ಬೆಂಗಳೂರು: ಹಾಪ್ ಕಾಮ್ಸ್ (ತೋಟಗಾರಿಕಾ ಉತ್ಪಾದಕರ ಸಹಕಾರ ಮಾರುಕಟ್ಟೆ ಮತ್ತು ಸಂಸ್ಕರಣೆ ಸೊಸೈಟಿ) ಸೇರಿದಂತೆ ಸಿಲಿಕಾನ್ ಸಿಟಿಯ ಮಾರುಕಟ್ಟೆಗಳಲ್ಲಿ ತರಕಾರಿ ಬೆಲೆ ಗನಗನಕ್ಕೇರಿದೆ. ಬೀನ್ಸ್,ನುಗ್ಗೆಕಾಯಿ ಸೇರಿದಂತೆ ಕೆಲ ತರಕಾರಿ ದರ ಪ್ರತಿ ಕೆ.ಜಿ.ಗೆ ಶತಕದ ಗಡಿ ದಾಟಿದ್ದು, ಗ್ರಾಹಕರ ಕೈ ಸುಡುತ್ತಿದೆ.
ಕೆಲ ದಿನಗಳ ಹಿಂದೆ ಬೆಂಗಳೂರು ಸುತ್ತಮುತ್ತ ಸುರಿದ ಭಾರೀ ಮಳೆಗೆ ಅಪಾರ ಪ್ರಮಾಣದ ತರಕಾರಿ ಬೆಳೆಗೆ ಹಾನಿ ಉಂಟಾಗಿದೆ. ಹೀಗಾಗಿ ಈಗ ರಾಜಧಾನಿ ಜನರು ತಮಿಳುನಾಡಿನ ಊಟಿ ಭಾಗದಿಂದ ಪೂರೈಕೆ ಆಗುವ ತರಕಾರಿಗಳಿಗೆ ಅವಲಂಬಿತರಾಗಬೇಕಾಗಿದೆ. ಆದ್ದರಿಂದ ಕಲಾಸಿಪಾಳ್ಯ, ಕೆ.ಆರ್.ಮಾರುಕಟ್ಟೆ ಅಷ್ಟೇ ಅಲ್ಲ ಹಾಪ್ ಕಾಮ್ಸ್‌ನಲ್ಲೂ ಕೆಲ ತರಕಾರಿಗಳ ಬೆಲೆ ನೂರರ ಗಡಿ ದಾಟಿದೆ. ಈ ಪರಿಸ್ಥಿತಿ ಕೆಲ ತಿಂಗಳ ಕಾಲ ಹೀಗೆ ಮುಂದುವರಿಯುವ ಸಾಧ್ಯತೆ ಇದೆ.
ಕೆ.ಆರ್.ಮಾರುಕಟ್ಟೆಯಲ್ಲಿ ಈ ಹಿಂದೆ ಬೀನ್ಸ್ ಪ್ರತಿ ಕೆ.ಜಿ.ಗೆ 40 ರಿಂದ 50 ರೂ.ವರೆಗೆ ಮಾರಾಟವಾಗುತ್ತಿತ್ತು. ಬದನೆಕಾಯಿ 30ರಿಂದ 35 ರೂ., ಬಿಟ್‌ರೂಟ್ 30ರಿಂದ 40 ರೂ., ನುಗ್ಗೆಕಾಯಿ ಪ್ರತಿ ಕೆ.ಜಿ.ಗೆ 40 ರೂ. ರಿಂದ 50 ರೂ.ಗೆ ಖರೀದಿಯಾಗುತ್ತಿತ್ತು. ಇದೀಗ ತರಕಾರಿ ಅಭಾವದಿಂದಾಗಿ ಗುಣಮಟ್ಟದ ಬೀನ್ಸ್ ಪ್ರತಿ ಕೆ.ಜಿ. ಗೆ 100 ರಿಂದ 120 ರೂ.ವರೆಗೂ ಮಾರಾಟವಾಗುತ್ತಿದೆ. ಮೈಸೂರು ಬದನೆ ಕೆ.ಜಿ.ಗೆ 60ರಿಂದ 80ರೂ. ಗೆ ಖರೀದಿಯಾಗುತ್ತಿದೆ. 40 ರೂ.ಗೆ ಗ್ರಾಹಕರಿಗೆ ದೊರೆಯುತ್ತಿದ್ದ ನುಗ್ಗೆಕಾಯಿ ಈಗ 100 ರೂ.ಗೆ ಖರೀದಿಯಾಗುತ್ತಿದೆ. 15ರಿಂದ 20 ರೂ.ಗೆ ಮಾರಾಟವಾಗುತ್ತಿದ್ದ ಬೆಂಡೆಕಾಯಿ ಈಗ 40ರಿಂದ 50ರೂ.ವರೆಗೆ ಮತ್ತು ಗುಣಮಟ್ಟದ ಕ್ಯಾರೆಟ್ 50 ರೂ.ಗೆ ಖರೀದಿಯಾಗುತ್ತಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.
