Advertisement

ಸರಕಾರದ ನಡೆಯಿಂದ ಮಕ್ಕಳ ದಾಖಲಾತಿ ಹೆಚ್ಚಳ

09:27 PM Jun 04, 2019 | mahesh |

ಮಹಾನಗರ: ಈ ಶೈಕ್ಷಣಿಕ ವರ್ಷದಿಂದ ರಾಜ್ಯದ ಆಯ್ದ 1,000 ಸರಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ಜಾರಿಗೆ ಬಂದಿದೆ. ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದಿಸುವ ಆಸೆಯಿದ್ದರೂ, ಆರ್ಥಿಕ ಕಾರಣದಿಂದ ಕನಸು ನನಸು ಮಾಡಲು ಸಾಧ್ಯವಾಗದೇ ಇದ್ದ ಪೋಷಕರು, ಈಗ ಸರಕಾರಿ ಶಾಲೆಗಳಲ್ಲೇ ಆಂಗ್ಲ ಮಾಧ್ಯಮ ತರಗತಿ ಆರಂಭವಾದದ್ದಕ್ಕೆ ಫುಲ್‌ ಖುಷಿಯಾಗಿದ್ದಾರೆ.

Advertisement

ಶಿಕ್ಷಕರೂ ಆಂಗ್ಲ ಮಾಧ್ಯಮ ಶಿಕ್ಷಣ ಈ ಸ್ಪರ್ಧಾತ್ಮಕ ಯುಗದಲ್ಲಿ ಅಗತ್ಯವಾಗಿದ್ದು, ಈಗ ಕಲಿಸುವ ಜವಾಬ್ದಾರಿ ಸಿಕ್ಕಿರುವುದು ಸಂತಸವಾಗಿದೆ ಎನ್ನುತ್ತಾರೆ. ಆದರೆ, ಸರಕಾರದ ಸೂಚನೆ ಪ್ರಕಾರ ಪ್ರತಿ ಶಾಲೆಯಲ್ಲಿ 30 ಮಕ್ಕಳಿಗಷ್ಟೇ ಇಂಗ್ಲಿಷ್‌ ಕಲಿಯುವ ಅವಕಾಶವಿದ್ದು, ಕೆಲವು ಶಾಲೆಗಳಲ್ಲಿ ನಿಗದಿತ ಸಂಖ್ಯೆಗಿಂತ ಹೆಚ್ಚೇ ಮಕ್ಕಳು ಸೇರ್ಪಡೆಯಾಗಿದ್ದಾರೆ. ಇದರಿಂದಾಗಿ ಕೆಲವು ಶಾಲೆಗಳಲ್ಲಿ ಕನ್ನಡ ಮಾಧ್ಯಮಕ್ಕೆ ಸೇರ್ಪಡೆ ಮಾಡಿದರೆ, ಒಂದು ಶಾಲೆಯಲ್ಲಿ ಜಿಲ್ಲಾ ಶಿಕ್ಷಣ ಇಲಾಖೆಯ ಅನುಮತಿಯ ಮೇರೆಗೆ ಇತರ ಮಕ್ಕಳನ್ನೂ ದಾಖಲು ಮಾಡಿಕೊಳ್ಳಲಾಗಿದೆ.

