ಎಚ್.ಡಿ.ಕೋಟೆ: ಕೇರಳದ ವಯನಾಡು ಹಾಗೂ ಕಾವೇರಿ ಕಣಿವೆಯಲ್ಲಿ ನಿರಂತರ ಮಳೆ ಸುರಿಯುತ್ತಿರುವುದರಿಂದ ಕಬಿನಿ ಜಲಾಶಯಕ್ಕೆ ನೀರು ಹರಿದು ಬರುತ್ತಿದೆ. ರಾಜ್ಯದಲ್ಲೇ ಮೊದಲು ಭರ್ತಿಯಾಗುವ ಅಣೆಕಟ್ಟೆ ಎಂದೇ ಖ್ಯಾತಿ ಪಡೆದಿರುವ ಕಬಿನಿಗೆ ಇದೀಗ ಬರೋಬ್ಬರಿ 13,000 ಕ್ಯುಸಕ್ ಒಳ ಹರಿವು ಬರುತ್ತಿದೆ.
ಕಳೆದ 3 ದಿನಗಳಿಂದ ಎಡೆಬಿಡದೆ ಸುರಿಯು ತ್ತಿರುವ ಮಳೆಯಿಂದಾಗಿ ಕಬಿನಿ ಜಲಾಶಯಕ್ಕೆ ಸೋಮವಾರ ಮುಂಜಾನೆ 13 ಸಾವಿರ ಕ್ಯುಸಕ್ ನೀರು ಹರಿದು ಬರುತ್ತಿದೆ. ಭಾನುವಾರ 3,500 ಕ್ಯುಸಕ್ ಒಳಹರಿವು ಇತ್ತು. ಒಂದೇ ದಿನದಲ್ಲಿ 10 ಸಾವಿರ ಕ್ಯುಸಕ್ ಹೆಚ್ಚಾಗಿದ್ದು, ಇನ್ನಷ್ಟು ಒಳ ಹರಿವು ಏರಿಕೆಯಾಗುವ ಸಾಧ್ಯತೆ ಇದೆ.
ಪೂರ್ವ ಮಂಗಾರು ಮಳೆ ಆರಂಭವಾದಾಗಿ ನಿಂದ 3ನೇ ಬಾರಿ ಮಳೆ ಬೀಳುತ್ತಿದ್ದು, ಪ್ರಸ್ತುತ ಸುರಿಯುತ್ತಿರುವ ಮಳೆಯಿಂದ ಒಳಹರಿವು ಗಣನೀಯವಾಗಿ ಏರಿಕೆಯಾಗಿದೆ. ಜೂನ್ ತಿಂಗಳ ಪ್ರಾರಂಭದಲ್ಲಿ ಮುಂಗಾರು ಆಗಮನವಾಗ ಲಿದ್ದು, ಅಷ್ಟರೊಳಗೆ ಡ್ಯಾಂನಲ್ಲಿ ನೀರಿನ ಪ್ರಮಾಣ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
19.5 ಟಿಎಂಸಿ ಸಾಮರ್ಥಯದ ಕಬಿನಿ ಜಲಾಶಯದಲ್ಲಿ ಇದೀಗ 6 ಟಿಎಂಸಿ ನೀರು ಇದ್ದು, ನೀರಿನ ಮಟ್ಟ 2,266.17 ಇದೆ. ಒಳಹರಿವಿನ ಪ್ರಮಾಣ 13,000 ಕ್ಯುಸಕ್ ಇದ್ದು, ಜಲಾಶಯದಿಂದ ಕುಡಿಯುವ ನೀರಿಗಾಗಿ 700 ಕ್ಯುಸೆಕ್ ನೀರು ನಾಲೆಯ ಮೂಲಕ ಹೊರ ಬಿಡಲಾಗಿದೆ.
ಮುಂಗಾರು ಮಳೆ ಆಶಾದಾಯವಾಗಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಇದೇ ಪ್ರಮಾಣದಲ್ಲಿ ಮಳೆ ಸುರಿದರೆ ಒಂದೆರಡು ತಿಂಗಳಲ್ಲಿ ಕಬಿನಿ ಜಲಾಶಯ ಭರ್ತಿಯಾಗಲಿದೆ. ಇದರಿಂದ ಜಮೀನುಗಳಲ್ಲಿ ಮುಂಗಾರು ಬೆಳೆ ಬೆಳೆಯಲು ಅನುಕೂಲ ಆಗಲಿದೆ. ಜೊತೆಗೆ ಕುಡಿಯುವ ನೀರಿನ ಬವಣೆ ಕೂಡ ನೀಗಲಿದೆ. ಈ ಬಾರಿರಾಜ್ಯ ಬಜೆಟ್‌ನಲ್ಲಿ ಕಬಿನಿ ಡ್ಯಾಂ ಬಳಿ ಕೆಆರ್‌ಎಸ್ ಮಾದರಿ ಬೃಂದಾವನ ನಿರ್ಮಿಸಲು 50 ಕೋಟಿ ರೂ. ಮಂಜೂರಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆ ವಿಳಂಬವಾಗಿದೆ.
-ಎಚ್.ಬಿ.ಬಸವರಾಜು