ರಾಯಚೂರು: ವಿಧಾನಸಭೆ ಚುನಾವಣೆ ಸಮೀಪಿಸುತ್ತಿ ದ್ದಂತೆ ಪರಿಶಿಷ್ಟ ಪಂಗಡ ಸಮಾಜದ ಮೀಸಲಾತಿ ಪ್ರಮಾಣವನ್ನು ಶೇ.3ರಿಂದ ಶೇ.7ಕ್ಕೆ ಹೆಚ್ಚಿಸುವ ಮೂಲಕ ಹಿಂದಿನ ಬಿಜೆಪಿ ಸರಕಾರ ಹೆಣೆದ ತಂತ್ರಗಾರಿಕೆ ಶೂನ್ಯ ಫಲಿತಾಂಶ ನೀಡಿದೆ. ಎಸ್‌ಟಿಗೆ ಮೀಸಲಾದ 15 ಕ್ಷೇತ್ರಗಳಲ್ಲಿ ಒಂದು ಕಡೆಯೂ ಬಿಜೆಪಿಗೆ ಗೆಲ್ಲಲಾಗಿಲ್ಲ.
15ರಲ್ಲಿ 14 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದರೆ, ಒಂದರಲ್ಲಿ ಜೆಡಿಎಸ್ ಗೆದ್ದಿದೆ. ಮೀಸಲಾತಿ ಪ್ರಮಾಣ ಹೆಚ್ಚಿಸುವಂತೆ ಆಗ್ರಹಿಸಿ ಸಮಾಜದ ಗುರುಗಳಾದ ಪ್ರಸನ್ನಾನಂದಪುರಿ ಸ್ವಾಮೀಜಿ ಬೆಂಗಳೂರಿನಲ್ಲಿ ಸುದೀರ್ಘ ಹೋರಾಟ ನಡೆಸಿದ್ದರು. ಬಿಜೆಪಿಯಲ್ಲಿ ಪರಿಶಿಷ್ಟ ಜಾತಿಯ ಅನೇಕ ಶಾಸಕರಿದ್ದರೂ ಈ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಆದರೆ ಚುನಾವಣೆ ಸಮೀಪಿಸುತ್ತಿದ್ದಂತೆ ಮೀಸಲಾತಿ ಹೆಚ್ಚಳ ಮಾಡಿ ಆದೇಶ ಹೊರಡಿಸಲಾಯಿತು. ಈ ಆದೇಶ ಸರಕಾರದ ಕೊಡುಗೆಯೇನಲ್ಲ. ನಮ್ಮ ಸುದೀರ್ಘ ಹೋರಾಟಕ್ಕೆ ಸಿಕ್ಕ ಫಲ. ಅಲ್ಲದೇ ನಾವು ನಮ್ಮ ಹಕ್ಕು ಕೇಳಿದ್ದೇವೆ. ಸರಕಾರ ಈ ನಿರ್ಧಾರವನ್ನು ಹಿಂದೆಯೇ ಮಾಡಬಹುದಿತ್ತು ಎಂಬ ಅಭಿಪ್ರಾಯ ವ್ಯಕ್ತವಾಯಿತು.
2018ರ ಚುನಾವಣೆಗೂ ಮುನ್ನ ಲಿಂಗಸುಗೂರಿನಲ್ಲಿ ನಡೆದ ಎಸ್‌ಟಿ ಸಮಾವೇಶದಲ್ಲಿ ಬಿ.ಎಸ್.ಯಡಿಯೂರಪ್ಪ ನಮ್ಮ ಪಕ್ಷ ಅಧಿಕಾರಕ್ಕೆ ಬರು ತ್ತಿದ್ದಂತೆ ಮೀಸಲಾತಿ ಹೆಚ್ಚಿಸುವುದಾಗಿ ಭರವಸೆ ನೀಡಿದ್ದರು. ಅಲ್ಲದೇ ಎಸ್‌ಟಿ ಸಮಾಜಕ್ಕೆ ಡಿಸಿಎಂ ಹುದ್ದೆ ನೀಡುವ ಮಾತನ್ನಾಡಿದರು. ಆದರೆ ಸರಕಾರ ಅಧಿಕಾರಕ್ಕೆ ಬಂದು ವರ್ಷಗಳೇ ಕಳೆದರೂ ಬೇಡಿಕೆ ಈಡೇರಲಿಲ್ಲ. ಇದು ಎಸ್‌ಟಿ ಸಮಾಜವನ್ನು ಕೆಣಕ್ಕಿತ್ತು. ಸಮಾಜದ ಮುಖಂ ಡರು ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಅನೇಕ ಬಾರಿ ಎಚ್ಚರಿಕೆ ಕೊಟ್ಟಿದ್ದರು. ಸರಕಾರವೇನೋ ಮೀಸಲಾತಿ ಹೆಚ್ಚಿಸಿದರೂ ಎಸ್‌ಟಿ ಸಮಾಜ ಮಾತ್ರ ಬಿಜೆಪಿ ಜತೆಗೆ ಬಂದಿಲ್ಲ.
