ಚಿಕ್ಕಬಳ್ಳಾಪುರ: ಕೋವಿಡ್-19 ಪಾಸಿಟಿವ್ ಕಂಡು ಬಂದ ಹಿನ್ನೆಲೆಯಲ್ಲಿ ನಗರದ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಒಂದು ವರ್ಷದ ಬಾಲಕಿ ಗುರುವಾರ ಸೋಂಕಿನಿಂದ ಸಂಪೂರ್ಣ ಚೇತರಿಕೆ ಕಂಡು ಡಿಸ್ಚಾರ್ಜ್ ಆಗಿದೆ. ಬಾಲಕಿಯ ಪೋಷಕರಲ್ಲಿ ಈ ಸಂತಸ ಒಂದಡೆಯಾದರೆ ಮತ್ತೊಂದಡೆ ಮಗುವಿನ ತೂಕದಲ್ಲಿ ಹೆಚ್ಚಳವಾಗಿ ಗಮನ ಸೆಳೆದಿದ್ದಾಳೆ.
ಹೌದು, ಈ ಮೊದಲು ಅಪೌಷ್ಟಿಕತೆಯಿಂದ ಬಳಲುತ್ತಿದ್ದ ಕೋವಿಡ್-19 ಸೋಂಕಿತ ಬಾಲೆಯನ್ನು ಕೋವಿಡ್-19 ಆಸ್ಪತ್ರೆಯ ಐಸೋಲೆಷನ್ ವಾರ್ಡ್ ನಲ್ಲಿ ಕಳೆದ ಮೇ ತಿಂಗಳ 25 ರಂದು ಚಿಕಿತ್ಸೆಗೆ ದಾಖಲಿಸುವ ವೇಳೆ ಕೇವಲ 7.4 ಕೆಜಿ ತೂಕ ಇದ್ದಳು. ಇದೀಗ ಚಿಕಿತ್ಸೆ ಮುಗಿದು ಎರಡು ಬಾರಿ ನಡೆಸಿದ ಗಂಟಲು ದ್ರವ್ಯದ ಮಾದರಿ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದ್ದು ಗುರುವಾರ ಕೋವಿಡ್-19 ಆಸ್ಪತ್ರೆಯಿಂದ ಬಿಡುಗಡೆಯಾದ ಸಂದರ್ಭದಲ್ಲಿ ಬಾಲಕಿಯ ತೂಕ 8.4 ಕೆಜಿ ಹೆಚ್ಚಳವಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಮಕ್ಕಳ ತಜ್ಞರ ಸಲಹೆ, ಸೂಚನೆಯಂತೆ ಕೋವಿಡ್-19 ಸೋಂಕಿನಿಂದ ಬಳಲುತ್ತಿದ್ದ ಬಾಲಕಿಗೆ ಅಗತ್ಯ ಪೌಷ್ಟಿಕಾಹಾರ ನೀಡಲಾಗಿದ್ದು ಇದರಂತೆ ಬಾಲಕಿ ತೂಕದಲ್ಲಿ ಹೆಚ್ಚಳ ಕಂಡಿದೆ.
ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಸ್ಥಾಪಿಸಲಾಗಿರುವ ಮಕ್ಕಳಲ್ಲಿನ ಅಪೌಷ್ಟಿಕತೆ ತೊಲಗಿಸುವ ಘಟಕ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸತ್ತಾ ಇಡೀ ರಾಷ್ಟ್ರದ ಗಮನ ಸೆಳೆದಿದೆ.
ಸಾಮಾನ್ಯವಾಗಿ ಯಾವುದೇ ಸೋಂಕಿಗೆ ವ್ಯಕ್ತಿ ಅಥವ ಮಕ್ಕಳು ತುತ್ತಾದರೆ ಸೊರಗುವುದು ಸಾಮಾನ್ಯ. ಆದರೆ ಕೋವಿಡ್ ಸೋಂಕಿಗೆ ತುತ್ತಾಗಿದ್ದ ಒಂದು ವರ್ಷದ ಬಾಲಕಿಯ ತೂಕದಲ್ಲಿ ಹೆಚ್ಚಳ ಆಗಿರುವುದು ಅವರ ಪೋಷಕರ ಸಂತಸಕ್ಕೆ ಕಾರಣವಾಗಿದೆ.
ಕೋವಿಡ್-19 ಸೋಂಕಿನಿಂದ ಸಂಪೂರ್ಣ ಗುಣಮುಖರಾದ ಬಾಲೆಯನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾಗುವ ವೇಳೆ ಜಿಲ್ಲಾಸ್ಪತ್ರೆಯ ಮಕ್ಕಳು ತಜ್ಞರು, ವೈದ್ಯಕೀಯ ಸಿಬ್ಬಂದಿ ವಿಶೇಷವಾಗಿ ಕೋವಿಡ್ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ವೈದ್ಯರು ಉಪಸ್ಥಿತಿ ಇದ್ದು ಬಾಲಕಿಗೆ ಚಪ್ಪಾಳೆ ತಟ್ಟಿ ಶುಭ ಕೋರಿದರು.