Advertisement

ಜಲಾಶಯಗಳಲ್ಲಿ ಹೆಚ್ಚಿದ ಜೀವಕಳೆ; ಒಳಹರಿವು ಪ್ರಮಾಣ ಹೆಚ್ಚಳ

10:11 PM Jul 24, 2023 | Team Udayavani |

ಬೆಂಗಳೂರು: ರಾಜ್ಯದ ಬಹುತೇಕ ಭಾಗಗಳಲ್ಲಿ ಧಾರಾಕಾರ ಮಳೆ ಸೋಮವಾರವೂ ಮುಂದುವರಿದಿದೆ. ಜಲಾಶಯಗಳಲ್ಲಿ ಒಳ ಹರಿವಿನ ಪ್ರಮಾಣ ಅಧಿಕ ವಾಗಿದ್ದು, ನೀರಿನ ಮಟ್ಟದಲ್ಲಿ ಏರಿಕೆ ಕಂಡು ಬರುತ್ತಿದೆ.

Advertisement

ಕೃಷ್ಣರಾಜಸಾಗರ, ಹಾರಂಗಿ, ಹೇಮಾವತಿ, ತುಂಗಾ ಜಲಾಶಯಗಳು ಮೈದುಂಬಿಕೊಂಡಿದ್ದು, ಹೊರ ಹರಿವಿನ ಪ್ರಮಾಣವೂ ಹೆಚ್ಚಾಗಿದೆ.

ಕಾವೇರಿಯ ಉಗಮ ಕೊಡಗು ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಕೃಷ್ಣರಾಜ ಸಾಗರ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಕೆಆರ್‌ ಎಸ್‌ ಜಲಾಶಯಕ್ಕೆ ಒಳ ಹರಿವು ಪ್ರಮಾಣ ಅಧಿಕವಾಗಿದ್ದು, ಜಲಾಶಯದಲ್ಲಿ ನೀರಿನ ಮಟ್ಟ 97 ಅಡಿಗೆ ಏರಿಕೆ ಕಂಡು ಬಂದಿದೆ. ಸೋಮವಾರ ಸಂಜೆ ಗೆ 37,130 ಕ್ಯೂಸೆಕ್‌ ನೀರು ಜಲಾ ಶ ಯಕ್ಕೆ ಹರಿದು ಬರುತ್ತಿದೆ.

ಕೊಡಗು ಪ್ರದೇಶದಲ್ಲಿ ಮಳೆ ಹೆಚ್ಚಾಗಿದ್ದರಿಂದ ಹಾರಂಗಿ ಜಲಾಶಯ ಭರ್ತಿಯಾಗಿದ್ದು, ಜಲಾಶ ಯದಿಂದ 20 ಸಾವಿರ ಕ್ಯೂಸೆಕ್‌ ಹೆಚ್ಚಿನ ಪ್ರಮಾಣದ ನೀರನ್ನು ಹೊರ ಬಿಡಲಾಗುತ್ತಿದೆ. ಕೊಡಗು ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಮಳೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಕೆಆರ್‌ಎಸ್‌ಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುವ ಸಾಧ್ಯತೆ ಹೆಚ್ಚಾಗಿದೆ. ಕೊಡಗಿನಲ್ಲಿ ಬೀಳುತ್ತಿರುವ ಅಪಾರ ಮಳೆಯಿಂದಾಗಿ ಲಕ್ಷ್ಮಣತೀರ್ಥ ನದಿಯ ಪ್ರವಾಹದಿಂದಾಗಿ ಹುಣಸೂರು ತಾಲೂಕಿನ ಕಟ್ಟೆಮಳಲವಾಡಿಯ ಅಣೆಕಟ್ಟೆ ಮೇಲೆ ಅಪಾರ ಪ್ರಮಾಣದ ನೀರು ಹರಿಯುತ್ತಿದೆ.

ಸಕಲೇಶಪುರ, ಚಿಕ್ಕಮಗಳೂರು, ಮೂಡಿಗೆರೆ ಭಾಗದಲ್ಲಿ ಭಾರೀ ಮಳೆಯಿಂದಾಗಿ ಹೇಮಾವತಿ ನದಿಗೆ ಒಳಹರಿವು ಹೆಚ್ಚಾಗಿದೆ. ಹೇಮಾವತಿ ಜಲಾಶಯಕ್ಕೆ ಸೋಮವಾರ 23,142 ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಗರಿಷ್ಠ 37.10 ಟಿಎಂಸಿ ನೀರು ಸಂಗ್ರಹದ ಹೇಮಾವತಿ ಜಲಾಶಯದಲ್ಲಿ 22 ಟಿಎಂಸಿ ನೀರು ಸಂಗ್ರಹವಾಗಿದೆ.

