ಬಾಗಲಕೋಟೆ: ಕೋವಿಡ್ ರೋಗಿಗಳ ಸಂಖ್ಯೆಗೆ ಅನುಗುಣವಾಗಿ ಚಿಕಿತ್ಸೆಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆಯಾಗಿ ಬೆಡ್‌ಗಳ ಸಂಖ್ಯೆ ಹೆಚ್ಚಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಿವಯೋಗಿ ಕಳಸದ ಸೂಚಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಗುರುವಾರ ನಡೆದ ಕೋವಿಡ್ ನಿಯಂತ್ರಣ ಕುರಿತು ಕೈಗೊಂಡ ಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಬೆಡ್‌ಗಳನ್ನು ಸಿದ್ಧಪಡಿಸಿಕೊಂಡು ಬೇಕಾದ ಎಲ್ಲ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರ ಸ್ಥಿತಿ-ಗತಿ ಬಗ್ಗೆ ಮಾಹಿತಿ ಪಡೆದರು. ಸೋಂಕಿತರನ್ನು ಗುಣಪಡಿಸುವಲ್ಲಿ ಶ್ರಮಿಸುತ್ತಿರುವ ವೈದ್ಯರ ಶ್ರಮ ಶ್ಲಾಘಿಸಿದರು.
ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ| ಕೆ. ರಾಜೇಂದ್ರ ಮಾತನಾಡಿ, ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ 257 ಬೆಡ್ ನಿಂದ 300ಕ್ಕೆ ಹೆಚ್ಚಿಸಲಾಗುತ್ತಿದೆ. ಕುಮಾರೇಶ್ವರ ಆಸ್ಪತ್ರೆಯಲ್ಲಿ 200 ಬೆಡ್‌ಗಳು ರೆಡಿ ಇವೆ. ಸೋಂಕಿತರು ಹೆಚ್ಚಾದಲ್ಲಿ ನವನಗರದ ಅಲ್ಪಸಂಖ್ಯಾತರ ವಸತಿ ನಿಲಯದಲ್ಲಿ 100 ಬೆಡ್ ಸಿದ್ಧಪಡಿಕೊಳ್ಳಲಾಗುತ್ತಿದೆ. ಜಮಖಂಡಿ ಉಪವಿಭಾಗದ ವ್ಯಾಪ್ತಿಯಲ್ಲಿ 300 ಬೆಡ್, ಇಳಕಲ್ಲ ತಾಲೂಕು ಆಸ್ಪತ್ರೆ, ಬಾದಾಮಿ ಚಿಕ್ಕ ಮುಚ್ಚಳಗುಡ್ಡದಲ್ಲಿ ಹೆಚ್ಚುವರಿ ಬೆಡ್ ಸಿದ್ಧಪಡಿಸಿಕೊಳ್ಳಲಾಗುವುದೆಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|ಎ. ಎನ್.ದೇಸಾಯಿ ಮಾತನಾಡಿ, ಚಿಕಿತ್ಸೆಗೆ ಬೇಕಾದ ಔಷಧ ಹಾಗೂ ಎಲ್ಲ ರೀತಿಯ ಸಲಕರಣೆ ಲಭ್ಯವಿದ್ದು,ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ 1997 ಜನ ಇದ್ದಾರೆ. ಇಲ್ಲಿಯವರೆಗೆ ಒಟ್ಟು 16016 ಸ್ಯಾಂಪಲ್ ಕಳುಹಿಸಲಾಗಿದ್ದು, ಈ ಪೈಕಿ 14046 ನೆಗೆಟಿವ್, 349 ಪಾಸಿಟಿವ್ ಬಂದಿವೆ. ಜಿಲ್ಲೆಯಲ್ಲಿ 8 ಜನ ಮೃತಪಟ್ಟಿದ್ದು, ಬೆಂಗಳೂರು ಮತ್ತು ವಿಜಯಪುರದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಹೆಚ್ಚಾಗಿ 20 ರಿಂದ 40 ವಯಸ್ಸಿಯನವರಲ್ಲಿ ಕೋವಿಡ್ ಪ್ರಕರಣಗಳು ಕಂಡುಬಂದಿವೆ. 60 ವರ್ಷದ ಮೇಲ್ಪಟ್ಟವರಲ್ಲಿ ಕೇವಲ 19 ಪ್ರಕರಣ ಮಾತ್ರ ಕಂಡುಬಂದಿವೆ. ಜಿಲ್ಲೆಯಲ್ಲಿ ಕೋವಿಡ್ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಜಿಲ್ಲಾ ಆಸ್ಪತ್ರೆ ಶಸ್ತ್ರ ಚಿಕಿತ್ಸಕ ಡಾ| ಪ್ರಕಾಶ ಬಿರಾದಾರ ಮಾತನಾಡಿ, ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಹಾಗೂ ಅವರಿಗೆ ದಿನನಿತ್ಯ ನೀಡುತ್ತಿರುವ ಆಹಾರ ಪದ್ಧತಿಯ ಬಗ್ಗೆ ವಿವರವಾಗಿ ಸಭೆಗೆ ತಿಳಿಸಿದರು. ಜಿಲ್ಲಾ ಆಸ್ಪತ್ರೆಯಲ್ಲಿ 9 ವೆಂಟಿಲೇಟರ್, 23 ಐಸಿಯು ಬೆಡ್ ಗಳಿವೆ. ಸದ್ಯ ಜಿಲ್ಲಾ ಆಸ್ಪತ್ರೆಯಲ್ಲಿ 191 ಕೋವಿಡ್ ಪಾಸಿಟಿವ್ ಇರುವ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದರಲ್ಲಿ ಕೋಮೋರಬಿಡ್ ಕಂಡೀಷನ್ ದಲ್ಲಿ 20 ಜನ ಸೋಂಕಿತರು ಮಾತ್ರ ಕಂಡುಬಂದಿವೆ ಎಂದು ತಿಳಿಸಿದರು.
ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಪ್ರೊಬೇಷನರಿ ಐಎಎಸ್ ಅಧಿಕಾರಿ ಯಶವಂತ ಗೋರಕಾರ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪ ವಿಭಾಗಾಧಿಕಾರಿ ಎಂ. ಗಂಗಪ್ಪ, ಸಿದ್ದು ಹುಳ್ಳೊಳ್ಳಿ ಇದ್ದರು.