Advertisement

ಸ್ಥಳೀಯ ರೈಲುಗಳಲ್ಲಿ ಟಿಕೆಟ್‌ ಇಲ್ಲದೆ ಪ್ರಯಾಣಿಸುವವರ ಸಂಖ್ಯೆಯಲ್ಲಿ ಹೆಚ್ಚಳ!

07:17 PM Nov 28, 2020 | mahesh |

ಮುಂಬಯಿ: ಮುಂಬಯಿ ಸ್ಥಳೀಯ ರೈಲುಗಳಲ್ಲಿ ಸಾರ್ವಜನಿಕರನ್ನು ಹೊರತು ಪಡಿಸಿ ಇತರ ಸೇವಾ ಸಿಬಂದಿಗಳಿಗೆ ಅವಕಾಶ ನೀಡುವುದರ ಜತೆಗೆ ಮಧ್ಯ ಮತ್ತು ಪಶ್ಚಿಮ ಮಾರ್ಗಗಳಲ್ಲಿಯ ರೈಲಿನಲ್ಲಿ ಟಿಕೆಟ್‌ ಇಲ್ಲದೆ ಪ್ರಯಾಣಿಸುವವರ ಸಂಖ್ಯೆಯೂ ಹೆಚ್ಚಾಗ ತೊಡಗಿದೆ. ರೈಲ್ವೇ ಆಡಳಿತ 2020ರ ಜೂನ್‌ನಿಂದ ಇಲ್ಲಿಯ ತನಕ ಮುಂಬಯಿ ಉಪನಗರಗಳ ರೈಲು ನಿಲ್ದಾಣಗಳಲ್ಲಿ ಹಾಗೂ ಮೇಲ…-ಎಕ್ಸ್‌ಪ್ರೆಸ್‌ಗಳ ಟರ್ಮಿನಸ್‌ಗಳಲ್ಲಿ ಕಾರ್ಯಾಚರಣೆ ನಡೆಸಿ ಟಿಕೆಟ್‌ ಇಲ್ಲದೆ ಪ್ರಯಾಣಿಸುತ್ತಿರುವ 43,526 ಪ್ರಯಾಣಿಕರನ್ನು ಪತ್ತೆ ಹಚ್ಚಿವೆ.

Advertisement

ಇದರಲ್ಲಿ ಉಪನಗರಗಳ ಸ್ಥಳೀಯ ರೈಲು ಮಾರ್ಗಗಳಲ್ಲಿ ಪ್ರಯಾಣಿಸಿದ 39,516 ಪ್ರಯಾಣಿಕರನ್ನು ಒಳಗೊಂಡಿದೆ ಎಂದು ರೈಲ್ವೆ ಆಡಳಿತ ತಿಳಿಸಿದೆ. ಅಲ್ಲದೆ, ಅಗತ್ಯ ಸೇವೆಗಳಿಗಾಗಿ ನಕಲಿ ಗುರುತಿನ ಚೀಟಿಗಳೊಂದಿಗೆ ಸ್ಥಳೀಯವಾಗಿ ಪ್ರಯಾಣಿಸಲು ಅನುಮತಿಸುವ ಜನರ ಸಂಖ್ಯೆಯೂ ಹೆಚ್ಚಾಗತೊಡಗಿದೆ. ತುರ್ತು ಸೇವೆಗಳಲ್ಲಿ ತೊಡಗಿರುವ ಬ್ಯಾಂಕ್‌ ನೌಕರರು, ವಕೀಲರು, ಡಬ್ಟಾವಾಲಾಗಳು, ಶಿಕ್ಷಕರು ಮತ್ತು ಮಹಿಳೆಯರಿಗೆ ಮಾತ್ರ ಸ್ಥಳೀಯ ರೈಲಿನಲ್ಲಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ. ಈ ವೇಳೆ ಅಗತ್ಯ ಸೇವಾ ಸಿಬಂದಿಗೆ ಗುರುತಿನ ಚೀಟಿ ಮತ್ತು ಕ್ಯೂಆರ್‌ ಕೋಡ್‌ ಇ-ಪಾಸ್‌ ಹೊಂದಿರುವವರಿಗೆ ಮಾತ್ರ ಟಿಕೆಟ್‌ ಲಭ್ಯವಿದ್ದರೆ, ಅಗತ್ಯ ಸೇವಾ ಸಿಬಂದಿಯನ್ನು ಹೊರತುಪಡಿಸಿ ಇತರ ಮಹಿಳೆಯರಿಗೆ ಪ್ರಯಾಣದ ಸಮಯವನ್ನು ನಿಗದಿಪಡಿಸಲಾಗಿದೆ. ಈ ವೇಳೆ ಕೆಲವು ಪ್ರಯಾಣಿಕರು ಟಿಕೆಟ್‌ ಪಡೆಯದೆ ಪ್ರಯಾಣಿಸುವವರ ಸಂಖ್ಯೆಯು ಹೆಚ್ಚಾಗಲಾರಂಭಿಸಿದ್ದು, ಇದರ ವಿರುದ್ಧ ಟಿಕೆಟ್‌ ಇನ್‌ಸ್ಪೆಕ್ಟರ್‌ಗಳು ಕ್ರಮ ಕೈಗೊಳ್ಳಲಾರಂಭಿಸಿದ್ದಾರೆ ಎಂದು ಮಧ್ಯ ರೈಲ್ವೆ ತಿಳಿಸಿದೆ.

