Advertisement

ಉತ್ತರದಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಹೆಚ್ಚಳ

10:46 AM May 20, 2022 | Team Udayavani |

ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದಲ್ಲಿ ಸಂಚಾರ ನಿಯಮಗಳ ಉಲ್ಲಂಘನೆ ಹೆಚ್ಚಾಗಿದೆ. ಇನ್ನೂ ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರು, ನರ್ಸಿಂಗ್‌ ಸಿಬ್ಬಂದಿ ಕೊರತೆ ಹಾಗೂ ಮೂಲ ಸೌಕರ್ಯದ ಕುರಿತು ಸರಕಾರಕ್ಕೆ ಪತ್ರ ಬರೆಯಲಾಗುವುದು. ಒಂದು ವೇಳೆ ಕ್ರಮ ಜರುಗಿಸದಿದ್ದರೆ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗುವುದು ಎಂದು ಹೈಕೋರ್ಟ್‌ ನ್ಯಾಯಮೂರ್ತಿ, ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯಾಧ್ಯಕ್ಷರಾದ ಬಿ. ವೀರಪ್ಪ ತಿಳಿಸಿದರು.

Advertisement

ಗುರುವಾರ ಕಿಮ್ಸ್‌ ಆಸ್ಪತ್ರೆಗೆ ಅನಿರೀಕ್ಷಿತ ಭೇಟಿ ನೀಡಿ ರೋಗಿಗಳಿಗೆ ದೊರೆಯುತ್ತಿರುವ ಚಿಕಿತ್ಸೆ, ಔಷಧೋಪಚಾರ ಹಾಗೂ ಮೂಲ ಸೌಲಭ್ಯಗಳ ಕುರಿತು ಪರಿಶೀಲಿಸಿದರು.

ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಹೆಲ್ಮೆಟ್‌ ಬಳಕೆ, ಸಂಚಾರ ನಿಯಮಗಳು ಸಮರ್ಪಕವಾಗಿ ಪಾಲನೆಯಾಗದಿರುವುದನ್ನು ಗಮನಿಸಲಾಗಿದೆ. ಇದರಿಂದ ರಸ್ತೆ ಅಪಘಾತಗಳ ಪ್ರಕರಣಗಳು ಹೆಚ್ಚು ಸಂಭವಿಸುತ್ತಿವೆ. ಸಾರ್ವಜನಿಕರು ಚಾಲನಾ ಪರವಾನಗಿ, ವಾಹನ ವಿಮೆ ಮತ್ತಿತರ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಈ ಕುರಿತು ಇಲ್ಲಿನ ಜಿಲ್ಲಾಧಿಕಾರಿಗಳು ಹಾಗೂ ನಗರ ಪೊಲೀಸ್‌ ಆಯುಕ್ತರೊಂದಿಗೆ ಮಾತನಾಡಿ ನಿರ್ದೇಶನ ನೀಡಲಾಗುವುದು. ಸರ್ಕಾರ ಸಾರ್ವಜನಿಕರಿಗಾಗಿ ಬೃಹತ್‌ ಆಸ್ಪತ್ರೆ ನಿರ್ಮಿಸಿ ಉಚಿತ ವೈದ್ಯಕೀಯ ಸೌಲಭ್ಯಗಳನ್ನು ನೀಡುತ್ತಿದೆ. ಜನರು ಕೂಡ ಈ ಬಗ್ಗೆ ಕಾಳಜಿ ವಹಿಸಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಕಾಪಾಡಿಕೊಳ್ಳಬೇಕು ಎಂದರು.

ಶಸ್ತ್ರಚಿಕಿತ್ಸೆ ನಂತರದ ಜನರಲ್‌ ವಾರ್ಡ್‌, ಹೃದ್ರೋಗ ಚಿಕಿತ್ಸೆ, ತಾಯಿ ಮತ್ತು ಮಕ್ಕಳ ಚಿಕಿತ್ಸೆ ವಿಭಾಗಗಳಿಗೆ ಭೇಟಿ ನೀಡಿ ರೋಗಿಗಳೊಂದಿಗೆ ಮಾತನಾಡಿ ಯೋಗಕ್ಷೇಮ ವಿಚಾರಿಸಿದರು. ಚಿಕಿತ್ಸೆ ಹಾಗೂ ದೊರೆಯುತ್ತಿರುವ ಸೌಲಭ್ಯಗಳ ಕುರಿತು ಮಾಹಿತಿ ಪಡೆದರು. ಆಸ್ಪತ್ರೆಯಲ್ಲಿ ರೋಗಿಗಳ ದಾಖಲೆ ಸರಿಯಾಗಿ ನಿರ್ವಹಿಸಬೇಕು. ರೋಗಿಯೊಂದಿಗೆ ಒಬ್ಬರು ಆರೈಕೆದಾರರು ಮಾತ್ರ ಇರಬೇಕು. ಹೆಚ್ಚಿನ ಜನರು ಬಂದು ಆಸ್ಪತ್ರೆ ವಾತಾವರಣದಲ್ಲಿ ಗದ್ದಲ ಉಂಟು ಮಾಡಬಾರದು. ರೋಗಿಗಳ ಆರೈಕೆದಾರರಿಗೂ ವಿಶ್ರಾಂತಿ ಪಡೆಯಲು ಸೌಕರ್ಯ ಕಲ್ಪಿಸಬೇಕು ಎಂದು ಸೂಚಿಸಿದರು.