ಮಂಗಳೂರು ದಕ್ಷಿಣ ಕ್ಷೇತ್ರದ ಐದು ಶಾಲೆಗಳಿಗೆ ಒಂದನೇ ತರಗತಿಯನ್ನು ಇಂಗ್ಲಿಷ್‌ ಮಾಧ್ಯಮದಲ್ಲಿ ಬೋಧನೆ ಮಾಡಲು ಅವಕಾಶ ಸಿಕ್ಕಿದೆ. ಆ ಶಾಲೆಗಳಲ್ಲಿ ಇರುವ ಶಿಕ್ಷಕರನ್ನೇ ಡಯಟ್‌ನಿಂದ ತರಬೇತಿ ನೀಡಿ ಆಂಗ್ಲ ಶಿಕ್ಷಣ ಬೋಧನೆಗೆ ತಯಾರುಗೊಳಿಸಲಾಗಿದೆ. ಕನ್ನಡ ಭಾಷಾ ಪಠ್ಯ ಹೊರತುಪಡಿಸಿ ಇಂಗ್ಲಿಷ್‌, ಗಣಿತ ಮತ್ತು ಪರಿಸರ ಅಧ್ಯಯನ ಪಠ್ಯಗಳು ಇಂಗ್ಲಿಷ್‌ ಭಾಷೆಯಲ್ಲಿರಲಿದ್ದು ಪಠ್ಯಗಳನ್ನು ಸರಕಾರವೇ ಒದಗಿಸಿದೆ. ಪ್ರಸ್ತುತ ಆಯ್ಕೆಯಾದ ಮಂಗಳೂರು ದಕ್ಷಿಣದ ಶಾಲೆಗಳಲ್ಲಿ ಬೋಧನೆ ಹೇಗೆ, ಶಿಕ್ಷಕರ ಆಯ್ಕೆ, ಮುಖ್ಯ ಶಿಕ್ಷಕರು- ಪೋಷ ಕರು ಏನಂತಾರೆ ಎಂಬ ಮಾಹಿತಿ ಇಲ್ಲಿದೆ.

ಸ.ಮಾ.ಹಿ.ಪ್ರಾ. ಶಾಲೆ ಮಳಲಿ
ವಾಮಂಜೂರು ಗ್ರಾಮಾಂತರ ಭಾಗದಲ್ಲಿರುವ 130 ವರ್ಷಗಳ ಇತಿಹಾಸವಿರುವ ಮಳಲಿ ಸ.ಮಾ.ಹಿ.ಪ್ರಾ. ಶಾಲೆಯಲ್ಲಿ ಎಂಟು ಮಂದಿ ಶಿಕ್ಷಕರಿದ್ದು, ಇಬ್ಬರು ಶಿಕ್ಷಕರಿಗೆ ಆಂಗ್ಲ ಬೋಧನೆಗಾಗಿ ಹದಿನೈದು ದಿನಗಳ ಕಾಲ ವಿಶೇಷ ತರಬೇತಿ ನೀಡಲಾಗಿದೆ. ಮಕ್ಕಳಿಗೆ ಪೂರಕವಾದ ಉತ್ತಮ ಪರಿಸರ ಶಾಲೆಯಲ್ಲಿದೆ. ಕೈತೋ ಟವೂ ಇರು ವು ದ ರಿಂದ ಪಠ್ಯದೊಂದಿಗೆ ಕೃಷಿ ಪಾಠವನ್ನೂ ಮಕ್ಕಳಿಗೆ ನೀಡಲಾಗುತ್ತದೆ. ಆಂಗ್ಲ ಮಾಧ್ಯಮ ಶಿಕ್ಷಣ ಪಡೆಯುವ ಸಲುವಾಗಿ ಈ ಶಾಲೆಗೆ ಈಗಾಗಲೇ 37ಕ್ಕೂ ಹೆಚ್ಚು ಮಕ್ಕಳು ದಾಖಲಾತಿ ಪಡೆದುಕೊಂಡಿದ್ದಾರೆ. ಸರಕಾರ ನಿಗದಿಪಡಿಸಿದ ಸಂಖ್ಯೆಗಿಂತ ಹೆಚ್ಚೇ ಮಕ್ಕಳು ದಾಖಲಾಗಿರುವುದರಿಂದ ಶಿಕ್ಷಣ ಇಲಾಖೆಯ ಅನುಮತಿಯೊಂದಿಗೆ ಮಕ್ಕಳಿಗೆ ಇಂಗ್ಲಿಷ್‌ ಕಲಿಯಲು ಅವಕಾಶ ಕಲ್ಪಿಸಲಾಗಿದೆ. ಕಳೆದ ವರ್ಷ ಈ ಶಾಲೆಯಲ್ಲಿ ಒಂದನೇ ತರಗತಿಗೆ 33 ಮಕ್ಕಳು ಸೇರ್ಪಡೆಯಾಗಿದ್ದರು.

