Advertisement

ಸತ್ಯಾಪನಾ ಶುಲ್ಕ ಸಂಗ್ರಹ ಏರಲಿ, ತಪಾಸಣೆ ಹೆಚ್ಚಿಸಿ: ಸಚಿವ ಉಮೇಶ್‌ ಕತ್ತಿ

10:45 PM May 07, 2022 | Team Udayavani |

ಮಂಗಳೂರು: ಕಾನೂನು ಮಾಪನ ಶಾಸ್ತ್ರ ಇಲಾಖೆಗೆ ನಿಗದಿ ಪಡಿಸಲಾದ ಸತ್ಯಾಪನಾ ಶುಲ್ಕ (ವೆರಿಫಿಕೇಶನ್‌ ಫೀ)ದ ಗುರಿ ಮುಟ್ಟುವಂತೆ ಹಾಗೂ ತೂಕ ಮತ್ತು ಅಳತೆಯಲ್ಲಿ ವಂಚನೆ ಪ್ರಕರಣಗಳನ್ನು ಪತ್ತೆಹಚ್ಚಲು ಇಲಾಖೆ ವತಿಯಿಂದ ಹೆಚ್ಚಿನ ತಪಾಸಣೆ ನಡೆಸುವಂತೆ ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳ ಹಾಗೂ ಅರಣ್ಯ ಖಾತೆ ಸಚಿವ ಉಮೇಶ್‌ ಕತ್ತಿ ಕಾನೂನು ಮಾಪನ ಶಾಸ್ತ್ರ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Advertisement

ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲೆಯ ಆಹಾರ ಇಲಾಖೆ, ಕಾನೂನು ಮಾಪನ ಶಾಸ್ತ್ರ ಮತ್ತು ಅರಣ್ಯ ಇಲಾಖೆಯ ಪ್ರಗತಿ ಪರಿಶೀಲನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ಕೆ.ಜಿ. ಕುಲಕರ್ಣಿ ಪ್ರತಿಕ್ರಿಯಿಸಿ, ಜಿಲ್ಲೆಯಲ್ಲಿ 154 ಪೆಟ್ರೋಲ್‌ ಬಂಕ್‌ಗಳಿದ್ದು ಅವುಗಳನ್ನು ಆಗಾಗ ಪರಿಶೀಲಿಸಲಾಗುತ್ತಿದೆ, ವಂಚನೆ ಮಾಡಿದ ನಾಲ್ಕು ಬಂಕ್‌ಗಳಿಗೆ ಈಗಾಗಲೇ ದಂಡ ವಿಧಿಸಲಾಗಿದೆ ಎಂದರು.

ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಮಾತನಾಡಿ, ಕಾನೂನು ಮಾಪನ ಶಾಸ್ತ್ರ ಇಲಾಖೆ ನಿಗದಿಪಡಿಸಲಾದ ಗುರಿ ಮುಟ್ಟಬೇಕು ಹಾಗೂ ಗ್ರಾ.ಪಂ., ತಾಲೂಕುಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುವಂತೆ ತಿಳಿಸಿದರು.

ಬಾಕಿ ಕಾರ್ಡ್‌
ವಿತರಣೆಗೆ ಸೂಚನೆ
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವತಿಯಿಂದ ಜಿಲ್ಲೆಯ 3,668 ಆದ್ಯತಾ ಪಡಿತರ ಚೀಟಿಗಳು ಹಾಗೂ 3,370 ಆದ್ಯತೇತರ ಪಡಿತರ ಚೀಟಿಗಳ ವಿತರಣೆ ಬಾಕಿ ಉಳಿದಿದ್ದು ಅದನ್ನು ಶೀಘ್ರ ವಿಲೇವಾರಿ ಮಾಡುವಂತೆ ಸಚಿವರು ಸೂಚಿಸಿದರು.

Advertisement

3,946 ಅನರ್ಹ ಪಡಿತರ ಚೀಟಿಗಳಿಗೆ ಒಟ್ಟು 15,78,731 ರೂ.ಗಳ ದಂಡ ವಸೂಲಿ ಮಾಡಿರುವುದಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಮಧುಸೂದನ್‌ ಸಭೆಗೆ ತಿಳಿಸಿದರು.

ಮಾನದಂಡಗಳನ್ನು ಉಲ್ಲಂಘಿಸಿದ ಪ್ರಕರಣಗಳಲ್ಲಿ ಈ ಅನರ್ಹ ಪಡಿತರ ಚೀಟಿಗಳನ್ನು ಪತ್ತೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಕಾಲಮಿತಿಯೊಳಗೆ ಪರಿಹಾರ
ಬೆಳೆ ಹಾನಿ, ಜಾನುವಾರು ಹಾಗೂ ಮಾನವ ಸಾವು ಪ್ರಕರಣಗಳಲ್ಲಿ ಪರಿಹಾರ ಮೊತ್ತವನ್ನು ಸಂಬಂಧಿಸಿದವರಿಗೆ ಕಾಲಮಿತಿಯೊಳಗೆ ಪಾವತಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ ಸಚಿವರು, ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನೆಡುತೋಪುಗಳ ನಿರ್ವಹಣೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

48.47 ಲಕ್ಷ ರೂ. ಪರಿಹಾರ
ಅರಣ್ಯ ಉಪಸಂರಕ್ಷಣಾಧಿಕಾರಿ ಡಾ| ದಿನೇಶ್‌ ಕುಮಾರ್‌ ವೈ.ಕೆ. ಮಾತನಾಡಿ, ಬೆಳೆಹಾನಿ ಆಗುವ ಜಾನುವಾರು ಮತ್ತು ಮಾನವ ಹಾನಿ ಪ್ರಕರಣಗಳಲ್ಲಿ ಒಟ್ಟು 48.47 ಲಕ್ಷ ರೂ. ಪರಿಹಾರವನ್ನು ಇಲಾಖೆ ವತಿಯಿಂದ ಪಾವತಿಸಲಾಗಿದೆ, ತಣ್ಣೀರು ಬಾವಿ ಬೀಚ್‌ನಲ್ಲಿ ಡಾಲ್ಫಿನ್‌ ರಕ್ಷಣಾ ಕೇಂದ್ರದ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಶಾಸಕ ಡಿ. ವೇದವ್ಯಾಸ ಕಾಮತ್‌, ಅಪರ ಜಿಲ್ಲಾಧಿಕಾರಿ ಡಾ| ಕೃಷ್ಣಮೂರ್ತಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next