Advertisement

ಸರಕಾರಿ ಕೆಪಿಎಸ್‌ಗಳಲ್ಲಿ ದಾಖಲಾತಿ ಹೆಚ್ಚಳ!

09:09 PM Aug 13, 2020 | mahesh |

ಉಡುಪಿ: ಜಿಲ್ಲೆಯಲ್ಲಿ ಈ ಬಾರಿ ಸರಕಾರಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ಸೇರ್ಪಡೆಯಾಗುವ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಏರಿಕೆ ಯಾಗಿದ್ದು, ಕೊರೊನಾ ಸಂಕಷ್ಟ ಕಾಲ ದಲ್ಲಿ ಸರಕಾರಿ ಶಾಲೆಗಳು ಪುನರ್‌ ಜೀವ ಪಡೆದುಕೊಂಡಿದ್ದು, ದಾಖಲಾತಿಯಲ್ಲಿ ಶೇ. 20ರಷ್ಟು ಏರಿಕೆಯಾಗಿದೆ.

Advertisement

ದಾಖಲಾತಿಯಲ್ಲಿ ಏರಿಕೆ
ಜಿಲ್ಲೆಯಲ್ಲಿ ಕೆಪಿಎಸ್‌ ದಾಖಲಾತಿಯಲ್ಲಿ ಉಡುಪಿ ವಲಯದಲ್ಲಿ 133, ಕುಂದಾಪುರ ವಲಯದಲ್ಲಿ 167, ಬೈಂದೂರು 57, ಕಾರ್ಕಳ 139, ಬ್ರಹ್ಮಾವರ ವಲಯದಲ್ಲಿ 82 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 578 ವಿದ್ಯಾರ್ಥಿಗಳು ಎಲ್‌ಕೆಜಿ ಹಾಗೂ ಒಂದನೇ ತರಗತಿಯಲ್ಲಿ ನೋಂದಾಯಿಸಿಕೊಂಡಿದ್ದಾರೆ. ಪ್ರಸ್ತುತ ಕೆಲ ಕೆಪಿಎಸ್‌ ಶಾಲೆಗಳಲ್ಲಿ ನೋಂದಣಿ ಪ್ರಕ್ರಿಯೆ ಇನ್ನೂ ಪ್ರಗತಿಯಲ್ಲಿದ್ದು, ಮುಂದಿನ ದಿನಗಳಲ್ಲಿ ದಾಖಲಾತಿ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಕಳೆದ ವರ್ಷ 459 ದಾಖಲಾತಿ
ಕಳೆದ ಶೈಕ್ಷಣಿಕ ಅವಧಿಯಲ್ಲಿ ಬ್ರಹ್ಮಾವರ ವಲಯದ ಸರಕಾರಿ ಪ್ರೌಢ ಶಾಲೆ ಕೊಕ್ಕಣೆ ಎಲ್‌ಕೆಜಿಯಲ್ಲಿ 41, 1ನೇ ತರಗತಿಯಲ್ಲಿ 20, ಬೈಂದೂರು ವಲಯದ ವಂಡ್ಸೆ ಎಲ್‌ಕೆಜಿ 21 ಹಾಗೂ 1ನೇ ತರಗತಿಗೆ 10, ಕಾರ್ಕಳ ವಲ ಯದ ಮುನಿಯಾಲು, ಸ. ಪ್ರೌಢ ಶಾಲೆ ಹೊಸ್ಮಾರ್‌ ಶಾಲೆಯ ಎಲ್‌ಕೆಜಿಯಲ್ಲಿ 76 ಹಾಗೂ 1ನೇ ತರಗತಿ ಯಲ್ಲಿ 73, ಕುಂದಾಪುರ ವಲಯದ ಕೋಟೇಶ್ವರ ಹಾಗೂ ಬಿದ್ಕಲ್‌ಕಟ್ಟೆ ಶಾಲೆ ಎಲ್‌ಕೆಜಿಯಲ್ಲಿ 40 ಹಾಗೂ 1ನೇ ತರಗತಿಯಲ್ಲಿ 68, ಉಡುಪಿ ವಲಯದ ಹಿರಿಯಡಕ, ಪಡುಬಿದ್ರಿ ಶಾಲೆಯ ಎಲ್‌ಕೆಜಿಯಲ್ಲಿ 82 ಹಾಗೂ ಒಂದನೇ ತರಗತಿಯಲ್ಲಿ 24 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 459 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಕಳೆದ ವರ್ಷ ಎಲ್‌ಕೆಜಿ ಪಾಸ್‌ ಆದ ವಿದ್ಯಾರ್ಥಿಗಳು ಯುಕೆಜಿಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.

