ಬೀಜಿಂಗ್/ಹೊಸದಿಲ್ಲಿ: ಕೋವಿಡ್ ಜನ್ಮಸ್ಥಾನ ಚೀನದಲ್ಲಿ ಈಗ ಮತ್ತೂಮ್ಮೆ ಸೋಂಕಿನ ಭೀತಿ ಆರಂಭವಾಗಿದೆ. ಹೆಬೈ ಪ್ರಾಂತ್ಯದಲ್ಲಿ ಶನಿವಾರ ಒಂದೇ ದಿನ 33 ಮಂದಿಗೆ ಸೋಂಕು ತಗಲಿರುವುದು ದೃಢಪಟ್ಟಿದ್ದು, ನೆರೆಯ ಬೀಜಿಂಗ್‌ನಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.
ಮಾ.5ರಂದು ಬೀಜಿಂಗ್‌ನಲ್ಲಿ ವಾರ್ಷಿಕ ಸಂಸತ್ ಅಧಿವೇಶನ ನಡೆಯಲಿದ್ದು, 5 ಸಾವಿರಕ್ಕೂ ಅಧಿಕ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಈ ಸಮಯದಲ್ಲೇ ಸೋಂಕು ಹೆಚ್ಚಿದರೆ ಎಂಬ ಆತಂಕ ಬೀಜಿಂಗ್‌ನದ್ದು. ಚೀನದಲ್ಲಿ ಈಗಾಗಲೇ ಲಸಿಕೆ ವಿತರಣೆ ಆರಂಭವಾಗಿದ್ದು, ಈವರೆಗೆ 90 ಲಕ್ಷ ಲಸಿಕೆ ವಿತರಿಸಲಾಗಿದೆ.
ಇದೇ ವೇಳೆ, ಕೋವಿಡ್ ಮೂಲದ ಕುರಿತು ತನಿಖೆ ನಡೆಸಲು ಚೀನಗೆ ತೆರಳಲು ಉದ್ದೇಶಿಸಿರುವ ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರ ತಂಡಕ್ಕೆ ಅನುಮತಿ ನೀಡದೇ ಸತಾಯಿ ಸುತ್ತಿರುವ ಚೀನ, ಈಗ ತಂಡವನ್ನು ಸ್ವಾಗತಿ ಸಲು ಸಿದ್ಧ ಎಂದು ಹೇಳಿದೆ. ಆದರೆ ಅವರ ಭೇಟಿಗೆ ದಿನಾಂಕ ಮಾತ್ರ ಇನ್ನೂ ಘೋಷಿಸಿಲ್ಲ.
ಭಾರತೀಯ ವಿದ್ಯಾರ್ಥಿಗಳು ಅತಂತ್ರ ;
ಚೀನದ ವಿವಿಗಳಲ್ಲಿ ಪ್ರವೇಶ ಪಡೆದಿರುವ ಭಾರತೀಯ ವಿದ್ಯಾರ್ಥಿಗಳಿಗೆ ಸ್ವದೇಶದಿಂದ ವಾಪಸಾಗಲು ಚೀನ ಅನುಮತಿ ನಿರಾಕರಿಸಿದೆ. ಹೀಗಾಗಿ ಕಾಲೇಜು ಆರಂಭವಾಗಿದ್ದರೂ ಚೀನಗೆ ತೆರಳಲು ಸಾಧ್ಯವಾಗದೇ ಅನೇಕ ವಿದ್ಯಾರ್ಥಿಗಳು ಅತಂತ್ರರಾಗಿದ್ದಾರೆ. ಕೋವಿಡ್ ನೆಪ ಹೇಳುತ್ತಿರುವ ಚೀನ, ಭಾರತ ಮತ್ತು ಚೀನ ನಡುವೆ ಯಾವುದೇ ಚಾರ್ಟರ್ಡ್ ವಿಮಾನ ಸಂಚಾರಕ್ಕೆ ಅನುಮತಿ ನೀಡುತ್ತಿಲ್ಲ ಎಂದು ಅಲ್ಲಿರುವ ಭಾರತೀಯ ರಾಯಭಾರ ಕಚೇರಿ ಹೇಳಿದೆ.