ಊಟಿ ತರಕಾರಿಗಳಿಗೆ ಅವಲಂಬಿತ: ಸಿಲಿಕಾನ್ ಸಿಟಿ ಬೆಂಗಳೂರಿಗೆ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಂದ ತರಕಾರಿಗಳು ಪೂರೈಕೆ ಆಗುತ್ತದೆ. ರಾಜ್ಯದ ಗಡಿಭಾಗ ತಮಿಳುನಾಡಿನ ಹೊಸೂರಿನಿಂದಲೂ ಹೆಚ್ಚಿನ ಪ್ರಮಾಣದಲ್ಲಿ ಹೂವು, ಹಣ್ಣು, ತರಕಾರಿಗಳು ಸರಬರಾಜು ಆಗುತ್ತದೆ. ಆದರೆ ಇತ್ತೀಚೆಗೆ ಸುರಿದ ಭಾರೀ ಮಳೆಯ ಹಿನ್ನೆಲೆಯಲ್ಲಿ ಅಪಾರ ಪ್ರಮಾಣದ ತರಕಾರಿ ಬೆಳೆಗಳಿಗೆ ಹಾನಿ ಉಂಟಾಗಿದೆ.ಆ ಹಿನ್ನೆಲೆಯಲ್ಲಿ ತರಕಾರಿಗಳ ಪೂರೈಕೆ ಕಡಿಮೆ ಆಗಿದ್ದು ಬೀನ್ಸ್, ನುಗ್ಗೆ ಕಾಯಿ ಬೆಲೆ ನೂರರ ಗಡಿದಾಟಿದೆ ಎಂದು ಕಲಾಸಿಪಾಳ್ಯ ಮಾರುಕಟ್ಟೆಯ ಹೋಲ್ ಸೇಲ್ ವ್ಯಾಪಾರಿ ರವಿರಾಜ್ ಹೇಳುತ್ತಾರೆ. ತರಕಾರಿಗಳ ಅಭಾವದ ಹಿನ್ನೆಲೆಯಲ್ಲಿ ಇದೀಗ ಊಟಿ ಭಾಗದಿಂದ ರಾಜಧಾನಿಯ ತರಕಾರಿಗಳ ಪೂರೈಕೆ ಆಗುತ್ತಿದೆ.ಮೈಸೂರು ಭಾಗದಿಂದ ಉತ್ತಮ ಗುಣಮಟ್ಟದ ಬದನೆಕಾಯಿ ಪೂರೈಕೆ ಆಗುತ್ತಿದೆ ಎನ್ನುತ್ತಾರೆ.
