿದೆ. ಅದರಲ್ಲಿ ಇದೇ ಮೊದಲ ಬಾರಿಗೆ ಉಡುಪಿಯಲ್ಲಿ ಒಂದು ಸಾವು ಕೂಡ ಸಂಭವಿಸಿದೆ. ಇದರಿಂದ ಸಹಜವಾಗಿಯೇ ಜನರು ಆತಂಕಗೊಂಡಿದ್ದಾರೆ.
ಪರ ಊರಿನಲ್ಲಿರುವವರನ್ನು ಕರೆ ತರುವುದಕ್ಕೆ ವಿರೋಧ ಇಲ್ಲವಾದರೂ ಅವರನ್ನು ಆಯಾ ರಾಜ್ಯದ ಗಡಿಯಲ್ಲಿ ಅಥವಾ ಅವರು ನೇರವಾಗಿ ಬಂದಿಳಿದ ಪ್ರದೇಶದಲ್ಲೇ ಕ್ವಾರಂಟೈನ್ ಮಾಡಿದ್ದರೆ ಸೂಕ್ತವೆನಿಸುತ್ತಿತ್ತು. ಹೀಗೆ ಮಾಡಿದ್ದರೆ ಹಸುರು ಜಿಲ್ಲೆ ಯಾಗಿ 10 ದಿನಗಳ ಹಿಂದಷ್ಟೇ ಆರ್ಥಿಕತೆಗೆ ತೆರೆದುಕೊಳ್ಳುತ್ತಿರುವ ಜಿಲ್ಲೆಯಲ್ಲಿ ಮತ್ತೆ ಮೋಡ ಕವಿದ ವಾತಾವರಣ ಸೃಷ್ಟಿಯಾಗುತ್ತಿರಲಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಅಲ್ಲಲ್ಲೇ ನಿಗದಿತ ದಿನಗಳ ಕ್ವಾರಂಟೈನ್ ಮಾಡಿ, ಪರೀಕ್ಷೆಗೆ ಒಳಪಡಿಸಿದ್ದರೆ ಜಿಲ್ಲಾಡಳಿತಕ್ಕೂ ನಿರ್ವಹಣೆ ಸುಲಭ ವಾಗುತ್ತಿತ್ತು. ಸೋಂಕು ತಡೆಗಟ್ಟಲೂ ಅನುಕೂಲ ಕರ ವಾಗುತ್ತಿತ್ತು. ನಗರ ಪ್ರದೇಶದೊಳಗೆ ಕಟ್ಟು ನಿಟ್ಟಿನ ಕ್ವಾರಂಟೈನ್ ಮಾಡುವುದು ಸ್ವಲ್ಪ ಕಷ್ಟ ಎಂಬ ಅಭಿಪ್ರಾಯವೂ ಇದೆ. ಮುಖ್ಯ ವಾಗಿ ದುಬಾೖಯಿಂದ ಬಂದವರನ್ನು ಅಲ್ಲಿ ಸರಿಯಾಗಿ ಪರೀಕ್ಷೆ ನಡೆಸಲಾಗಿಲ್ಲ ಎಂಬ ಆರೋಪವೂ ವ್ಯಕ್ತವಾಗಿದೆ. ಇದಕ್ಕೆ ಪೂರಕ ಎಂಬಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಅವರೂ ಕೂಡ ಈ ಬಗ್ಗೆ ಸರಕಾರಕ್ಕೆ ಬರೆಯಲಾಗುವುದು. ಅಲ್ಲಿ ಒಮ್ಮೆ ಪರೀಕ್ಷೆ ನಡೆಸಿದರೆ ಇಲ್ಲಿ ಅನಂತರ ಸಮಸ್ಯೆ ಎದುರಿಸುವುದು ತಪ್ಪುತ್ತದೆ ಎಂದು ಹೇಳಿದ್ದರು. ಇದರಿಂದ ಕೆಲವೇ ಕೆಲವರಲ್ಲಿ ಇರಬಹುದಾದ ಸೋಂಕು ಪ್ರಯಾಣದ ವೇಳೆ ಇನ್ನಷ್ಟು ಮಂದಿಗೆ ಹರಡುವುದು ತಪ್ಪುತ್ತದೆ ಎನ್ನುವುದು ಅದರ ಉದ್ದೇಶವಾಗಿತ್ತು. ಸೋಂಕು ಇದ್ದವರಿಗೆ ಅಲ್ಲಿಯೇ ಚಿಕಿತ್ಸೆಗೆ ವ್ಯವಸ್ಥೆ ಮಾಡಿ ಅನಂತರ ಕರೆತರುವುದು ಉತ್ತಮ ಎಂಬುದು ಸಾರ್ವಜನಿಕರ ಅಭಿಮತವಾಗಿದೆ.
