Advertisement

ಕಾರ್ಮಿಕರು ವೃತ್ತಿಯಲ್ಲಿ ಕೌಶಲ್ಯತೆ ಹೆಚ್ಚಿಸಿಕೊಳ್ಳಿ

09:05 PM Jun 26, 2019 | Lakshmi GovindaRaj |

ಮೈಸೂರು: ನಿರ್ಮಾಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಎಲ್ಲರೂ ಗುಣಮಟ್ಟ ಮತ್ತು ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಜಿಪಂ ಸಿಇಒ ಕೆ.ಜ್ಯೋತಿ ಹೇಳಿದರು. ಮೈಸೂರು ವಿಜಯನಗರ 3ನೇ ಹಂತದಲ್ಲಿರುವ ನಿರ್ಮಿತ ಕೇಂದ್ರದ ಆವರಣದಲ್ಲಿ ಆಯೋಜಿಸಿದ್ದ ತರಬೇತಿ ಪಡೆದ ಕಾರ್ಮಿಕರ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.

Advertisement

ಹಣ ಪೋಲು ಮಾಡದಿರಿ: ಗಾರೆ ಹಾಗೂ ಎಲೆಕ್ಟ್ರಿಕಲ್‌ ಕೆಲಸ ಮಾಡುವ ಕಾರ್ಮಿಕರು ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕಿದೆ. ನಂತರ ಗುಣಮಟ್ಟದ ಕೆಲಸಕ್ಕೆ ಆದ್ಯತೆ ನೀಡಬೇಕು. ಈ ಮೂಲಕ ತಮ್ಮ ಜೀವನ ಮಟ್ಟ ಹೆಚ್ಚಿಸಿಕೊಳ್ಳಬಹುದಾಗಿದೆ. ದುಡಿಯುವ ಹಣವನ್ನು ದುಶ್ಚಟಗಳಿಗೆ ವಿನಿಯೋಗಿಸದೇ ಸಂಸಾರ ನಡೆಸಲು ಹಣ ನೀಡಿ. ಕ್ಷಣಿಕ ಖುಷಿ ನೀಡುವ ಧೂಮಪಾನ, ಮದ್ಯಪಾನದ ಚಟಕ್ಕೆ ಬಿದ್ದು, ಹಣ ಪೋಲು ಮಾಡದಿರಿ. ಇದು ನಿಮ್ಮ ದೈಹಿಕ ಸಾಮರ್ಥ್ಯ ಕಸಿದುಕೊಳ್ಳುತ್ತದೆ ಎಂದು ಎಚ್ಚರಿಕೆ ನೀಡಿದರು.

ವೃತ್ತಿ ಕೌಶಲ್ಯ: ಕಾರ್ಮಿಕ ಇಲಾಖೆ ಸಹಾಯಕ ಆಯುಕ್ತ ಎ.ಸಿ.ತಮಣ್ಣ ಮಾತನಾಡಿ, ಎಲ್ಲಾ ಕ್ಷೇತ್ರಗಳಲ್ಲಿಯೂ ಇರುವಂತೆ ಅಸಂಘಟಿತ ವಲಯದಲ್ಲಿಯೂ ಸ್ಪರ್ಧೆ ಇದೆ. ಕಾಲ ಕಾಲಕ್ಕೆ ತಕ್ಕಂತೆ ಆತ್ಯಾಧುನಿಕ ಆವಿಷ್ಕಾರ ಹಾಗೂ ಹೊಸ ತಂತ್ರಜ್ಞಾನವನ್ನು ತಮ್ಮ ವೃತ್ತಿಯಲ್ಲಿ ಅಳವಡಿಸಿಕೊಳ್ಳುವ ಮೂಲಕ ನಮ್ಮನ್ನು ನಾವು ಉನ್ನತಿಕರಿಸಿಕೊಳ್ಳಬೇಕು ಎಂದರು.