200 ನಕಲಿ ಗುರುತಿನ ಚೀಟಿ ವಶಕ್ಕೆ
ಸಾಮಾನ್ಯ ಪ್ರಯಾಣಿಕರಿಗೆ ಸ್ಥಳೀಯವಾಗಿ ಪ್ರಯಾಣಿಸಲು ಅವಕಾಶವಿಲ್ಲದ ಕಾರಣ, ಅನೇಕ ಜನರು ಅಗತ್ಯ ಸೇವೆಗಳ ನಕಲಿ ಗುರುತಿನ ಚೀಟಿಗಳನ್ನು ತಯಾರಿಸಿಕೊಳ್ಳುವುದರ ಜತೆಗೆ ಸ್ಥಳೀಯ ರೈಲುಗಳಲ್ಲಿ ಪ್ರಯಾಣಿಸುವುದು ಕಂಡುಬಂದಿದೆ. ಅಂತವರ ವಿರುದ್ಧ ಕಾರ್ಯಾಚರಣೆ ನಡೆಸಿದ ರೈಲ್ವೇ ಆಡಳಿತ ಸಿಬಂದಿ ಈವರೆಗೆ 200 ನಕಲಿ ಗುರುತಿನ ಚೀಟಿಗಳನ್ನು ವಶಪಡಿಸಿಕೊಂಡಿದ್ದಾರೆ. ಜತೆಗೆ ಗುರುತಿನ ಚೀಟಿ ತಯಾಸಿದವರ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಈ ಪ್ರಕರಣದಲ್ಲಿ 7 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.

ನಕಲಿ ಟಿಕೆಟ್‌ ಮಾರಾಟ ಮಾಡುವ ಗ್ಯಾಂಗ್‌ ಪತ್ತೆ
ನಕಲಿ ಟಿಕೆಟ್‌ ಮಾರಾಟ ಮಾಡುವ ಜಾಲವನ್ನು ಭೇದಿಸುವಲ್ಲಿ ಥಾಣೆ ಆರ್‌ಪಿಎಫ್‌ ತಂಡ ಯಶಸ್ವಿಯಾಗಿದೆ. ರೈಲ್ವೆ ನೌಕರರ ಸಹಾಯದಿಂದ ಟಿಕೆಟ್‌ ಮಾರಾಟವಾಗುತ್ತಿರುವುದು ಗಮನಕ್ಕೆ ಬಂದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರೈಲ್ವೇ ನೌಕರ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಇಲ್ಲಿಯ ತನಕ ಸುಮಾರು 1,000 ಪ್ರಯಾಣಿಕರಿಗೆ ನಕಲಿ ಟಿಕೆಟ್‌ ನೀಡಿ ವಂಚಿಸಿರುವುದು ಕಂಡುಬಂದಿದೆ. ಆರೋಪಿಗಳ ಬಳಿಯಿಂದ 1.90 ಲಕ್ಷ ಮೌಲ್ಯದ ಟಿಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.