ಆಸ್ಪತ್ರೆಯ ಶೌಚಾಲಯವನ್ನು ನೋಡಿ ನೈರ್ಮಲ್ಯ ಕಾಪಾಡುವಂತೆ ನಿರ್ದೇಶನ ನೀಡಿದರು. ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶಶಿಧರ ಶೆಟ್ಟಿ, ಸಾರ್ವಜನಿಕ ಸಂಪರ್ಕಾಧಿಕಾರಿ ವಿಘ್ನೇಶಕುಮಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಂ. ಪುಷ್ಪಲತಾ, ಕಿಮ್ಸ್‌ ನಿರ್ದೇಶಕ ಡಾ| ರಾಮಲಿಂಗಪ್ಪ ಅಂಟರತಾನಿ, ಸ್ಥಾನಿಕ ವೈದ್ಯಾಧಿಕಾರಿ ಡಾ|ಸಿದ್ದೇಶ್ವರ ಕಟಕೋಳ, ಉಪ ವೈದ್ಯಕೀಯ ಅಧೀಕ್ಷಕ ಡಾ| ರಾಜಶೇಖರ ದ್ಯಾಬೇರಿ, ಸಮುದಾಯ ಆರೋಗ್ಯ ಅಧಿಕಾರಿ ಡಾ|ಲಕ್ಷ್ಮೀಕಾಂತ ಲೋಕರೆ ಮತ್ತಿತರರಿದ್ದರು.

Advertisement

ರೋಗಿಗಳಿಗೆ ಆತ್ಮಸ್ಥೈರ್ಯ ತುಂಬಿದ ನ್ಯಾಯಮೂರ್ತಿಗಳು:

ಶಿಗ್ಗಾವಿ ತಾಲೂಕು ಬನ್ನೂರು ಗ್ರಾಮದ ಐಟಿಐ ವಿದ್ಯಾರ್ಥಿ ಬಸನಗೌಡ ಪೊಲೀಸ್‌ಗೌಡ್ರ ಚಕ್ಕಡಿ ಸ್ಪರ್ಧೆ ನೋಡಲು ಹೋದಾಗ ಬಿದ್ದು ಬಲಕೈ ಕಳೆದುಕೊಂಡಿರುವುದನ್ನು ಕಂಡು ಮರುಗಿದ ನ್ಯಾಯಮೂರ್ತಿಗಳು, ವಿದ್ಯಾರ್ಥಿಯ ಕಣ್ಣೀರೊರೆಸಿ ವಿಕಲಚೇತನರು ಅನೇಕ ರಂಗಗಳಲ್ಲಿ ಸಾಧನೆ ಮಾಡಿದ್ದಾರೆ. ಅವರನ್ನು ಆದರ್ಶವಾಗಿಟ್ಟುಕೊಂಡು ಸಾಧನೆ ಮಾಡಬೇಕು. ಎದೆಗುಂದಬಾರದು ಎಂದು ಆತ್ಮಸ್ಥೈರ್ಯ ತುಂಬಿದರು.

ಕಲಘಟಗಿ ತಾಲೂಕು ಪರಸಾಪುರದ ಮೌಲಾಲಿ, ಅದರಗುಂಚಿಯ ಪರಶುರಾಮ, ಬು.ಅರಳಿಕಟ್ಟಿ ಗ್ರಾಮದ ವೃದ್ಧ ದೊಡ್ಡಬಸಪ್ಪ ಕುಂಬಾರ, ಹಾವೇರಿ ಜಿಲ್ಲೆ ದೇವಗಿರಿಯ ಶಂಕರಪ್ಪ ಕಲ್ಲೆದೇವರ, ಕೊಪ್ಪಳ ಜಿಲ್ಲೆ ಹೊನ್ನುಣಸಿ ಗ್ರಾಮದ ಶೇಖರಪ್ಪ ರಡ್ಡೇರ, ಹಳೆ ಹುಬ್ಬಳ್ಳಿಯ ಸರೋಜಾ ಗುನಗಾ ಮತ್ತಿತರ ರೋಗಿಗಳೊಂದಿಗೆ ಮಾತನಾಡಿ ಅವರ ಕೌಟುಂಬಿಕ, ಆರ್ಥಿಕ ಸ್ಥಿತಿಗಳ ಕುರಿತು ಮಾಹಿತಿ ಪಡೆದರು. ಸರ್ಕಾರದಿಂದ ಉಚಿತ ಪಡಿತರ, ವೃದ್ಧಾಪ್ಯವೇತನ ಮುಂತಾದ ಸಾಮಾಜಿಕ ಭದ್ರತಾ ಯೋಜನೆಗಳ ಸೌಲಭ್ಯಗಳು ದೊರೆಯುತ್ತಿರುವ ಬಗ್ಗೆ ಪ್ರಶ್ನಿಸಿದರು. ಅಂತಹ ಜನರಿಗೆ ಅಗತ್ಯ ನೆರವು ನೀಡಲು ಸ್ಥಳೀಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಿಗೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next