Advertisement

ಲೈಸನ್ಸ್‌ ಪಡೆಯುವವರ ಸಂಖ್ಯೆ ಹೆಚ್ಚಳ

12:31 AM Sep 23, 2019 | Team Udayavani |

ಉಡುಪಿ: ಕೇಂದ್ರ ಸರಕಾರ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ದಂಡವನ್ನು ಪರಿಷ್ಕೃತ ಗೊಳಿಸು ತ್ತಿದ್ದಂತೆ ವಾಹನ ಚಾಲನೆ ಪರವಾನಿಗೆ ಪಡೆಯುವವರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ.

Advertisement

ಆರ್‌ಟಿಒ ಕಚೇರಿಯಲ್ಲಿ ದಿನನಿತ್ಯ ಜನಜಂಗುಳಿ ಕಂಡುಬರುತ್ತಿದ್ದು, ಮಧ್ಯವರ್ತಿಗಳು ಯಾರು- ಕಚೇರಿ ಸಿಬಂದಿ ಯಾರು ಎಂಬ ಗೊಂದಲ ಉಂಟಾಗುತ್ತಿದೆ.
ಈ ವರ್ಷದ ಜೂನ್‌ ತಿಂಗಳಲ್ಲಿ 2,177 ಮಂದಿ ಡಿಎಲ್‌ ಪಡೆದುಕೊಂಡಿದ್ದಾರೆ. ಜುಲೈಯಲ್ಲಿ 2,356, ಆಗಸ್ಟ್‌ನಲ್ಲಿ 2,494 ಮಂದಿ ಡಿಎಲ್‌ ಪಡೆದುಕೊಂಡಿದ್ದಾರೆ.

ಬ್ರೋಕರ್‌ ಹಾವಳಿ ತಪ್ಪಿಸಿ
ಚಾಲನ ಪರವಾನಿಗೆ ಸಹಿತ ವಾಹನಗಳ ನೋಂದಣಿ, ನವೀಕರಣದ ಶೀಘ್ರ ಪ್ರಕ್ರಿಯೆಗಾಗಿ ಬಹುತೇಕ ಮಂದಿ ಬ್ರೋಕರ್‌ಗಳನ್ನು ಆಶ್ರಯಿಸುತ್ತಿದ್ದಾರೆ. ಆರ್‌ಟಿಒ ಕಚೇರಿಯಲ್ಲೂ ಬ್ರೋಕರ್‌ಗಳು ಯಾರು, ಸಿಬಂದಿ ಯಾರು ಎಂಬ ಬಗ್ಗೆ ಜನರಲ್ಲಿ ಗೊಂದಲ ಉಂಟಾಗುತ್ತಿದೆ. ಲೈಸನ್ಸ್‌ ಮಾಡಿಸಬೇಕಿತ್ತು ಎಂದು ಪಕ್ಕದವರಲ್ಲಿ ಕೇಳಿದರೆ ಮೊದಲು ಬ್ರೋಕರ್‌ಗಳತ್ತ ಕೈತೋರಿಸುತ್ತಾರೆ.

ಗಮನಕ್ಕೆ ತನ್ನಿ
ಈ ಬಗ್ಗೆ ಆರ್‌ಟಿಒ ಅಧಿಕಾರಿಗಳಲ್ಲಿ ಕೇಳಿದರೆ, ಜನರು ಬ್ರೋಕರ್‌ಗಳ ಯಾವುದೇ ಆಶ್ವಾಸನೆಗಳಿಗೆ ಕಿವಿಗೂಡದೆ ಕಚೇರಿ ಯಲ್ಲೇ ಕೆಲಸ ಕಾರ್ಯ ಗಳನ್ನು ಮಾಡ ಬೇಕು. ಶೀಘ್ರ ಸೇವೆ ನೀಡುವ ಬ್ರೋಕರ್‌ಗಳ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಬಹುದು. ಆನ್‌ಲೈನ್‌ ಮೂಲಕವೂ ಅರ್ಜಿ ಸಲ್ಲಿಕೆ ಮಾಡಬಹುದು. ಇದಕ್ಕಾಗಿ ಫೋಟೋ, ಸಹಿ, ದಾಖಲಾತಿ ಸಲ್ಲಿಕೆಯ ಬಳಿಕ ಶುಲ್ಕವನ್ನೂ ಆನ್‌ಲೈನ್‌ನಲ್ಲೇ ಪಾವತಿ ಮಾಡಲು ಅವಕಾಶ ಇದೆ ಎನ್ನುತ್ತಾರೆ ಆರ್‌ಟಿಒ ಅಧಿಕಾರಿ ರಾಮಕೃಷ್ಣ.