ಹೊರರಾಜ್ಯಗಳಿಂದ ಬರುವವರನ್ನೂ ಒಮ್ಮೆ ಪರೀಕ್ಷೆ ನಡೆಸಿ ಕರೆತಂದರೆ ಅವರಿಗೂ ಉತ್ತಮ. ಅವರ ಜತೆಗೆ ಬರುವವರಿಗೂ ಉತ್ತಮ. ಯಾವುದೇ ಪರೀಕ್ಷೆ ನಡೆಸದೆ ಕೇವಲ ಥರ್ಮಲ್ ಸ್ಕ್ರೀನಿಂಗ್‌ನಿಂದ ದೇಹದ ಉಷ್ಣತೆಯನ್ನು ಮಾತ್ರ ತಿಳಿಯಲು ಸಾಧ್ಯ. ಸೋಂಕು ಪತ್ತೆ ಹಚ್ಚಲು ಅಸಾಧ್ಯ. ಕೋವಿಡ್-19 ಇದ್ದವರಿಗೆ ಜ್ವರ ಬರಲೇಬೇಕೆಂದೇನಿಲ್ಲ ಎಂಬುದು ತಜ್ಞರ ಅಭಿಮತ. ಮಂಗಳೂರಿನ ನಿನ್ನೆಯ ಮತ್ತು ಉಡುಪಿಯ ಇಂದಿನ ಪ್ರಕರಣಗಳಲ್ಲಿ ಮುಖ್ಯವಾಗಿ ಸೋಂಕಿತರಿಗೆ ಕೋವಿಡ್-19 ಲಕ್ಷಣವೇ ಇರಲಿಲ್ಲ. ಇತರ ಸಮಸ್ಯೆಗೆ ಚಿಕಿತ್ಸೆ ನೀಡಲು ಪರೀಕ್ಷೆ ನಡೆಸಿದಾಗ ಸೋಂಕು ಪತ್ತೆಯಾಗಿತ್ತು.
ಹೊರ ದೇಶ,ರಾಜ್ಯ,ಜಿಲ್ಲೆಗಳಿಂದ ತವರೂರಿಗೆ ಬರ ಬಾರದು ಎಂದು ಯಾರೂ ಹೇಳುವುದಿಲ್ಲ. ಅವರಿಗೂ ಪರ ಊರುಗಳಿಗಿಂತ ತಮ್ಮ ಊರಿ ನಲ್ಲೇ ಕ್ಷೇಮ ಎಂಬ ಅಭಿ ಪ್ರಾಯ ಇರುತ್ತದೆ. ಹಾಗೆ ಬಂದವರೂ ಸ್ಥಳೀಯರ ವಿರೋಧ ಅಥವಾ ಸ್ಥಳೀಯರ ಅಸಹಕಾರಕ್ಕೆ ಒಳಗಾಗಬಾರದು. ಅದು ಇನ್ನಷ್ಟು ಅಮಾನವೀಯ ಎನಿಸುತ್ತದೆ. ಸ್ಥಳೀಯರೂ ತಮ್ಮ ಸುರಕ್ಷೆಗೆ ವಿರೋಧ ವ್ಯಕ್ತ ಪಡಿಸುತ್ತಿದ್ದೇವೆ ಎನ್ನುವಾಗ ಇಬ್ಬರದ್ದೂ ಅವರವರ ದೃಷ್ಟಿಕೋನಗಳಲ್ಲಿ ಸರಿ ಎನಿಸುತ್ತದೆ. ಇದು ಅನಗತ್ಯ ಗೊಂದಲವನ್ನು ಉಂಟು ಮಾಡುವುದರಿಂದ ಸರಕಾರ ಸೂಕ್ತ ವ್ಯವಸ್ಥೆ ಗಳನ್ನು ಗಡಿಯಲ್ಲಿಯೇ ಮಾಡಿ, ತಪಾಸಣೆ ನಡೆಸಿ ಕರೆತಂದರೆ ವಾಹನಗಳಲ್ಲಿ ಒಟ್ಟಾಗಿ ಬರುವ ಜನರ ಆರೋಗ್ಯಕ್ಕೂ, ಪರಿಸ್ಥಿತಿಯನ್ನು ನಿಭಾಯಿಸುವ ಜಿಲ್ಲಾಡಳಿತಕ್ಕೂ ಉತ್ತಮ. ಮಾತ್ರ ವಲ್ಲದೆ ಆರ್ಥಿಕತೆ ಚೇತರಿಕೆಗೂ ಅನು ಕೂಲಕರ. ಜಿಲ್ಲಾಡಳಿತ ಈ ದಿಕ್ಕಿನಲ್ಲಿ ಕಾರ್ಯ ಪ್ರವೃತ್ತವಾಗಬೇಕೆನ್ನುವುದು ಜನಾಗ್ರಹ.