ಶಾಲಾ ಮುಖ್ಯ ಶಿಕ್ಷಕಿ ಎ. ನೇತ್ರಾವತಿ ಹೇಳುವ ಪ್ರಕಾರ, ಶಾಲಾರಂಭದ ಬಳಿಕವೂ ದಾಖಲಾತಿ ಮಾಡಿಕೊಳ್ಳಲಾಗುತ್ತದೆ. ಈಗಾಗಲೇ ಹಲವರು ಆಂಗ್ಲ ಮಾಧ್ಯಮ ಶಿಕ್ಷಣವಿದೆಯೇ ಎಂಬುದಾಗಿ ಸಂಪರ್ಕಿ ಸಿದ್ದಾರೆ. ಸರಕಾರಿ ಶಾಲೆಯ ಉಳಿವಿಗೆಉತ್ತಮ ಯೋಜನೆ ಎನ್ನುತ್ತಾರೆ. ಮಳಲಿ ಗ್ರಾಮೀಣ ಭಾಗ. ಕೂಲಿ ಕಾರ್ಮಿಕರು, ಬಡವರೇ ಹೆಚ್ಚಿದ್ದಾರೆ. ಖಾಸಗಿ ಶಾಲೆಗಳಿಗೆ ಕಳುಹಿಸಲು ಅವರಲ್ಲಿ ಆರ್ಥಿಕ ಬಲ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಸರಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭವಾಗಿರುವುದು ಖುಷಿಯ ವಿಚಾರ. ಮುಂದೆ ಶಾಲೆಯ ಹಳೆ ವಿದ್ಯಾರ್ಥಿಗಳು, ದಾನಿಗಳನ್ನೆಲ್ಲ ಒಟ್ಟು ಮಾಡಿಕೊಂಡು ಎಲ್‌ಕೆಜಿ, ಯುಕೆಜಿ ಆರಂಭಿಸುವ ಪ್ರಯತ್ನವನ್ನೂ ಮಾಡಲಾಗುವುದು ಎಂದು ಪೋಷಕ ಹಾಗೂ ಎಸ್‌ಡಿಎಂಸಿ ಅಧ್ಯಕ್ಷ ಉಮರಬ್ಬ ಹೇಳುತ್ತಾರೆ.

Advertisement

ದ.ಕ.ಜಿ.ಪ.ಹಿ.ಪ್ರಾ. ಶಾಲೆ ಬಿಕರ್ನಕಟ್ಟೆ
ಪದವು ಬಿಕರ್ನಕಟ್ಟೆ ದ.ಕ.ಜಿ.ಪ.ಹಿ.ಪ್ರಾ. ಶಾಲೆಯಲ್ಲಿ ಕಳೆದ ವರ್ಷ 10 ಮಕ್ಕಳಿದ್ದರೆ ಈ ವರ್ಷ ಮಂಗಳವಾರದವರೆಗೆ 16 ಮಕ್ಕಳು ದಾಖಲಾಗಿದ್ದಾರೆ. ಈ ಶಾಲೆಯಲ್ಲಿ ಒಟ್ಟು ಐವರು ಶಿಕ್ಷಕರಿದ್ದು, ಮೂವರು ಗೌರವ ಶಿಕ್ಷಕರಿದ್ದಾರೆ. ತರಬೇತಿ ಪಡೆದ ಓರ್ವ ಶಿಕ್ಷಕರು ಮಕ್ಕಳಿಗೆ ಇಂಗ್ಲಿಷ್‌ ಪಾಠ ಹೇಳಿಕೊಡಲಿದ್ದಾರೆ. ಅಷ್ಟೇ ಅಲ್ಲದೆ, ಆಂಗ್ಲ ಭಾಷಾ ಹಿಡಿತ ಹೊಂದಿರುವ ಇನ್ನೋರ್ವ ಶಿಕ್ಷಕರನ್ನೂ ಶಾಲೆಯಲ್ಲಿ ಆಂಗ್ಲ ಬೋಧನೆಗಾಗಿ ನಿಯೋಜನೆ ಮಾಡಲಾಗಿದೆ. ಮುಖ್ಯ ಶಿಕ್ಷಕಿ ರಾಜೀವಿ ಮಾತನಾಡಿ, ಸರಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಲು ಇದೊಂದು ಉತ್ತಮ ಹೆಜ್ಜೆಯಾಗಿದೆ ಎಂದರು.

