ಧಾರವಾಡ : ಪ್ರಸಕ್ತ ಮುಂಗಾರು ಹಂಗಾಮಿಗೆ ರಾಜ್ಯ ಸರಕಾರ ರೈತ ಸಂಪರ್ಕ ಕೇಂದ್ರಗಳ ಮೂಲಕ ನೀಡುವ ರಿಯಾಯಿತಿ ದರದ ಬಿತ್ತನೆ ಬೀಜಗಳ ದರ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಕಳೆದ ವರ್ಷ ಬರದಿಂದ ಕಂಗೆಟ್ಟಿರುವ ರೈತರಿಗೆ ಈ ಬಾರಿ ಬೆಲೆ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಬಿಜೆಪಿ ಮುಖಂಡ ಹಾಗೂ ರೈತ ಹೋರಾಟಗಾರ ಪಿ.ಎಚ್. ನೀರಲಕೇರಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅಚರು, ರಾಜ್ಯ ಸರ್ಕಾರ ರೈತರಿಗೆ ದಿಢೀರ್ ಆಘಾತ ನೀಡಿದ್ದು, ಮುಂಗಾರು ಬಿತ್ತನೆ ಬೀಜಗಳ ದರವನ್ನು ಶೇ 60 ರಿಂದ ಶೇ 70 ರಷ್ಟು ಏರಿಕೆ ಮಾಡಿದೆ. ಉತ್ತರ ಕರ್ನಾಟಕದ ಪ್ರಮುಖ ಬೆಳೆಗಳಾದ ತೊಗರಿ, ಹೆಸರು, ಮೆಕ್ಕೆಜೋಳ ಬಿತ್ತನೆ ಬೀಜಗಳ ದರ ಹೆಚ್ಚಳವಾಗಿದೆ. ಕಳೆದ ವರ್ಷ ಸಬ್ಸಿಡಿ ಹೊರತುಪಡಿಸಿ ಸಾಮಾನ್ಯ ವರ್ಗಕ್ಕೆ ಮೆಕ್ಕೆಜೋಳ (5KG ಪ್ಯಾಕೆಟ್) 501 ರೂ., SC, ST ವರ್ಗಕ್ಕೆ 438ರೂ. ಇತ್ತು. ಈ ಬಾರಿ 805 ರೂ. ಹಾಗೂ SC, ST ವರ್ಗಕ್ಕೆ 742 ರೂ. ನಿಗದಿ ಮಾಡಲಾಗಿದೆ. ಹೀಗಾಗಿ ರೈತರು ಸಾಲ ಮಾಡಬೇಕಾದ ಸ್ಥಿತಿ ಎದುರಾಗಿದೆ ಎಂದು ಅವರು ಹೇಳಿದ್ದಾರೆ.
ಕಳೆದ ವರ್ಷ ಮಳೆ ಇಲ್ಲದೇ ಬೆಳೆ ಬಂದಿಲ್ಲ. ರೈತರು ತೀರಾ ಸಂಕಷ್ಟದಲ್ಲಿದ್ದಾರೆ. ಸರಕಾರ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಉಚಿತವಾಗಿ ಬೀಜ ನೀಡಬೇಕಿತ್ತು. ಅದು ಬಿಟ್ಟು ಬೆಲೆ ಹೆಚ್ಚಿಸಿರುವುದು ರೈತರಿಗೆ ಬಲವಾದ ಹೊಡೆತ ಬಿದ್ದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷ ರೈತರು ಸಾಲ ಮಾಡಿ ಬೀಜ, ಗೊಬ್ಬರ ಖರೀದಿಸಿ ಬಿತ್ತನೆ ಮಾಡಿದ್ದರು. ಆದರೆ ಮಳೆ ಆಗದೇ ಬೆಳೆ ಬರದೇ ಇದ್ದರಿಂದ ಸಂಕಷ್ಟದಲ್ಲಿದ್ದಾರೆ. ಈಗ ಹೊಸದಾಗಿ ಬೀಜ ಮತ್ತು ಗೊಬ್ಬರಕ್ಕೆ ಮತ್ತೆ ಸಾಲ ಮಾಡಬೇಕು. ಬೆಲೆ ಹೆಚ್ಚಳ ಮಾಡಿರುವುದು ಮತ್ತೆ ಸಂಕಷ್ಟಕ್ಕೆ ನೂಕಿದಂತಾಗಿದೆ ಎಂದಿದ್ದಾರೆ.
ಭೀಕರ ಬರದಿಂದಾಗಿ ರೈತರು ಸಂಕಷ್ಟದಲ್ಲಿ ಇದ್ದಾರೆ. ಸರಕಾರ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಉಚಿತವಾಗಿ ಬೀಜ ನೀಡಬೇಕು. ಇಲ್ಲದಿದ್ದರೆ ಸಬ್ಸಿಡಿ ಹೆಚ್ಚಿಸಿ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಸರಕಾರಿ ನೌಕರ ಆತ್ಮಹತ್ಯೆ ಪ್ರಕರಣ: ಉನ್ನತ ಮಟ್ಟದ ತನಿಖೆ ನಡೆಸಲಿ… ಶಾಸಕ ಚನ್ನಬಸಪ್ಪ