ಹಾಪ್‌ಕಾಮ್ಸ್‌ನಲ್ಲಿ ನೂರರ ಗಡಿ ದಾಟಿದ ಬೀನ್ಸ್ : ಹಾಪ್‌ಕಾಮ್ಸ್‌ನಲ್ಲಿ ಕೂಡ ತರಕಾರಿ ಬೆಳೆಗಳ ದರ ಕೈ ಸುಡುತ್ತಿದೆ. ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳ ರೈತರ ಬೆಳೆಗಳ ಮೇಲೆ ಹಾಪ್ ಕಾಮ್ಸ್ ಅವಲಂಬಿತವಾಗಿದೆ. ಆದರೆ ಈಗ ಅಧಿಕ ಪ್ರಮಾಣದಲ್ಲಿ ಗುಣಟ್ಟದ ತರಕಾರಿಗಳು ದೊರೆಯುತ್ತಿಲ್ಲ. ಆ ಹಿನ್ನೆಲೆಯಲ್ಲಿ ಊಟಿ ಸೇರಿದಂತೆ ಮತ್ತಿತರರ ಭಾಗದಿಂದ ಗ್ರಾಹಕರ ಅನುಕೂಲಕ್ಕಾಗಿ ಕೆಲ ತರಕಾರಿಗಳನ್ನು ಕಂಡುಕೊಳ್ಳಲಾಗುತ್ತದೆ ಎಂದು ಹಾಪ್ ಕಾಮ್ಸ್‌ನ ಮಾರುಕಟ್ಟೆ ವಿಭಾಗದ ಹಿರಿಯ ಅಧಿಕಾರಿ ಜಗದೀಶ್ ಮಾಹಿತಿ ನೀಡುತ್ತಾರೆ. ನುಗ್ಗೆಕಾಯಿ ಪ್ರತಿ ಕೆಜಿಗೆ 110 ರೂ., ಗುಣಮಟ್ಟದ ಬೀನ್ಸ್ 127 ರೂ.ಗೆ ಮಾರಾಟವಾಗುತ್ತಿದೆ. ಬದನೆ ಕಾಯಿ ಪ್ರತಿ ಕೆ.ಜಿ.ಗೆ 84 ರೂ. ಮಾರಾಟವಾಗುತ್ತಿದೆ. ಊಟಿ ಕ್ಯಾರೆಟ್ ಕೆ.ಜಿ.ಗೆ 96 ರೂ, ನವಿಲು ಕೋಸು 63 ರೂ., ಬೆಂಡೆಕಾಯಿ 54 ರೂ., ಹೂ ಕೋಸು 43 ರೂ.ಗೆ ಮಾರಾಟವಾಗುತ್ತಿದೆ ಎನ್ನುತ್ತಾರೆ.
ರಾಜಧಾನಿಯ ಸುತ್ತಮುತ್ತ ಇತ್ತೀ ಚೆಗೆ ಸುರಿದ ಮಳೆ ಹಿನ್ನೆಲೆಯಲ್ಲಿ ತರಕಾರಿ ಬೆಳೆಗಳಿಗೆ ಹಾನಿ ಉಂಟಾಗಿದೆ. ಈ ಎಲ್ಲ ಕಾರಣದಿಂದಾಗಿ ಈಗ ಮಾರುಕಟ್ಟೆಯಲ್ಲಿ ತರಕಾರಿ ಬೆಳೆಗಳ ಬೆಲೆ ಹೆಚ್ಚಳವಾಗಿದೆ. ಹಾಪ್‌ಕಾಮ್ಸ್ ನಲ್ಲಿ ಕೆಲವು ತರಕಾರಿಗಳ ಬೆಲೆ ನೂರರ ಗಡಿ ದಾಟಿದೆ.
● ಉಮೇಶ್ ಮಿರ್ಜಿ, ವ್ಯವಸ್ಥಾಪಕ ನಿರ್ದೇಶಕ, ಹಾಪ್ ಕಾಮ್ಸ್
ತರಕಾರಿ ಬೆಲೆಗಳ ಏರಿಕೆಯಿಂದಾಗಿ ಬೀನ್ಸ್ ಮತ್ತು ನುಗ್ಗಿಕಾಯಿಗಳನ್ನು ಚಿಲ್ಲರೆ ದರದಲ್ಲಿ ಮಾರಾಟ ಮಾಡು ವುದು ದೊಡ್ಡ ಸವಾಲಾಗಿದೆ. ಮಾರುಕಟ್ಟೆ ಯಲ್ಲಿ ಬೀನ್ಸ್ ಪ್ರತಿ ಕೆ.ಜಿ.ಗೆ 110 ರೂ.ಗೆ ದೊರೆಯುತ್ತಿರುವ ಹಿನ್ನೆಲೆಯಲ್ಲಿ ನಾನು 120 ರೂ.ಗೆ ಮಾರಾಟ ಮಾಡುತ್ತೇನೆ. ಕೆಲವು ಅಂಗಡಿಗಳಲ್ಲಿ ದರಗಳು ಭಿನ್ನ ಭಿನ್ನವಾಗಿರುತ್ತದೆ. ●
ಜಗದೀಶ್, ತರಕಾರಿ ವ್ಯಾಪಾರಿ, ಪೀಣ್ಯ
-ದೇವೇಶ ಸೂರಗುಪ್ಪ