ಸರಕಾರಿ ಕನ್ನಡ ಶಾಲೆಗಳಲ್ಲೂ ಇಂಗ್ಲಿಷ್‌ ಮಾಧ್ಯಮ ಆರಂಭಗೊಂಡಿರುವುದು ನನ್ನಂತ ಅದೆಷ್ಟೋ ಹೆತ್ತವರ ಕನಸುಗಳನ್ನು ಚಿಗುರಿಸಿದೆ ಎನ್ನುತ್ತಾರೆ ಪೋಷಕರಾದ ಚೇತನ್‌ ಕುಮಾರ್‌.

ಸ.ಹಿ.ಪ್ರಾ. ಶಾಲೆ ಅತ್ತಾವರ
ಅತ್ತಾವರ ಸ.ಹಿ.ಪ್ರಾ. ಶಾಲೆಯಲ್ಲಿ ಇಲ್ಲಿವರೆಗೆ 20 ಮಕ್ಕಳು ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ಸೇರ್ಪಡೆ ಯಾಗಿದ್ದಾರೆ. ಈ ಶಾಲೆಯಲ್ಲಿಯೂ ಆಂಗ್ಲ ಮಾಧ್ಯಮಕ್ಕೆ ಮಕ್ಕಳನ್ನು ಸೇರ್ಪಡೆ ಮಾಡಲು ಹಲವಾರು ಮಂದಿ ಈಗಾಗಲೇ ವಿಚಾರಿಸಿದ್ದಾರೆ. ಸ್ವತಃ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರೇ ತಮ್ಮ ಪುತ್ರನನ್ನು ಆಂಗ್ಲ ಮಾಧ್ಯಮ ತರಗತಿಗೆ ದಾಖಲಾತಿ ಮಾಡಿದ್ದಾರೆ. 1ರಿಂದ 3ನೇ ತರಗತಿಯವರೆಗೆ ನಲಿಕಲಿ ಯೋಜನೆಯಡಿ ಕನ್ನಡ ಬೋಧನೆ ಇರುತ್ತದೆ. ಇಂಗ್ಲಿಷ್‌ ಮಾಧ್ಯಮ ಈ ಬಾರಿ ಒಂದನೇ ತರಗತಿಗೆ ಹೊಸದು. ಮಕ್ಕಳನ್ನು ಸೇರಿಸಲು ಹೆಚ್ಚು ಉತ್ಸುಕರಾಗಿದ್ದಾರೆ ಎನ್ನುತ್ತಾರೆ ಶಾಲೆಯ ಮುಖ್ಯೋಪಾಧ್ಯಾಯಿನಿ ಜಯಾ. ಪೋಷಕಿ ಹಾಗೂ ಎಸ್‌ಡಿಎಂಸಿ ಅಧ್ಯಕ್ಷೆ ಕವಿತಾ ಮಾತನಾಡಿ, ಒಂದನೇ ತರಗತಿಯಿಂದಲೇ ಆಂಗ್ಲ ಮಾಧ್ಯಮ ಶಿಕ್ಷಣ ಸರಕಾರಿ ಶಾಲೆಯಲ್ಲಿ ಆರಂಭವಾದರೆ ಮುಂದಿನ ಸ್ಪರ್ಧಾತ್ಮಕ ಯುಗವನ್ನು ಎದುರಿಸಲು ಎಳವೆಯಲ್ಲೇ ಮಕ್ಕಳು ಸಜ್ಜಾಗುತ್ತಾರೆ. ಎಂದರು.

