Advertisement

ಅನಿವಾಸಿಗಳ ವಾಪಸಾತಿಯಿಂದ ಪ್ರತಿಭೆ ವೃದ್ಧಿ

11:51 AM Aug 29, 2017 | |

ಬೆಂಗಳೂರು: ತಾಯ್ನಾಡಿಗೆ ವಾಪಸಾಗುವ ಅನಿವಾಸಿ ಭಾರತೀಯರು, ಊರು, ಹಳ್ಳಿಗಳನ್ನು ದತ್ತು ಪಡೆದು ನಾನಾ ಸೇವೆಗಳನ್ನು ಕಲ್ಪಿಸುವ ಮೂಲಕ ಅಭಿವೃದ್ಧಿಗೆ ನೆರವಾಗುವ ಕಾರ್ಯಕ್ಕೆ ಮುಂದಾಗಬೇಕು ಎಂದು ಕೇಂದ್ರ ಸಚಿವ ಅನಂತಕುಮಾರ್‌ ಹೇಳಿದರು.

Advertisement

ವಾಪಸಾದ ಅನಿವಾಸಿ ಭಾರತೀಯರ ಸಂಘವು ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 25ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ನಾನಾ ಕಾರಣಕ್ಕೆ ವಿದೇಶಗಳಿಗೆ ತೆರಳಿದವರು ಬಳಿಕ ನಾಡಿಗೆ ಹಿಂತಿರುಗಿ ಸ್ಥಳೀಯರಿಗೆ ನಾನಾ ಸೇವೆಗಳನ್ನು ಸಲ್ಲಿಸುತ್ತಿರುವುದು ಇತರೆ ರಾಜ್ಯಗಳಿಗೂ ಮಾದರಿ ಎನಿಸಿದೆ.

ಹಾಗಾಗಿ ಸಂಘದ ಪ್ರತಿನಿಧಿಗಳು ನಿಯೋಗದಲ್ಲಿ ದೆಹಲಿಗೆ ಬಂದರೆ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರ ಬಳಿಗೆ ಕರೆದೊಯ್ದು ಸಂಘದ ಕೊಡುಗೆಗಳ ಬಗ್ಗೆ ತಿಳಿಸುವ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.

ಮೂರು ದಶಕಗಳ ಹಿಂದೆ ನಾನಾ ಕಾರಣಕ್ಕೆ ವಿದೇಶಗಳಿಗೆ ತೆರಳುವವರ ಸಂಖ್ಯೆ ಹೆಚ್ಚಾದಾಗ ಪ್ರತಿಭಾ ಪಲಾಯನ ಎನ್ನಲಾಗುತ್ತಿತ್ತು. ಆದರೆ ಅನಿವಾಸಿ ಭಾರತೀಯರು ತಾಯ್ನಾಡಿಗೆ ಹಿಂತಿರುಗುವ ಮೂಲಕ ಪ್ರತಿಭೆಯ ವೃದ್ಧಿಯಾಗುತ್ತಿದೆ. ಸಂಘವು ನಾನಾ ದೇಶಗಳ ಕನ್ನಡ ಸಂಘಗಳೊಂದಿಗೆ ಸಂಪರ್ಕವಿಟ್ಟುಕೊಂಡು ಸಹಕಾರ ನೀಡುತ್ತಿರುವುದು ಸ್ವಾಗತಾರ್ಹ. ಅದೇರೀತಿ ಊರು- ಹಳ್ಳಿಗಳನ್ನು ದತ್ತು ಪಡೆದು ಶಿಕ್ಷಣ, ಕೈಗಾರಿಕೆ, ಮೂಲ ಸೌಕರ್ಯಕ್ಕೆ ಅಗತ್ಯ ಸೇವೆ ಸಲ್ಲಿಸಲು ಮುಂದಾಗಬೇಕು ಎಂದು ಹೇಳಿದರು.

ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌, ನಮ್ಮ ತಾತಾನವರು ಜಾಗತಿಕ ನಾಗರಿಕರಾಗಬೇಕು ಎಂದು ಹೇಳುತ್ತಿದ್ದರು. ಅದರಂತೆ ನಾನಾ ಕಾರಣಕ್ಕೆ ವಿದೇಶಗಳಿಗೆ ತೆರಳಿ ಪರಸ್ಪರ ಹೊಂದಾಣಿಕೆ, ವಿಚಾರ ವಿನಿಮಯದ ಮೂಲಕ ಜಾಗತಿಕ ನಾಗರಿಕರಾಗಿ ರೂಪುಗೊಳ್ಳುವುದು ಸಂತಸದ ಸಂಗತಿ ಎಂದು ತಿಳಿಸಿದರು.

Advertisement

ಇನ್ಫೋಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಡಾ.ಸುಧಾಮೂರ್ತಿ, “ಸುಮಾರು 20 ವರ್ಷಗಳ ಕಾಲ ಸವದತ್ತಿಯ ದೇವದಾಸಿಯರ ಸ್ಥಿತಿಗತಿ ಸುಧಾರಣೆಗೆ ನಡೆಸಿದ ಪ್ರಯತ್ನದ ಫ‌ಲವಾಗಿ 3000ಕ್ಕೂ ಹೆಚ್ಚು ಮಹಿಳೆಯರು ಇಂದು ಸಹಜ ಜೀವನ ನಡೆಸುತ್ತಿರುವುದು ಹೆಚ್ಚು ಖುಷಿ ಕೊಡುತ್ತದೆ. ಆ ಮಹಿಳೆಯರು ತಮ್ಮದೇ ಆದ ಸಹಕಾರ ಸಂಘ ರಚಿಸಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗುತ್ತಿರುವುದು ತೃಪ್ತಿ ನೀಡುತ್ತದೆ’ ಎಂದು ಹೇಳಿದರು.

ಸ್ಪರ್ಶ ಆಸ್ಪತ್ರೆಯ ಸ್ಥಾಪಕರಾದ ಡಾ.ಶರಣ್‌ ಪಾಟೀಲ್‌, ಗ್ರಾಮಿ ಪ್ರಶಸ್ತಿ ಪುರಸ್ಕೃತ ಸಂಗೀತ ಸಂಯೋಜಕ ರಿಕಿ ಕೇಜ್‌, ಅಸೆಲ್‌ ಇಂಡಿಯಾದ ಪೋಷಕ ಪ್ರಶಾಂತ್‌ ಪ್ರಕಾಶ್‌, ಸಂಘದ ಅಧ್ಯಕ್ಷ ಮಂಜುನಾಥ್‌, ಎನ್‌ಆರ್‌ಐ ವೇದಿಕೆ ಉಪಾಧ್ಯಕ್ಷರಾದ ಆರತಿ ಕೃಷ್ಣ ಉಪಸ್ಥಿತರಿದ್ದರು.

ಟೆಂಡರ್‌ ನಂತರ ಯೋಜನೆ ರೂಪಿಸುತ್ತಾರೆ!
ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಉದ್ಯಮಿಯೂ ಆಗಿರುವ ಶಾಸಕ ಅಶೋಕ್‌ ಖೇಣಿ, “ಅಮೆರಿಕದಲ್ಲಿ ಯೋಜನೆ ರೂಪುರೇಷೆ, ಸಾಧಕ ಬಾಧಕ, ಅಂದಾಜು ಪಟ್ಟಿ ಎಲ್ಲವನ್ನು ಅಂತಿಮಗೊಳಿಸಿದ ಬಳಿಕ ಟೆಂಡರ್‌ ನೀಡಲಾಗುತ್ತದೆ. ಆದರೆ ನಮ್ಮಲ್ಲಿ ಟೆಂಡರ್‌ ಮಂಜೂರಾದ ಬಳಿಕ ಯೋಜನೆಯನ್ನು ರೂಪಿಸಲಾಗುತ್ತದೆ. ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಿಂದಲೂ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ ನಿರ್ಮಿಸುವ ಯೋಜನೆ ರೂಪಿಸಲಾಗಿತ್ತು. ಆದರೆ ಸ್ಪಂದನೆ ಸಿಗಲಿಲ್ಲ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next