ಗೆದ್ದವರು ಯಾರ್ಯಾರು?: ರಾಜ್ಯದಲ್ಲಿ ಒಟ್ಟು 15 ಎಸ್‌ಟಿ ಮೀಸಲು ಕ್ಷೇತ್ರಗಳಿವೆ. ಈ ಬಾರಿ ಎಲ್ಲ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆದ್ದು ಬೀಗಿದೆ. ಅದರಲ್ಲೂ ಮಾಜಿ ಸಚಿವ ಬಿ.ಶ್ರೀರಾಮುಲು, ಕೆ.ಶಿವನಗೌಡ ನಾಯಕ, ರಾಜುಗೌಡರಂಥ ನಾಯಕರು ಕೂಡ ಭಾರೀ ಮತಗಳ ಅಂತರದಿಂದ ಸೋಲುಂಡಿದ್ದಾರೆ. ಎಸ್‌ಟಿ ಮೀಸಲು ಕ್ಷೇತ್ರಗಳಾದ ಬೆಳಗಾವಿ ಜಿಲ್ಲೆಯ ಯಮಕನ ಮರಡಿಯಲ್ಲಿ ಸತೀಶ್ ಜಾರಕಿಹೊಳಿ, ಮೈಸೂರು ಭಾಗದ ಎಚ್.ಡಿ.ಕೋಟೆಯಲ್ಲಿ ಅನಿಲ್ ಚಿಕ್ಕಮಾದು, ಸಿರಗುಪ್ಪ ದಲ್ಲಿ ಬಿ.ಎಂ.ನಾಗರಾಜ್, ಬಳ್ಳಾರಿ ಗ್ರಾಮೀಣದಲ್ಲಿ ನಾಗೇಂದ್ರ ಬಿ.ಎನ್., ಸಂಡೂರಿನಲ್ಲಿ ಈ.ತುಕಾರಾಂ, ಕೂಡ್ಲಿಗಿಯಲ್ಲಿ ಡಾ|ಎನ್.ಟಿ.ಶ್ರೀನಿವಾಸ, ಮೊಳಕಾಲ್ಮೂರು ಕ್ಷೇತ್ರದಲ್ಲಿ ಬಿಜೆಪಿಯಿಂದ ವಲಸೆ ಬಂದ ಎನ್.ಗೋಪಾಲಕೃಷ್ಣ ಕಾಂಗ್ರೆಸ್‌ನಿಂದ ಗೆದ್ದಿದ್ದಾರೆ. ಚಳ್ಳಕೆರೆಯಲ್ಲಿ ರಫುಮೂರ್ತಿ, ಜಗಳೂರಲ್ಲಿ ಎಂ.ದೇವೇಂದ್ರಪ್ಪ ಸುರಪುರದಲ್ಲಿ ರಾಜಾ ವೆಂಕಟಪ್ಪ ನಾಯಕ ಗೆದ್ದರೆ, ಕಂಪ್ಲಿಯಲ್ಲಿ ಜೆ.ಎನ್.ಗಣೇಶ ಗೆದ್ದಿದ್ದಾರೆ.
ರಾಯಚೂರು ಜಿಲ್ಲೆಯಲ್ಲೂ ನಾಲ್ಕು ಎಸ್‌ಟಿ ಮೀಸಲು ಕ್ಷೇತ್ರಗಳಿದ್ದು, ಮಾನ್ವಿಯಲ್ಲಿ ಹಂಪಯ್ಯ ನಾಯಕ, ಗ್ರಾಮೀಣ ಕ್ಷೇತ್ರದಲ್ಲಿ ದದ್ದಲ್ ಬಸನಗೌಡ, ಮಸ್ಕಿಯಲ್ಲಿ ಬಸನಗೌಡ ತುರ್ವಿ ಹಾಳ ಗೆದ್ದು ಬೀಗಿದರೆ, ದೇವದುರ್ಗ ಕ್ಷೇತ್ರದಲ್ಲಿ ಏಕೈಕ ಮಹಿಳಾ ಶಾಸಕಿಯಾಗಿ ಜೆಡಿಎಸ್‌ನ ಕರೆಮ್ಮ ನಾಯಕ ಆಯ್ಕೆಯಾಗಿದ್ದಾರೆ.
ಕೈ ಹಿಡಿಯದ ಸುದೀಪ್ ಪ್ರಚಾರ
ನಟ ಕಿಚ್ಚ ಸುದೀಪ್ ಈ ಬಾರಿ ಚುನಾವಣೆ ಪ್ರಚಾರಕ್ಕೆ ಆಗಮಿಸಿದ್ದು, ಬಹುತೇಕ ಎಸ್‌ಟಿ ಕ್ಷೇತ್ರಗಳಲ್ಲಿ ಸಂಚ ರಿಸಿ ಮತಯಾಚಿಸಿದರು. ಆದರೆ ಅವರ ಪ್ರಚಾರ ದಿಂದ ಅಭ್ಯರ್ಥಿಗಳಿಗೆ ಹೆಚ್ಚಿನ ಅನಕೂಲವಾಗಿಲ್ಲ. ಸುರಪುರ, ದೇವದುರ್ಗ, ಮಾನ್ವಿ ಕ್ಷೇತ್ರದಲ್ಲಿ ಕಿಚ್ಚನನ್ನು ನೋಡಲು ಜನಸಾಗರವೇ ಹರಿದು ಬಂದಿತ್ತು. ಜನರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು. ಕಿಚ್ಚನನ್ನು ನೋಡಲು ಬಂದವರು ಮತಗಳಾಗಿ ಪರಿವರ್ತನೆಯಾಗಲಿಲ್ಲ.
ಸಿದ್ಧಯ್ಯ ಸ್ವಾಮಿ ಕುಕನೂರು