ಬಲ್ಮಠ ಪ್ರಾಥಮಿಕ ಶಾಲೆ
ಬಲ್ಮಠ ಸರಕಾರಿ ಮಹಿಳಾ ಶಿಕ್ಷಣ ತರಬೇತಿ ಸಂಸ್ಥೆ ಪ್ರಾಥಮಿಕ ವಿಭಾಗ ಎಂದೇ ಕರೆಯಲ್ಪಡುವ ಶಾಲೆಯು ಶತಮಾನೋತ್ಸವ ಪೂರೈಸಿದೆ. ಆದರೆ, ಈ ಶಾಲೆಯಲ್ಲಿ ಹಿಂದಿನಿಂದಲೂ ಒಂದನೇ ತರಗತಿಯಲ್ಲಿ ಮಕ್ಕಳ ಕೊರತೆ ಇದ್ದು, ಕಳೆದ ವರ್ಷ ಓರ್ವ ವಿದ್ಯಾರ್ಥಿಯಷ್ಟೇ ಸೇರ್ಪಡೆಯಾಗಿದ್ದ, ಈ ವರ್ಷ ಶಾಲೆಯು ಒಂದನೇ ತರಗತಿಯಲ್ಲಿ ಆಂಗ್ಲ ಶಿಕ್ಷಣ ಬೋಧನೆಗೆ ಸರಕಾರದಿಂದ ಆಯ್ಕೆಯಾಗಿದ್ದರೂ, ಮಕ್ಕಳ ಸಂಖ್ಯೆ ಹೆಚ್ಚಾಗಿಲ್ಲ. ಇಬ್ಬರು ವಿದ್ಯಾರ್ಥಿಗಳಷ್ಟೇ ದಾಖಲಾತಿ ಪಡೆದುಕೊಂಡಿದ್ದು, ಇನ್ನೋರ್ವ ವಿದ್ಯಾರ್ಥಿಯ ಹೆತ್ತವರು ಸೇರ್ಪಡೆ ಮಾಡುವುದಾಗಿ ಹೇಳಿದ್ದಾರೆ ಎನ್ನುತ್ತಾರೆ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಸೀತಮ್ಮ ಜೆ.

ಬೆಂಗ್ರೆ ಕಸಬ ಸರಕಾರಿ ಪ್ರಾಥಮಿಕ ಶಾಲೆ
ಇಲ್ಲಿ ಪ್ರಸ್ತುತ 67 ಮಕ್ಕಳು ಒಂದನೇ ತರಗತಿಗೆ ಸೇರ್ಪಡೆಯಾಗಿದ್ದಾರೆ. ಆದರೆ, ಸರಕಾರ ಸೂಚಿಸಿರುವ ಪ್ರಕಾರ 30 ಮಕ್ಕಳಿಗೆ ಆಂಗ್ಲ ಮಾಧ್ಯಮದಲ್ಲಿ ಕಲಿಯುವ ಅವಕಾಶವಿದೆ. ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ ಕಳೆದ ವರ್ಷದಿಂದಲೇ ಕಾರ್ಯಾರಂಭ ಮಾಡಿರುವುದರಿಂದ ಮತ್ತು ಕನ್ನಡ ಮಾಧ್ಯಮದಲ್ಲಿಯೂ ಇಂಗ್ಲಿಷ್‌ ಕಲಿಸುವ ಪರಿಪಾಠ ಇರುವುದರಿಂದ ಈ ಮಕ್ಕಳಿಗೆ ಸಮಸ್ಯೆ ಆಗುವುದಿಲ್ಲ ಎಂದು ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ವೆರೋನಿಕಾ ಡಿ’ಸೋಜಾ ಹೇಳಿದ್ದಾರೆ.