ಅಲ್ಟ್ರಾಟೆಕ್‌ ಸಿಮೆಂಟ್‌ನ ತಾಂತ್ರಿಕ ಸೇವಾ ವ್ಯವಸ್ಥಾಪಕ ಸೋಮಶೇಖರ್‌ ಮಾತನಾಡಿ, ತರಬೇತಿ ಪಡೆದರೆ ತಾಂತ್ರಿಕವಾಗಿ ನಿಖರ ಹಾಗೂ ಗುಣಮಟ್ಟ ಕೆಲಸ ಮಾಡಲು ಸಾಧ್ಯವಾಗಲಿದೆ. ಇದರಿಂದ ಹೆಚ್ಚು ಅವಕಾಶಗಳು ಲಭ್ಯವಾಗುತ್ತವೆ ಎಂದು ಹೇಳಿದರು.

ಈ ಸಂದರ್ಭ ತರಬೇತಿ ಪಡೆದಗಾರೆ ಕೆಲಸ ಹಾಗೂ ಎಲೆಕ್ಟ್ರಿಕಲ್‌ ವೈರಿಂಗ್‌ ವಿಭಾಗದ ಕಾರ್ಮಿಕರಿಗೆ ಟೂಲ್‌ ಮತ್ತು ಸೇಫ್ಟಿ ಕಿಟ್‌ ವಿತರಿಸಲಾಯಿತು. ನಿರ್ಮಿತಿ ಕೇಂದ್ರದ ಯೋಜನಾ ಎಂಜಿನಿಯರ್‌ ಎಚ್‌.ಬಿ. ಸತೀಶ್‌, ಯೋಗ ತರಬೇತುದಾರರ ನಾಗಭೂಷಣ್‌ ಇತರರಿದ್ದರು.

Advertisement

ಕಾರ್ಮಿಕರಿಗೆ ತರಬೇತಿ ಕಾರ್ಯಾಗಾರ: ಡಾ.ಬಿ.ಆರ್‌.ಅಂಬೇಡ್ಕರ್‌ ಕಾರ್ಮಿಕ ಸಹಾಯ ಹಸ್ತ ಶ್ರಮ ಸಮಾರ್ಥಯ ಯೋಜನೆಯಡಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ತರಬೇತಿ ಕಾರ್ಯಕ್ರಮದ ಗಾರೆ ಹಾಗೂ ಎಲೆಕ್ಟ್ರಿಕಲ್‌ ಕೆಲಸಗಾರರಿಗೆ 30 ದಿನಗಳ ತರಬೇತಿ ಹಮ್ಮಿಕೊಳ್ಳಲಾಗಿದ್ದು, 120 ಕಟ್ಟಡ ಕಾರ್ಮಿಕರಿಗೆ ತರಬೇತಿ ನೀಡಲಾಗಿದೆ.

ಮೊದಲನೇ ತಂಡದ ಗಾರೆ ಕೆಲಸದ 33 ಕಾರ್ಮಿಕರಿಗೆ ತರಬೇತಿ ಯಶಸ್ವಿಗೊಳಿಸಿದ್ದು, ಟೂಲ್‌ ಮತ್ತು ಸೇಫ್ಟಿಕಿಟ್‌ ವಿತರಿಸಲಾಗಿದೆ. ಇನ್ನುಳಿದ 2 ಮತ್ತು 3ನೇ ತಂಡದ 66 ಗಾರೆ ಕೆಲಸದವರು ಹಾಗೂ 21 ಎಲೆಕ್ಟ್ರಿಕಲ್‌ ವೈರಿಂಗ್‌ ವಿಭಾಗದ ಕಾರ್ಮಿಕರಿಗೆ ತರಬೇತಿ ನೀಡಲಾಗಿದ್ದು, ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಟೂಲ್‌ ಮತ್ತು ಸೇಫ್ಟಿ ಕಿಟ್‌ ವಿತರಿಸಲಾಗುತ್ತಿದೆ ಎಂದು ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಎಂ.ಟಿ.ಮಂಜುನಾಥ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next