ನವದೆಹಲಿ: ಭಾರತದಲ್ಲಿ ಕಳೆದೆರಡು ವರ್ಷಗಳಲ್ಲಿ 5,188 ಚದರ ಕಿ.ಮೀ.ನಷ್ಟು ಅರಣ್ಯ ವೃದ್ಧಿಯಾಗಿದ್ದು, ಅತಿ ಹೆಚ್ಚು ಅರಣ್ಯ ವೃದ್ಧಿಯಾದ ಹೆಗ್ಗಳಿಕೆಗೆ ಕರ್ನಾಟಕ ಭಾಜನವಾಗಿದೆ. ರಾಜ್ಯದಲ್ಲಿ ಒಟ್ಟು 1,025 ಚದರ ಕಿ.ಮೀ.ನಷ್ಟು ಅರಣ್ಯ ಹೆಚ್ಚಳವಾಗಿದೆ ಎಂದು ಭಾರತೀಯ ಅರಣ್ಯ ಸರ್ವೇ (ಎಫ್ಎಸ್‌ಐ)ನ “2019ರ ಅರಣ್ಯಗಳ ಸ್ಥಿತಿಗತಿ ವರದಿ’ಯಲ್ಲಿ ಉಲ್ಲೇಖೀಸಲಾಗಿದೆ. ನವದೆಹಲಿಯಲ್ಲಿ ಸೋಮವಾರ ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಈ ವರದಿ ಬಿಡುಗಡೆ ಮಾಡಿದರು.
ಎಫ್ಎಸ್‌ಐ, 2017ರಲ್ಲಿ ನಡೆಸಿದ್ದ ಅಧ್ಯಯನಕ್ಕೆ ಹೋಲಿಸಿದರೆ, ಕಳೆದೆರಡು ವರ್ಷಗಳಲ್ಲಿ ಅರಣ್ಯ ವ್ಯಾಪ್ತಿಯಲ್ಲಿ 3,976 ಚದರ ಕಿ.ಮೀ.ವರೆಗೆ ಮರಗಳ ಸಂಖ್ಯೆ ಹೆಚ್ಚಾಗಿದೆ. ಇದನ್ನು ಫಾರೆಸ್ಟ್ ಕವರ್ ಎಂದು ಕರೆಯಲಾಗುತ್ತದೆ.
ಇನ್ನು, ಅಧ್ಯಯನ ಕೈಗೊಂಡ ಅರಣ್ಯ ವ್ಯಾಪ್ತಿಗಳ ಹೊರಭಾಗದಲ್ಲಿನ ಮರಗಳು 1,212 ಚದರ ಕಿ.ಮೀ.ವರೆಗೆ ವಿಸ್ತರಣೆಯಾಗಿದೆ. ಇದನ್ನು ಟ್ರೀ ಕವರ್ ಎಂದು ಕರೆಯಲಾಗುತ್ತದೆ. ಈ ಎರಡೂ ವ್ಯಾಪ್ತಿಯಲ್ಲಿ ಒಟ್ಟು 5,188 ಚದರ ಕಿ.ಮೀ. ವ್ಯಾಪ್ತಿಯಲ್ಲಿ ಅರಣ್ಯ ಅಭಿವೃದ್ಧಿಗೊಂಡಿದೆ ಎಂದು ಸಚಿವರು ತಿಳಿಸಿದರು.
ಅಲ್ಲದೆ, ಪರಿಸರ ಸಂರಕ್ಷಣೆ ವಿಚಾರವಾಗಿ ಪ್ಯಾರಿಸ್ ಒಪ್ಪಂದಕ್ಕೆ ಸಹಿ ಹಾಕಿರುವ ಭಾರತ, ಒಪ್ಪಂದದ ಧ್ಯೇಯೋದ್ದೇಶಗಳನ್ನು ಮುಟ್ಟುವತ್ತ ದಾಪುಗಾಲು ಇಟ್ಟಿರುವುದು ಇದರಿಂದ ಸಾಬೀತಾಗಿದೆ ಎಂದು ಹರ್ಷಿಸಿದರು.
– ಭಾರತೀಯ ಅರಣ್ಯ ಸರ್ವೇ (ಎಫ್ಎಸ್‌ಐ) ವರದಿಯಲ್ಲಿ ಉಲ್ಲೇಖ
– 2017ರಲ್ಲಿ ಬಂದಿದ್ದ ಎಫ್ಎಸ್‌ಐ ವರದಿಗೆ ಹೋಲಿಸಿದರೆ ಗಮನಾರ್ಹ ಅಭಿವೃದ್ಧಿ
– ಅರಣ್ಯಗಳಲ್ಲಿನ ಮರಗಳ ವ್ಯಾಪ್ತಿ 3,976 ಚದರ ಕಿ.ಮೀ.ಗೆ ಹೆಚ್ಚಳ
– ಅರಣ್ಯೇತರ ಪ್ರದೇಶಗಳಲ್ಲಿನ ಮರಗಳ ವ್ಯಾಪ್ತಿ 1,212 ಚದರ ಕಿ.ಮೀ.ವರೆಗೆ ವಿಸ್ತರಣೆ ಎಂದಿರುವ ವರದಿ
ಕರ್ನಾಟಕ ನಂಬರ್ 1
ರಾಜ್ಯ ವಿಸ್ತೀರ್ಣ (ಚದರ ಕಿ.ಮೀ.ಗಳಲ್ಲಿ)
ಕರ್ನಾಟಕ – 1025
ಆಂಧ್ರಪ್ರದೇಶ – 990
ಕೇರಳ – 823
ಜಮ್ಮುಕಾಶ್ಮೀರ – 371
ಹಿ. ಪ್ರದೇಶ – 334