Advertisement

ಅಪ್ರಾಪ್ತರ ಮೇಲೆ ದೌರ್ಜನ್ಯ ಹೆಚ್ಚಳ

11:21 AM Jul 27, 2019 | Team Udayavani |

ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ನಾಗರಿಕ ಸಮಾಜ ತಲೆ ತಗ್ಗಿಸುವ ರೀತಿಯಲ್ಲಿ ಅಪ್ರಾಪ್ತರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅದರಲ್ಲೂ ಲೈಂಗಿಕ ದೌರ್ಜನ್ಯ ಪ್ರಕರಣಗಳೇ ಹೆಚ್ಚಾಗಿ ದಾಖಲಾಗುತ್ತಿರುವುದು ಕಳವಳಕಾರಿ ಸಂಗತಿ ಎಂದು ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ ಎಸ್‌.ಎಚ್.ಕೋರಡ್ಡಿ ಹೇಳಿದರು.

Advertisement

ನಗರದ ಹೊರ ವಲಯದ ಜಡಲತಿಮ್ಮನಹಳ್ಳಿಯಲ್ಲಿರುವ ವಿಷ್ಣುಪ್ರಿಯ ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಹಮ್ಮಿಕೊಂಡಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಕಾಲಕಾಲಕ್ಕೆ ಕಾನೂನುಗಳಿಗೆ ತಿದ್ದುಪಡಿ ತಂದು ಬಲಿಷ್ಠ ಕಾನೂನು ರೂಪಿಸಿದರೂ ಅಪರಾಧ ಪ್ರಕರಣಗಳು ಇಳಿಮುಖವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕಠಿಣ ಶಿಕ್ಷೆ ಗುರಿ: ಪೋಕ್ಸೋ ಕಾಯ್ದೆಯಡಿ ಅಪರಾಧ ಸಾಬೀತಾದರೆ ಮರಣ ದಂಡನೆ ಸಹ ವಿಧಿಸುವಂತಹ ಅವಕಾಶಗಳು ಇವೆ. ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆಸಿದರೆ ಕಠಿಣ ಶಿಕ್ಷೆಗೆ ಗುರಿ ಆಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜಾಗ್ರತೆ ವಹಿಸಿ: ಕೆಲಸ ನಿರ್ವಹಿಸುವ ಸ್ಥಳಗಳಲ್ಲಿ ಮಹಿಳಾ ಸಿಬ್ಬಂದಿಗೆ ಸೂಕ್ತ ಭದ್ರತೆ ಒದಗಿಸುವುದು ಸಂಸ್ಥೆಯ ಜವಾಬ್ದಾರಿ. ಜೊತೆಗೆ ದೂರು ಪೆಟ್ಟಿಗಳನ್ನು ಸಹ ಅಳವಡಿಸಿ ಕಾಲಕಾಲಕ್ಕೆ ರಕ್ಷಣೆ ಹಾಗೂ ಭದ್ರತೆಯ ಬಗ್ಗೆ ಹೆಚ್ಚು ಜಾಗ್ರತೆ ವಹಿಸಬೇಕೆಂದರು.

ಅರಿವು ಮೂಡಿಸಿ: ಸ್ವಸ್ಥ ಸಮಾಜ ನಿರ್ಮಾಣ ಆಗಬೇಕಾದರೆ ಪ್ರತಿಯೊಬ್ಬರು ಕಾನೂನುಗಳನ್ನು ಪಾಲಿಸಬೇಕು. ಕಾನೂನು ಅರಿವು ಇಲ್ಲದೇ ಬಹಳಷ್ಟು ಮಂದಿ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಕಾನೂನುಗಳ ಅರಿವು ಹೆಚ್ಚಾದಷ್ಟು ಸಮಾಜದಲ್ಲಿ ಅಪರಾಧಗಳ ಸಂಖ್ಯೆ ಇಳಿಮುಖವಾಗುತ್ತದೆ.

Advertisement

ಆದ್ದರಿಂದ ಇಂದಿನ ವಿದ್ಯಾರ್ಥಿ ಯುವ ಸಮುದಾಯ ಕಾನೂನುಗಳ ಬಗ್ಗೆ ಹೆಚ್ಚು ತಿಳುವಳಿಕೆ ಹೊಂದಿ ತಾವು ಅನುಸರಿಸುವುದರ ಜೊತೆಗೆ ಪೋಷಕರಿಗೂ ಈ ಬಗ್ಗೆ ಅರಿವು ಮೂಡಿಸಬೇಕೆಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಷ್ಣುಪ್ರಿಯ ಕಾಲೇಜಿನ ಅಧ್ಯಕ್ಷ ರಾಮಚಂದ್ರ ರೆಡ್ಡಿ ವಹಿಸಿದ್ದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೆಚ್.ದೇವರಾಜ್‌, ವಕೀಲರ ಸಂಘದ ಜಿಲ್ಲಾಧ್ಯಕ್ಷ ಕೆ.ಎಚ್.ತಮ್ಮೇಗೌಡ, ಪ್ರಧಾನ ಕಾರ್ಯದರ್ಶಿ ವಿನೋದ್‌ ಕುಮಾರ್‌, ಜಂಟಿ ಕಾರ್ಯದರ್ಶಿ ಬಾಲಕೃಷ್ಣ, ವಕೀಲರಾದ ನಾರಾಯಣಮೂರ್ತಿ ಸೇರಿದಂತೆ ವಿಷ್ಣುಪ್ರಿಯ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next