ಎಜೆಂಟ್‌ಗಳ ಬಳಿಯಿಂದ ನಕಲಿ ಟಿಕೆಟ್‌ಗಳನ್ನು ನೀಡಲಾಗುತ್ತಿದೆ ಎಂದು ಸಂದೀಪ್‌ ಗುಪ್ತಾ ಎಂಬ ವ್ಯಕ್ತಿಯು ಥಾಣೆ ಆರ್‌ಪಿಎಫ್‌ಗೆ ದೂರು ನೀಡಿದ್ದರು. ಗುಪ್ತಾ ಜಸ್ಟ್ ಡಯಲ್ ಆಧಾರಿತ ಬ್ರೋಕರ್‌ನಿಂದ ಇ-ಟಿಕೆಟ್‌ ಖರೀದಿಸಿದ್ದು, ಅದು ನಕಲಿ ಎಂದು ತಿಳಿದು ಬಂದಿದೆ. ಈ ಪ್ರಕರಣವು ಥಾಣೆ ರೈಲ್ವೆ ಭದ್ರತಾ ಪಡೆಗೆ ಹಸ್ತಾಂತರಿಸಲಾಯಿತು. ಇದರ ವಿರುದ್ಧ ತನಿಖೆ ನಡೆಸಿದಾಗ ಜಸ್ಟ್ ಡಾಯಲ್‌ನಲ್ಲಿ ವ್ಯಕ್ತಿಯೊಬ್ಬ ರೈಲ್ವೆ ಟಿಕೆಟ್‌ ಎಜೆಂಟ್‌ ಎಂದು ಹೇಳಿಕೊಂಡು ನಕಲಿ ಟಿಕೆಟ್‌ಗಳನ್ನು ಮಾರಾಟ ಮಾಡುತ್ತಿರುವುದು ತಿಳಿದು ಬಂದಿದೆ.

Advertisement

ಪಶ್ಚಿಮ ರೈಲ್ವೆಯ ದಾದರ್‌ನಲ್ಲಿ ಪಿಆರ್‌ಎಸ್‌ನಲ್ಲಿ ಕೆಲಸ ಮಾಡುವ ನೀರಜ್‌ ತಿವಾರಿ ಅವರಿಂದ ಕಾಯ್ದಿರಿಸಿದ ಟಿಕೆಟ್‌ಗಳ ಪಿಎನ್‌ಆರ್‌ ಸಂಖ್ಯೆಯನ್ನು ತೆಗೆದುಕೊಂಡು ಎಚ್‌ಒ ಕೋಟಾದಿಂದ ಟಿಕೆಟ್‌ ನೀಡಲಾಗುತ್ತದೆ ಎಂದು ತಿಳಿಸಿ ಪ್ರಯಾಣಿಕರನ್ನು ವಂಚಿಸುತ್ತಿರುವುದು ಕಂಡುಬಂದಿದೆ. ಈ ಪ್ರಕರಣದಲ್ಲಿ ಲಾತೂರ್‌ ನಿಂದ ಶಶಿ ಭೀಮರಾವ್‌ ಸಲೋನ್‌ ಮತ್ತು ರೈಲ್ವೆ ಉದ್ಯೋಗಿ ಕೃಷ್ಣ ಅವರನ್ನು ಸಹ ಬಂಧಿಸಲಾಗಿದೆ ಎಂದು ಮಧ್ಯ ರೈಲ್ವೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next