Advertisement

ಬಡವರ ವಸತಿಗೆ ಸಬ್ಸಿಡಿ ಹೆಚ್ಚಳ

07:40 PM Jan 04, 2023 | Team Udayavani |

ಬೆಂಗಳೂರು: ಬಡತನರೇಖೆಗಿಂತ ಕೆಳಗಿನ ಕುಟುಂಬಗಳಿಗೆ ಸೂರು ಕಲ್ಪಿಸುವ ಬಸವ, ಅಂಬೇಡ್ಕರ್‌ ಸೇರಿ ರಾಜ್ಯದಲ್ಲಿ ಜಾರಿಯಲ್ಲಿರುವ ವಸತಿ ಯೋಜನೆಗಳಿಗೆ ನೀಡುವ ಸಹಾಯಧನದ ಮೊತ್ತ ಹೆಚ್ಚಳ ಮಾಡುವ ಮಹತ್ವದ ತೀರ್ಮಾನಕ್ಕೆ ಸರ್ಕಾರ ಮುಂದಾಗಿದೆ.

Advertisement

ವಸತಿ ಯೋಜನೆಗಳ ಫ‌ಲಾನುಭವಿಗಳಿಗೆ ಗ್ರಾಮೀಣ ಭಾಗದಲ್ಲಿ ನೀಡುತ್ತಿದ್ದ ಸಹಾಯಧನ ಮೊತ್ತವನ್ನು 1.20 ಲಕ್ಷ ರೂ.ನಿಂದ 3 ಲಕ್ಷ ರೂ.ಗೆ ಹಾಗೂ ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ನೀಡುತ್ತಿದ್ದ 2.70 ಲಕ್ಷ ರೂ.ನಿಂದ 4 ಲಕ್ಷ ರೂ.ಗೆ ಹೆಚ್ಚಿಸಲು ತೀರ್ಮಾನಿಸಲಾಗಿದೆ.

ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ವಸತಿ ಸಚಿವ ವಿ.ಸೋಮಣ್ಣ, ಸಬ್ಸಿಡಿ ಮೊತ್ತ ಹೆಚ್ಚಳ ಮಾಡುವುದರಿಂದ ಫ‌ಲಾನುಭವಿಗಳ ಮೇಲಿನ ಹೊರೆ ಕಡಿಮೆಯಾಗಲಿದ್ದು, ಸುಲಭವಾಗಿ ಮನೆ ಕಟ್ಟಿಕೊಳ್ಳಲು ನೆರವಾಗಲಿದೆ ಎಂದು ಹೇಳಿದರು.

ಬಡವರು ಮತ್ತು ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲ ಮಾಡಿಕೊಡುವ ಹಾಗೂ ಅವರನ್ನು ಸಾಲದ ಹೊರೆಯಿಂದ ಮುಕ್ತ ಮಾಡಲು ಸಹಾಯಧನವನ್ನು ಹೆಚ್ಚಳ ಮಾಡಲು ನಿರ್ಧರಿಸಿದ್ದೇವೆ. ವಸತಿ ಇಲಾಖೆ ಕೈಗೊಂಡಿರುವ ಈ ನಿರ್ಧಾರದ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್‌ನಲ್ಲಿ ಘೋಷಣೆ ಮಾಡಲಿದ್ದಾರೆ ಎಂದು ತಿಳಿಸಿದರು.

ಈ ನಿರ್ಧಾರದಿಂದ ಬಡವರು ಅತ್ಯಂತ ಕಡಿಮೆ ಬೆಲೆಯಲ್ಲಿ 4 ರಿಂದ 5 ಲಕ್ಷ ರೂ.  ವೆಚ್ಚದಲ್ಲಿ ಮನೆಗಳನ್ನು ನಿರ್ಮಾಣ ಮಾಡಿಕೊಂಡರೆ ಸರ್ಕಾರದ ಸಬ್ಸಿಡಿ ದೊರೆತು ಬಡವರು ಸಾಲದ ಹೊರೆಯಿಂದ ದೂರ ಉಳಿದಂತಾಗುತ್ತದೆ ಎಂದು ಹೇಳಿದರು.

Advertisement

ಕೇಂದ್ರ ಸರ್ಕಾರ ಎಲ್ಲಾ ವಸತಿ ಯೋಜನೆಗಳಿಗೂ ಒಂದೇ ಮಾದರಿಯಲ್ಲಿ ಸಬ್ಸಿಡಿ ನೀಡುತ್ತದೆ. ಅದೇ ಮಾದರಿಯಲ್ಲಿ ರಾಜ್ಯವು ಜಾರಿಗೆ ತರುತ್ತಿರುವುದರಿಂದ ತಾರತಮ್ಯ ನಿವಾರಣೆಯಾಗಲಿದೆ ಎಂದರು. ನಗರ ಪಟ್ಟಣಗಳಲ್ಲಿ ವಾಸಿಸುವ ಕೊಳಚೆ ನಿವಾಸಿಗಳಿಗೆ ಮುಂದಿನ ಮಾರ್ಚ್‌ ಒಳಗಾಗಿ 83 ಸಾವಿರ ಮನೆಗಳನ್ನು ನಿರ್ಮಿಸಿಕೊಡುವುದಾಗಿ ಇದೇ ಸಂದರ್ಭದಲ್ಲಿ ತಿಳಿಸಿದರು.

ಕೊಳಚೆ ಪ್ರದೇಶದಲ್ಲಿ 1.86 ಲಕ್ಷ ಮನೆ

ಕೊಳಚೆ ಪ್ರದೇಶಗಳಲ್ಲಿ 1.86 ಲಕ್ಷ ಮನೆಗಳನ್ನು ನಿರ್ಮಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಈ ಯೋಜನೆಗೆ ಮೂರು ಸಾವಿರ ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಮನೆಗಳಿಗೆ ತಗಲುವ ವೆಚ್ಚದಲ್ಲಿ ಕೇಂದ್ರ ಸರ್ಕಾರ ಶೇ. 50ರಷ್ಟು ಪಾಲನ್ನು ನೀಡಿದರೆ, ಉಳಿದ ಪಾಲನ್ನು ರಾಜ್ಯ ಸರ್ಕಾರ ಮತ್ತು ಫಲಾನುಭವಿಗಳಿಂದ ಭರಿಸಲಾಗುವುದು ಎಂದು ಹೇಳಿದರು. ಎರಡು ಹಂತಗಳಲ್ಲಿ ಮನೆ ನಿರ್ಮಾಣದ ಕಾಮಗಾರಿ ಕೈಗೆತ್ತಿಕೊಂಡಿದ್ದು, ಮೊದಲ ಹಂತದಲ್ಲಿ 44165  ಮನೆಗಳು ಪೂರ್ಣಗೊಂಡಿವೆ. ಇದಕ್ಕಾಗಿ 2483 ಕೋಟಿ ರೂ. ವೆಚ್ಚವಾಗಿದ್ದು, ಇನ್ನು ಉಳಿದ ಮನೆಗಳನ್ನು ಹಂತ ಹಂತವಾಗಿ ನಿರ್ಮಿಸಿ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next