ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ ಪದವಿ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷಾ ಶುಲ್ಕ ಹೆಚ್ಚಳ ಹಾಗೂ ಹೆಚ್ಚಿಸಿರುವ ಶುಲ್ಕ ವಾಪಸ್ ಪಡೆಯುವಂತೆ ಆಗ್ರಹಿಸಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಕೋವಿಡ್ ಸಂದರ್ಭದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಗಳ 2, ಮತ್ತು 4ನೇ ಸೆಮಿಸ್ಟರ್‌ನ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೆ ಪಾಸ್
ಮಾಡಲಾಗಿದೆ. ಆದರೂ ಪರೀಕ್ಷಾ ಶುಲ್ಕವನ್ನು ಕಟ್ಟಿಸಿಕೊಳ್ಳಲಾಗಿದೆ. ಪರೀಕ್ಷೆ ನಡೆಸಿಲ್ಲವೆಂದ ಮೇಲೆ ಶುಲ್ಕವನ್ನು ಪಡೆಬಾರದಿತ್ತು. ಹೀಗಾಗಿ ಕಟ್ಟಿರುವ ಪರೀಕ್ಷಾ ಶುಲ್ಕವನ್ನು ಮುಂದಿನ ಸೆಮಿಸ್ಟರ್ ಪರೀಕ್ಷೆಗಳಿಗೆ ಪರಿಗಣಿಸುವಂತೆ ಮನವಿಯಲ್ಲಿ ಆಗ್ರಹಿಸಿದ್ದಾರೆ.
ಪರೀಕ್ಷೆಯಲ್ಲಿ ಬಂದಿರುವ ಅಂಕಗಳು ಸಮಾಧಾನ ತಂದಿಲ್ಲ ಎಂಬ ಕಾರಣಕ್ಕೆ ಅನೇಕ ವಿದ್ಯಾರ್ಥಿಗಳು ಮರು ವೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇದುವರೆಗೂ ಮರುಮೌಲ್ಯಮಾಪನದ ಫಲಿತಾಂಶ ಪ್ರಕಟಿಸಿಲ್ಲ. ಆದರೂ ಮುಂದಿನ ಸೆಮಿಸ್ಟರ್‌ನ ಪರೀಕ್ಷಾ ಶುಲ್ಕವನ್ನು ಕಟ್ಟಿಸಿಕೊಳ್ಳುತ್ತಿರುವುದು ವಿದ್ಯಾರ್ಥಿಗಳನ್ನು ಗೊಂದಲಕ್ಕೀಡು ಮಾಡುತ್ತಿದೆ ಎಂದು ಹೇಳಿದ್ದಾರೆ.
ಇಇದನ್ನೂ ಓದಿ:ಹೂಡಿಕೆದಾರರಿಗೆ ಭರ್ಜರಿ ಲಾಭ: 59 ಸಾವಿರ ಗಡಿ ದಾಟಿದ ಮುಂಬಯಿ ಷೇರುಪೇಟೆ ಸೆನ್ಸೆಕ್ಸ್
ಇದನ್ನು ತಪ್ಪಿಸಲು ವಿವಿ ಪರೀಕ್ಷಾವಿಭಾಗ ಆದಷ್ಟು ಬೇಗ ಮರುವೌಲ್ಯಮಾಪನದ ಫಲಿತಾಂಶ ಪ್ರಕಟಿಸಬೇಕು. ಪಾಸಾದ ವಿದ್ಯಾರ್ಥಿಗಳ ಪರೀಕ್ಷಾಶುಲ್ಕವನ್ನು ವಾಪಸ್ ನೀಡಬೇಕು. ಕೊರೋನಾದಿಂದಾಗಿ ಬಹುತೇಕಪಾಠಗಳನ್ನು ಆನ್‌ಲೈನ್‌ನಲ್ಲಿ ಮಾಡಲಾಗಿದೆ. ಈ ಪಾಠವನ್ನು ಕೆಲವೇ ಕೆಲವು ವಿದ್ಯಾರ್ಥಿಗಳು ಮಾತ್ರ ಕೇಳಿದ್ದಾರೆ. ಪಠ್ಯಕ್ರಮ ಸಂಪೂರ್ಣವಾಗಿ ಮುಗಿದಿಲ್ಲ. ಆದ್ದರಿಂದ ಅಂತಿಮ ವರ್ಷದ ಪರೀಕ್ಷೆಗಳನ್ನು ಮುಂದೂಡಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವಂತೆ ಆಗ್ರಹಿಸಿದ್ದಾರೆ. ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕ ಧನುಷ್‌ಗೌಡ, ಲೋಹಿತ್, ಪ್ರವೀಣ, ಶ್ರೀಪಾದ, ವಿಜಯ ಎಂ. ಗೌಡ, ಭರತ್ ಮತ್ತಿತರರು ಇದ್ದರು.