Advertisement

ಇನ್ನು ಮಲೆನಾಡು ಪ್ರದೇಶವಾದ ಶೃಂಗೇರಿ, ಕೊಪ್ಪ, ತೀರ್ಥಹಳ್ಳಿ ಭಾಗದಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ತುಂಗಾ ನದಿಗೆ ಭಾರೀ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ. ಸೋಮವಾರ ಮಧ್ಯಾಹ್ನ 67 ಸಾವಿರ ಕ್ಯೂಸೆಕ್‌ ಒಳಹರಿವು ಇದ್ದು, ಅಷ್ಟೇ ಪ್ರಮಾಣದ ನೀರನ್ನು ತುಂಗಾ ಜಲಾಶಯದಿಂದ ಹೊರಬಿಡಲಾಗುತ್ತಿದೆ. ಭದ್ರಾಗೆ 40 ಸಾವಿರ ಕ್ಯೂಸೆಕ್‌, ಲಿಂಗನಮಕ್ಕಿಗೆ 75 ಸಾವಿರ ಕ್ಯೂಸೆಕ್‌ ಒಳಹರಿವು ಇದೆ. ಕದ್ರಾ ಅಣೆಕಟ್ಟಿನಿಂದ 61135.0 ಕ್ಯೂಸೆಕ್‌, ಕೊಡಸಳ್ಳಿ ಅಣೆಕಟ್ಟಿನಿಂದ 25728 ಕ್ಯೂಸೆಕ್‌, ಬೊಮ್ಮನಹಳ್ಳಿ ಪಿಕ್‌ ಅಪ್‌ ಡ್ಯಾಂನಿಂದ 1240 ಕ್ಯೂಸೆಕ್‌ ನೀರನ್ನು ನದಿಗೆ ಬಿಡಲಾಗಿದೆ. ಇನ್ನು, ಘಟಪ್ರಭಾ ನದಿ ಹರಿವು ಹೆಚ್ಚಾಗಿದ್ದರಿಂದ ಹಿಡಕಲ್‌ ಜಲಾಶಯದಲ್ಲಿ ಸುಮಾರು ಆರು ಅಡಿಗಳಷ್ಟು ನೀರು ಸಂಗ್ರಹವಾಗಿದೆ. ಗಾಜನೂರಿನ ತುಂಗಾ ಜಲಾಶಯದ 21 ಕ್ರಸ್ಟ್‌ಗೇಟ್‌ಗಳ ಮೂಲಕ ನದಿಗೆ ನೀರು ಹರಿಸಲಾಗುತ್ತಿದೆ.

ಕೊಡಗು ಜಿಲ್ಲೆಯ ಪ್ರಮುಖ ಜಲಾಶಯಗಳಲ್ಲಿ ಒಂದಾದ ಹಾರಂಗಿ ವ್ಯಾಪ್ತಿಯಲ್ಲಿ ನೀರಿನ ಒಳಹರಿವಿನ ಪ್ರಮಾಣ ಹೆಚ್ಚಳವಾಗಿದೆ. ನೀರಿನ ಹೊರ ಹರಿವು ನದಿಗೆ 23937 ಕ್ಯುಸೆಕ್‌ ಆಗಿದೆ. ಭಾಗಮಂಡಲದಲ್ಲಿ ಕಾವೇರಿ ಅಪಾಯಕಾರಿ ಮಟ್ಟದಲ್ಲಿ ಹರಿಯುತ್ತಿದ್ದು, ಪ್ರವಾಹದ ನೀರು ಶ್ರೀ ಭಗಂಡೇಶ್ವರ ದೇಗುಲದ ಮೆಟ್ಟಿಲುಗಳನ್ನು ಆವರಿಸಿದೆ. ದಕ್ಷಿಣ ಕೊಡಗಿನ ಲಕ್ಷ್ಣಣ ತೀರ್ಥ ನದಿಯ ಪ್ರವಾಹದಿಂದ ಬಾಳೆಲೆ ವ್ಯಾಪ್ತಿಯಲ್ಲಿ ಜನಜೀವನ ದುಸ್ತರವಾಗಿದೆ. ಕುಶಾಲನಗರದ ಕೆಲವು ಬಡಾವಣೆೆಗಳು ಹಾರಂಗಿಯಿಂದ ಹೊರ ಬಿಡುತ್ತಿರುವ ಭಾರೀ ಪ್ರಮಾಣದ ನೀರಿನಿಂದ ಪ್ರವಾಹದ ಆತಂಕಕ್ಕೆ ಸಿಲುಕಿವೆ.

