ಚಿತ್ರದುರ್ಗ: ಬಿಸಿಯೂಟ ವ್ಯವಸ್ಥೆಯನ್ನು ಖಾಸಗಿಯವರಿಗೆ ವಹಿಸುವುದನ್ನು ವಿರೋಧಿಸಿ ಹಾಗೂ ಬಿಸಿಯೂಟ ತಯಾರಕರಿಗೆ ಕನಿಷ್ಠ ವೇತನ ಜಾರಿಗೊಳಿಸಲು ಆಗ್ರಹಿಸಿ ಎಐಟಿಯುಸಿ ನೇತೃತ್ವದಲ್ಲಿ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಮುಖ್ಯ ರಸ್ತೆಯಿಂದ ಮೆರವಣಿಗೆ ಆರಂಭಿಸಿ ಜಿಲ್ಲಾಧಿಕಾರಿ ಕಚೇರಿ ತಲುಪಿದ ಬಿಸಿಯೂಟ ತಯಾರಕರು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಸಿಬ್ಬಂದಿ ಒಂದೂವರೆ ದಶಕದಿಂದ ಕೆಲಸ ಮಾಡುತ್ತಿದ್ದಾರೆ. ಅಡುಗೆ ತಯಾರಕರಿಗೆ ಮಾಸಿಕ 2,700 ರೂ. ಹಾಗೂ ಸಹಾಯಕಿಯರಿಗೆ 2,600 ರೂ. ಗೌರವಧನ ನೀಡಲಾಗುತ್ತಿದೆ. ಇದರಿಂದ ಕುಟುಂಬ ನಿರ್ವಹಣೆ ತುಂಬಾ ಕಷ್ಟವಾಗಿದೆ ಎಂದು ಅಳಲು ತೋಡಿಕೊಂಡರು.
ರಾಜ್ಯದ ಸರ್ಕಾರಿ ಶಾಲೆಗಳ ಬಿಸಿಯೂಟ ಪೂರೈಕೆಯನ್ನು ಇಸ್ಕಾನ್ ಹಾಗೂ ಇತರೆ ಖಾಸಗಿ ಸಂಸ್ಥೆಗಳಿಗೆ ಕೊಡುವ ನಿರ್ಧಾರ ಕೈಬಿಡಬೇಕು. ಬಿಸಿಯೂಟ ತಯಾರಕರಿಗೆ ಕೆಲಸದ ಭದ್ರತೆ ಒದಗಿಸಬೇಕು. ಜತೆಗೆ ಶಾಲಾ ಸಿಬ್ಬಂದಿಯಾಗಿ ಪರಿವರ್ತಿಸಬೇಕು. ನಮ್ಮನ್ನು ಕಾರ್ಮಿಕರಾಗಿ ಪರಿಗಣಿಸಿ ಕಾರ್ಮಿಕ ಕಾಯ್ದೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಎಐಟಿಯುಸಿ ಮುಖಂಡರಾದ ಬಿ. ಬಸವರಾಜಪ್ಪ, ಜಿ.ಸಿ. ಸುರೇಶ್‌ಬಾಬು, ಟಿ.ಆರ್. ಉಮಾಪತಿ, ಕೆ.ಇ. ಸತ್ಯಕೀರ್ತಿ, ಗಣೇಶ್, ಸುವರ್ಣಮ್ಮ, ರಜೀಯಾ, ಪರ್ವೀನ್ ತಾಜ್, ಶಾರದಮ್ಮ, ಲತಾ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರಮುಖ ಬೇಡಿಕೆಗಳು: ಬಿಸಿಯೂಟ ತಯಾರಕರಿಗೆ ಪಿಎಫ್-ಇಎಸ್‌ಐ ಸೌಲಭ್ಯ ಜಾರಿಗೆ ತರಬೇಕು. ಬಿಸಿಯೂಟ ಯೋಜನೆ ಬದಲಿಗೆ ಬಿಸಿಯೂಟ ನಿರಂತರ ಕಾರ್ಯಕ್ರಮವಾಗಿ ಬದಲಿಸಬೇಕು. 60 ವರ್ಷ ದಾಟಿದ ಬಿಸಿಯೂಟ ತಯಾರಕರನ್ನು ಕೆಲಸದಿಂದ ಬಿಡುಗಡೆಗೊಳಿಸಿದಾಗ 2 ಲಕ್ಷ ರೂ. ಇಡಿಗಂಟು ನೀಡಬೇಕು. ಜತೆಗೆ ಮಾಸಿಕ 3 ಸಾವಿರ ರೂ. ಪಿಂಚಣಿ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು. ನಾಲ್ಕು ತಿಂಗಳಿನಿಂದಲೂ ವೇತನ ಇಲ್ಲದೇ ಜೀವನ ನಿರ್ವಹಣೆ ಕಷ್ಟಕರವಾಗಿದ್ದು, ಕೂಡಲೇ ವೇತನ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಮನವಿ ಮಾಡಿದರು.