ಮಂಗಳೂರು: ವಾಣಿಜ್ಯ ಹಡಗುಗಳ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಲು ಸಮುದ್ರದಲ್ಲಿ 15ರಿಂದ 20 ನಾಟಿಕಲ್ ಮೈಲುಗಳ ನಡುವಣ ವಲಯವನ್ನು “ಶಿಪ್ಪಿಂಗ್ ಕಾರಿಡಾರ್’ ಆಗಿ ಘೋಷಿಸಿ ಮೀನುಗಾರಿಕೆ ನಿಷೇಧಿಸಲು ಕೇಂದ್ರ ನೌಕಾಯಾನ ಸಚಿವಾಲಯ ತೀರ್ಮಾನಿಸಿದೆ. ಇದು ಮೀನುಗಾರಿಕೆಯನ್ನು ನಂಬಿರುವ ಲಕ್ಷಾಂತರ ಮಂದಿಗೆ ಸಂಕಷ್ಟ ತರುವ ಆತಂಕವಿದೆ.
ಸಮುದ್ರದಲ್ಲಿ 15ರಿಂದ 20 ನಾಟಿಕಲ್ ಮೈಲು ನಡುವಣ 5 ನಾಟಿಕಲ್ ಮೈಲು ವಲಯವನ್ನು ಶಿಪ್ಪಿಂಗ್ ಕಾರಿಡಾರ್ ಆಗಿ ಗುರುತಿಸಲು ಶಿಪ್ಪಿಂಗ್ ಮಹಾನಿರ್ದೇಶಕರು (ಡಿಜಿಎಸ್) ಉದ್ದೇಶಿಸಿದ್ದಾರೆ. ಮೀನುಗಾರಿಕೆ ದೋಣಿಗಳು ಹಾಗೂ ವಾಣಿಜ್ಯ ಹಡಗುಗಳ ಢಿಕ್ಕಿ ತಪ್ಪಿಸುವುದು ಇದರ ಮುಖ್ಯ ಉದ್ದೇಶ. ಈ ಪ್ರಸ್ತಾವನೆ ವಿರೋಧಿಸಿ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಮೀನುಗಾರರು ಮುಂದಾಗಿದ್ದಾರೆ.
ಶಿಪ್ಪಿಂಗ್ ಕಾರಿಡಾರ್ ಗುಜರಾತ್‌ನ ಕಚ್fನಿಂದ ಕರ್ನಾಟಕ-ಕೇರಳ ವರೆಗಿನ ಪ. ಕರಾವಳಿ ಹಾಗೂ ಪೂರ್ವ ಕರಾವಳಿಯ ಸುಮಾರು 3 ಕೋಟಿ ಮೀನು ಗಾರರ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. 2,300 ಕಿ.ಮೀ. ಉದ್ದ ಹಾಗೂ 37.04 ಕಿ.ಮೀ. (20 ನಾಟಿಕಲ್ ಮೈಲ್) ಅಗಲ ಪ್ರದೇಶದಲ್ಲಿ ಮೀನುಗಾರಿಕೆ ನಿಷೇಧವಾಗಿ ಒಟ್ಟು 85,000 ಚ. ಕಿ.ಮೀ. ಪ್ರದೇಶ ಮೀನುಗಾರಿಕೆ ಚಟುವಟಿಕೆಯಿಂದ ವಂಚಿತವಾಗಲಿದೆ. ಈ ಅಧಿಸೂಚನೆ ಪ್ರಕಟವಾದರೆ ಯಾಂತ್ರೀಕೃತ ದೋಣಿಗಳು ತೀರದಿಂದ 20 ನಾ. ಮೈಲು ದೂರದವರೆಗೆ ಮೀನುಗಾರಿಕೆ ಮಾಡುವಂತಿಲ್ಲ. ಸಣ್ಣ ಮೀನುಗಾರಿಕೆ ದೋಣಿಗಳು 27.78 ಕಿ.ಮೀ. (15 ನಾಟಿಕಲ್ ಮೈಲು) ಕಿ.ಮೀ.ಯಿಂದಾಚೆಗೆ ಮೀನುಗಾರಿಕೆಗೆ ಹೋಗುವಂತಿಲ್ಲ.