ಚಾಲನ ಪರವಾನಿಗೆ
ರದ್ದುಗೊಂಡರೆ ಪತ್ತೆ ಪರೀಕ್ಷೆ
ಹೊಸ ಆದೇಶದ ಪ್ರಕಾರ ಚಾಲನ ಪರವಾನಿಗೆ ಪುನರ್‌ ನವೀಕರಣಕ್ಕೆ ಒಂದು ವರ್ಷದವರೆಗೂ ಅವಕಾಶ ಇದೆ. ಈ ಹಿಂದೆ ಒಂದು ತಿಂಗಳೊಳಗೆ ಮಾಡಬೇಕಿತ್ತು. ಆದರೆ ಮುಂದಿನ ವರ್ಷ ಪರವಾನಿಗೆ ರದ್ದುಗೊಳ್ಳುವುದೆಂದು ತಿಳಿದಿದ್ದರೆ ಈಗಿಂದಲೇ ನವೀಕರಣಕ್ಕೆ ಅರ್ಜಿ ಸಲ್ಲಿಸಬಹುದು.

Advertisement

ಲೈಸನ್ಸ್‌ ಅವಧಿ ಎಷ್ಟು?
ಹೊಸ ಆದೇಶದ ಪ್ರಕಾರ 30 ವರ್ಷದೊಳಗಿನವರು ಚಾಲನ ಪರವಾನಿಗೆ ಪಡೆಯಲು ಬಯಸಿದರೆ 40 ವರ್ಷಗಳ ಅವಧಿ ಇರುತ್ತದೆ. 30ರಿಂದ 50 ವರ್ಷದವರ ಪರವಾನಿಗೆ ಅವಧಿ 10 ವರ್ಷ. 50ರಿಂದ 55 ವರ್ಷದವರು ಪರವಾನಿಗೆ ಬಯಸಿದರೆ ಅದರ ಅವಧಿ ಅವರ 60 ವರ್ಷಗಳವರೆಗೆ ಮಾತ್ರ. ಮತ್ತೆ ಪ್ರತೀ 5 ವರ್ಷಕ್ಕೊಮ್ಮೆ ನವೀಕರಣ ಮಾಡಬೇಕಾಗುತ್ತದೆ.

ಮಾಲಿನ್ಯ ತಪಾಸಣೆಗೂ
ಅಧಿಕ ಬೇಡಿಕೆ
ಲೈಸನ್ಸ್‌ ಜತೆಗೆ ಎಮಿಶನ್‌ ಟೆಸ್ಟ್‌ಗೂ ಬೇಡಿಕೆ ಹೆಚ್ಚಿದೆ. ವಿವಿಧ ಮಾಲಿನ್ಯ ತಪಾಸಣೆ ಕೇಂದ್ರಗಳಲ್ಲಿ ಸರತಿ ಸಾಲು ಕಂಡುಬಂದದ್ದೂ ಇದೆ. ಇದರ ಜತೆಗೆ ಹೆಲ್ಮೆಟ್‌ ಕೊಳ್ಳುವವರು, ಸಾರಿಗೆ ನಿಯಮಗಳಲ್ಲಿ ಸೂಚಿಸಿದ ಇತರ ಅಂಶಗಳತ್ತ ನಿಖರವಾಗಿ ಗಮನ ಹರಿಸುವ ಚಾಲಕರೂ ಹೆಚ್ಚಿದ್ದಾರೆ. ವಿಮೆ ನವೀಕರಣದತ್ತ ಕಟ್ಟುನಿಟ್ಟಾಗಿ ವಾಹನ ಮಾಲಕರು, ಚಾಲಕರು ಗಮನ ಹರಿಸುತ್ತಿದ್ದಾರೆ.

ಮಾಹಿತಿ ನೀಡಿ
ಕೇಂದ್ರ ಸರಕಾರ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ದಂಡ ಹೆಚ್ಚಳ ಮಾಡಿದ ಅನಂತರ ಚಾಲನಾ ಪರವಾನಿಗೆ ಪಡೆಯುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಯಾವುದೇ ಪರವಾನಿಗೆ ಅಥವಾ ನವೀಕರಣಗಳಿಗೆ ಸಂಬಂಧ ಪಟ್ಟ ವಿಚಾರಗಳನ್ನು ಆರ್‌ಟಿಒ ಸಿಬಂದಿಗಳಿಂದಲೇ ಪಡೆದು ಕೊಳ್ಳುವುದು ಉತ್ತಮ. ಹೆಚ್ಚುವರಿ ಹಣ ವಸೂಲಿ ಮಾಡುವುದು ಕಂಡುಬಂದರೆ ಅಧಿಕಾರಿಗಳ ಗಮನಕ್ಕೆ ತರತಕ್ಕದ್ದು. ಈ ಮೂಲಕ ಬ್ರೋಕರ್‌ಗಳ ಹಾವಳಿಗೆ ಕಡಿವಾಣ ಹಾಕುವ ಕೆಲಸ ಆಗಬೇಕು.
-ರಾಮಕೃಷ್ಣ, ಪ್ರಾದೇಶಿಕ ಸಾರಿಗೆ ಅಧಿಕಾರಿ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next