ಸುಬ್ರಹ್ಮಣ್ಯ-ವನಗೂರು ಮಾರ್ಗ ಬಂದ್‌
ಹಾಸನ ಜಿಲ್ಲಾ ಕೇಂದ್ರ ಸೇರಿ ಸಕಲೇಶಪುರ, ಆಲೂರು, ಬೇಲೂರು ಹಾಗೂ ಅರಕಲಗೂಡು ತಾಲೂಕುಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಹಳ್ಳಕೊಳ್ಳಗಳು ಉಕ್ಕಿ ಹರಿಯುತ್ತಿವೆ. ಸೋನೆಮಳೆಗೆ ಹಾಸನದಿಂದ ಹೆಗದ್ದೆ ನಡುವೆ ನಡೆಯುತ್ತಿರುವ ಚತುಷ್ಪಥ ಹೆದ್ದಾರಿ ಕಾಮಗಾರಿಯ ಹಲವೆಡೆ ಬಿರುಕು ಮೂಡಿದ್ದು ಕೆಲವೆಡೆ ಭೂಕುಸಿತ ಸಂಭವಿಸಿಸಿದೆ. ಸಕಲೇಶಪುರ ತಾಲೂಕಿನ ಬಿಸಿಲೆ ಸಮೀಪದ ಹಡ್ಲಗದ್ದೆ ಸಮೀಪ ಗುಡ್ಡಕುಸಿದ ಪರಿಣಾಮ ಸುಬ್ರಹ್ಮಣ್ಯ-ವನಗೂರು ಮಾರ್ಗ ಸಂಪೂರ್ಣವಾಗಿ ಬಂದ್‌ ಆಗಿದೆ. ತಾಲೂಕಿನ ಎಲ್ಲಾ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಸೋಮವಾರ ರಜೆ ನೀಡಿದ್ದು ಮಂಗಳವಾರ ಸಹ ಜಿಲ್ಲಾಡಳಿತ ರಜೆ ಘೋಷಣೆ ಮಾಡಿದೆ.

ಸಿದ್ದಾಪುರ, ಭಾಗಮಂಡಲದಲ್ಲಿ ಅತ್ಯಧಿಕ ಮಳೆ
ಬೆಂಗಳೂರು: ಸೋಮವಾರ ಬೆಳಗ್ಗೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ರಾಜ್ಯದ ಎಲ್ಲೆಡೆ ಮಳೆಯಾಯಿತು. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಮತ್ತು ಕೊಡಗು ಜಿಲ್ಲೆಯ ಭಾಗಮಂಡಲದಲ್ಲಿ ರಾಜ್ಯದ ಅತ್ಯಧಿಕ 20 ಸೆಂ.ಮೀ. ಮಳೆಯಾಯಿತು. ಇದೇ ಅವಧಿಯಲ್ಲಿ ರಾಜ್ಯದ ವಿವಿಧೆಡೆ ಸುರಿದ ಮಳೆಯ ಪ್ರಮಾಣ ಹೀಗಿದೆ (ಸೆಂ.ಮೀ.ಗಳಲ್ಲಿ): ಕ್ಯಾಸಲ್‌ರಾಕ್‌ 19, ಗೇರುಸೊಪ್ಪ 18, ಯಲ್ಲಾಪುರ, ಸುಬ್ರಹ್ಮಣ್ಯ ತಲಾ 17, ಮಾಣಿ, ಕೊಟ್ಟಿಗೆಹಾರ ತಲಾ 16, ನಾಪೊಕ್ಲು 15, ಕದ್ರಾ, ಕುಮಟಾ, ಮಂಕಿ, ಹುಂಚದಕಟ್ಟೆ, ಮೂರ್ನಾಡು 14, ಶಿರಾಲಿ, ಹೊನ್ನಾವರ, ಕೊಲ್ಲೂರು, ತಾಳಗುಪ್ಪ, ಸೋಮವಾರಪೇಟೆ, ಕಮ್ಮರಡಿ, ಕೊಪ್ಪ ತಲಾ 13, ಉಪ್ಪಿನಂಗಡಿ 12, ಸಿದ್ದಾಪುರ, ಪುತ್ತೂರು, ಬೆಳ್ತಂಗಡಿ, ಧರ್ಮಸ್ಥಳ ತಲಾ 11, ಮಂಗಳೂರು, ಕಳಸ, ಜಯಪುರ, ಕಾರ್ಕಳ ತಲಾ 10 ಸೆಂ.ಮೀ.ಮಳೆಯಾಗಿದೆ. ಬುಧವಾರ ಬೆಳಗ್ಗೆ ವರೆಗಿನ ಮುನ್ಸೂಚನೆಯಂತೆ ರಾಜ್ಯದ ಎಲ್ಲೆಡೆ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯ ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next