ಸರಕಾರ ಈ ನಿರ್ಧಾರ ಕೈಗೊಳ್ಳುವುದಕ್ಕೆ ಮುನ್ನ ಮೀನುಗಾರ ಸಮುದಾಯ, ಸಂಘಟನೆಗಳ ಜತೆ ಚರ್ಚಿಸಿಲ್ಲ. ಮೀನುಗಳ ನಿಕ್ಷೇಪ ಇಂಥಲ್ಲೇ ಇರುತ್ತದೆ ಎಂದು ಹೇಳಲಾಗದು. ಅದರ ಜಾಡು ಹಿಡಿದು ಮೀನುಗಾರಿಕೆ ಬೋಟುಗಳು ಚಲಿಸಬೇಕಾಗುತ್ತದೆ. ಭಾರತಕ್ಕೆ ಸೇರಿದ ಸಮುದ್ರ ಭಾಗದಲ್ಲಿ 200 ನಾಟಿಕಲ್ ಮೈಲುವರೆಗೆ ನಮಗೆ ಮೀನುಗಾರಿಕೆ ನಡೆಸಲು ಅವಕಾಶವಿದೆ. ಉದ್ದೇಶಿತ ಶಿಪ್ಪಿಂಗ್ ಕಾರಿಡಾರ್ ಪ್ರದೇಶವೇ ಮೀನುಗಾರಿಕೆಯ ಪ್ರಮುಖ
ತಾಣ. ಆದುದರಿಂದ ಇಲ್ಲಿ ನಿಷೇಧ ಸರಿಯಲ್ಲ ಎಂದು ಮೀನುಗಾರಿಕೆ ಸಂಘಟನೆಗಳು ಹೇಳುತ್ತಿವೆ.
ಈವರೆಗೆ ಶಿಪ್ಪಿಂಗ್ ಕಾರಿಡಾರ್ ಇರಲಿಲ್ಲ. ಈಗ ಕೇಂದ್ರ ಸರಕಾರ ಸಾಗರಮಾಲಾ ಯೋಜನೆಯಡಿ ವಾಣಿಜ್ಯ ಹಡಗುಗಳ ಸಂಚಾರಕ್ಕೆ ನಿರ್ದಿಷ್ಟ ಪಥ ಗುರುತಿಸಲು ಉದ್ದೇಶಿಸಿದೆ. ಇದೊಂದು ಉತ್ತಮ ಕ್ರಮ ಎಂಬುದು ವಾಣಿಜ್ಯ ಹಡಗಿನ ಮಾಜಿ ಕ್ಯಾಪ್ಟನ್ ಒಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆ
ಕೇಂದ್ರ ಸರಕಾರದ ನೌಕಾ ಯಾನ ಸಚಿವಾಲಯದ ಪ್ರಸ್ತಾವನೆಯನ್ನು ಪ್ರತಿಭಟಿಸಿ ದೇಶಾದ್ಯಂತ ಅ. 30ರಂದು ಪ್ರತಿಭಟನೆ ನಡೆದಿದೆ. ಮಂಗಳೂರು ಹಾಗೂ ಮಲ್ಪೆಯಲ್ಲೂ ಟ್ರಾಲ್‌ಬೋಟು, ಪರ್ಸಿನ್ ಹಾಗೂ ಗಿಲ್‌ನೆಟ್ ಬೋಟುಗಳ ಮೀನುಗಾರರು ಸಭೆ ನಡೆಸಿ ಸಾಂಕೇತಿಕ ಪ್ರತಿಭಟನೆ ನಡೆಸಿದ್ದಾರೆ.
ಶಿಪ್ಪಿಂಗ್ ಕಾರಿಡಾರ್ ರೂಪಿಸಿ, ಮೀನುಗಾರಿಕೆ ನಿಷೇಧಿಸುವ ಕೇಂದ್ರದ ಪ್ರಸ್ತಾವನೆ ಮೀನುಗಾರಿಕೆಗೆ ತೀವ್ರ ಹೊಡೆತ ನೀಡಲಿದೆ. ಇದರ ವಿರುದ್ಧ ರಾಷ್ಟ್ರೀಯ ಮೀನುಗಾರರ ವೇದಿಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಅ.30ರಂದು ದೇಶಾದ್ಯಂತ ಒಂದು ದಿನದ ಪ್ರತಿಭಟನೆ ನಡೆದಿದ್ದು, ಇಲ್ಲೂ ಮೀನುಗಾರರು ಸಾಂಕೇತಿಕ ಪ್ರತಿಭಟನೆ ನಡೆಸಿದ್ದಾರೆ.
-ವಾಸುದೇವ ಬೋಳೂರು, ರಾ. ಮೀನುಗಾರರ ವೇದಿಕೆ ಉಪಾಧ್ಯಕ್ಷ
– ಕೇಶವ ಕುಂದರ್