ನಾಲ್ಯಪದವು ಕುವೆಂಪು ಶತಮಾನೋತ್ಸವ ಮಾದರಿ ಹಿ.ಪ್ರಾ. ಶಾಲೆ
ಶತಮಾನ ಪೂರೈಸಿದ ಶಕ್ತಿನಗರ ನಾಲ್ಯಪದವು ಕುವೆಂಪು ಶತಮಾನೋತ್ಸವ ಮಾ.ಹಿ.ಪ್ರಾ. ಶಾಲೆಯಲ್ಲಿ ಕಳೆದ ವರ್ಷ 15 ಮಕ್ಕಳು ಮಾತ್ರ ಒಂದನೇ ತರಗತಿಗೆ ಸೇರ್ಪಡೆಗೊಂಡಿದ್ದರೆ, ಈ ಶೈಕ್ಷಣಿಕ ವರ್ಷದಲ್ಲಿ 30 ಮಕ್ಕಳು ದಾಖಲಾಗಿದ್ದಾರೆ. ಜೂನ್‌ ತಿಂಗಳಿಡೀ ದಾಖಲಾತಿ ನಡೆಯುವುದರಿಂದ ಮಕ್ಕಳ ಸಂಖ್ಯೆ ಹೆಚ್ಚಾಗಲಿದೆ ಎಂದು ಸಂತಸದಿಂದಲೇ ನುಡಿಯುತ್ತಾರೆ ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ದಾಕ್ಷಾಯಿಣಿ. ಒಟ್ಟು ಏಳು ಮಂದಿ ಶಿಕ್ಷಕರು, ಐವರು ಗೌರವ ಶಿಕ್ಷಕರಿರುವ ಈ ಶಾಲೆಯಲ್ಲಿ ಮಕ್ಕಳಿಗೆ ಆಂಗ್ಲ ಶಿಕ್ಷಣ ಬೋಧಿಸಲು ಈಗಾಗಲೇ ಇಬ್ಬರು ಶಿಕ್ಷಕರು ತರಬೇತಿ ಪಡೆದುಕೊಂಡಿದ್ದಾರೆ.

ಸರಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಎಂಬ ಕೊರಗಿತ್ತು. ಆದರೆ, ಇನ್ನು ಮುಂದೆ ಸರಕಾರಿ ಶಾಲೆಗಳಲ್ಲೂ ಮಕ್ಕಳು ಇಂಗ್ಲಿಷ್‌ ಕಲಿಯುವ ಮೂಲಕ ಮಕ್ಕಳ ಸಂಖ್ಯೆ ಹೆಚ್ಚಾಗಲಿದೆ ಎನ್ನುತ್ತಾರೆ ದಾಕ್ಷಾಯಿಣಿ.

ಪೋಷಕರಾದ ಜಗದೀಶ್‌ ಪ್ರತಿಕ್ರಿಯಿಸಿ, ಈಗಾಗಲೇ ಅನೇಕ ಪೋಷಕರು ಮಕ್ಕಳನ್ನು ಸರಕಾರಿ ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ಸೇರಿಸಲು ಮುಂದೆ ಬಂದಿದ್ದಾರೆ. ಸರಕಾರಿ ಶಾಲೆಗಳ ಬಗ್ಗೆ ಗೌರವ ಹೆಚ್ಚಾಗಲು ಇದೊಂದು ಮಹತ್ತರ ಹೆಜ್ಜೆಯಾಗಿ ಮುಂದೆ ರೂಪುಗೊಳ್ಳಬಹುದು. ನನ್ನ ಮಗುವನ್ನೂ ಈ ಬಾರಿ ನಾಲ್ಯಪದವು ಶಾಲೆಗೆ ಒಂದನೇ ತರಗತಿಗೆ ಸೇರಿಸಿದ್ದೇನೆ ಎಂದರು.

ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next