8 ಶಾಲೆಗಳು ಕೆಪಿಎಸ್‌ಗಳಾಗಿ ಆಯ್ಕೆ
ಸರಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳನ್ನು ಆಕರ್ಷಿಸಲು ಮತ್ತು ಖಾಸಗಿ ಇಂಗ್ಲಿಷ್‌ ಮಾಧ್ಯಮ ಶಾಲೆಗಳಲ್ಲಿ ಸಿಗುವ ಗುಣಮಟ್ಟದ ಶಿಕ್ಷಣ ಸರಕಾರಿ ಶಾಲೆಗಳಲ್ಲಿಯೂ ಸಿಗಬೇಕೆಂಬ ನಿಟ್ಟಿನಲ್ಲಿ ಕರ್ನಾಟಕ ಪಬ್ಲಿಕ್‌ ಶಾಲೆಗಳಡಿ (ಕೆಪಿಎಸ್‌) ನೋಂದಾಯಿಸಲ್ಪಟ್ಟ ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮವನ್ನು ಆರಂಭಿಸಿದೆ. ಜಿಲ್ಲೆಯಲ್ಲಿ ಒಟ್ಟು 599 ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿದ್ದು, ಅವುಗಳಲ್ಲಿ ಒಟ್ಟು 8 ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳು ಕೆಪಿಎಸ್‌ಗಳಾಗಿ ಆಯ್ಕೆಯಾಗಿವೆ. ಸರಕಾರದ ನಿಯಮಾನುಸಾರ ಒಂದು ವಿಧಾನಸಭಾ ಕ್ಷೇತ್ರಕ್ಕೆ 4 ಕೆಪಿಎಸ್‌ ಜಾರಿಯಾಗಲಿದೆ.


ಕೆಪಿಎಸ್‌ ಶಾಲೆ ಸೌಲಭ್ಯ
ಕೆಪಿಎಸ್‌ಗಳಲ್ಲಿ ಶಾಲಾ ಹಂತದಲ್ಲಿಯೇ ಮಕ್ಕಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರನ್ನು ನೇಮಕ ಮಾಡಲಾಗುತ್ತದೆ. ಗುಣಮಟ್ಟದ ಶಿಕ್ಷಣಕ್ಕೆ ಒತ್ತು, ವಿದ್ಯಾರ್ಥಿಗಳ ಬೋಧನೆಗೆ ಸುಸಜ್ಜಿತ ಕೊಠಡಿ, ವ್ಯವಸ್ಥಿತ ಪ್ರಯೋಗಾಲಯ, ಪ್ರತ್ಯೇಕ ಕಂಪ್ಯೂಟರ್‌ ಲ್ಯಾಬ್‌, ಗುಣಮಟ್ಟದ ಗ್ರಂಥಾಲಯ, ಶುದ್ಧ ಕುಡಿಯುವ ನೀರು, ಆಟದ ಮೈದಾನ, ಬಾಲಕರು ಮತ್ತು ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಹೊಂದಿರುತ್ತದೆ.

ಶೇ. 10ರಷ್ಟು ನೋಂದಣಿ
ಬೇರೆ ಖಾಸಗಿ ಹಾಗೂ ಸರಕಾರಿ ಶಾಲೆಗಳ ವಿದ್ಯಾರ್ಥಿಗಳನ್ನು ಕೆಪಿಎಸ್‌ಗೆ ನೋಂದಣಿ ಮಾಡಲು ಪೋಷಕರು ಮುಗಿ ಬೀಳುತ್ತಿದ್ದಾರೆ. ಈ ಬಾರಿ 1ನೇ ತರಗತಿಗೆ ಹೊಸದಾಗಿ ಶೇ. 10ರಷ್ಟು ವಿದ್ಯಾರ್ಥಿಗಳು ನೊಂದಣಿ ಯಾಗಿದ್ದಾರೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

Advertisement

ನೋಂದಣಿ ಸಂಖ್ಯೆ ಹೆಚ್ಚಳ
ಕಳೆದ ವರ್ಷಕ್ಕಿಂತ ಈ ಬಾರಿ ಕೆಪಿಎಸ್‌ಗಳಲ್ಲಿ ವಿದ್ಯಾರ್ಥಿಗಳ ನೋಂದಣಿ ಸಂಖ್ಯೆ ಹೆಚ್ಚಾಗಿದೆ. ದಾಖಲಾತಿ ಸಮಯ ಮುಂದಕ್ಕೆ ಹೋಗಿರುವುದರಿಂದ ಮುಂದಿನ ದಿನದಲ್ಲಿ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಇದು ಸರಕಾರಿ ಶಾಲೆಗಳ ಉಳಿವಿನ ಕಡೆಗೆ ಮೊದಲ ಹೆಜ್ಜೆಯಾಗಿದೆ. ತರಗತಿಯಲ್ಲಿ 30 ವಿದ್ಯಾರ್ಥಿಗಳಿಗೆ ಅವಕಾಶ. ಆದರೆ ಪೋಷಕರ ಒತ್ತಡದಿಂದ 50 ವಿದ್ಯಾರ್ಥಿಗಳನ್ನು ಸೇರ್ಪಡೆಗೊಳಿಸಲಾಗಿದೆ. ಪ್ರಸ್ತುತ ಇನ್ನೂ 8 ಕೆಪಿಎಸ್‌ ಶಾಲೆಗಳ ಮಂಜೂರಾತಿ ಅರ್ಜಿ ಸಲ್ಲಿಸಲಾಗಿದೆ.
-ಶೇಷಶಯನ ಕಾರಿಂಜ, ಡಿಡಿಪಿಐ ಉಡುಪಿ.

Advertisement

Udayavani is now on Telegram. Click here to join our channel and stay updated with the latest news.

Next