ಬೆಂಗಳೂರು: ಎಸ್‌ಸಿ-ಎಸ್‌ಟಿ ಸಮುದಾಯಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಳ ಕಾಂಗ್ರೆಸ್‌ನ ಕೂಸು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಮೀಸಲಾತಿ ನೀಡುವ ವಿಚಾರವಾಗಿ ನಾಗಮೋಹನ್ ದಾಸ್ ಅವರ ಸಮಿತಿ ರಚನೆ ಮಾಡಿದ್ದೆವು. ಕಾಂಗ್ರೆಸ್ ಪಕ್ಷ ಕೂಡ ಈ ಸಮಿತಿ ವರದಿ ಜಾರಿಗೆ ಆಗ್ರಹಿಸಿತ್ತು. ಈ ಸಮುದಾಯ ದವರಿಗೆ ನ್ಯಾಯ ಒದಗಿಸಿ ಕೊಡಬೇಕು ಎಂಬುದು ಕಾಂಗ್ರೆಸ್ ಇಚ್ಛೆ, ನಡೆ ಹಾಗೂ ನಂಬಿಕೆ ಆಗಿತ್ತು ಎಂದರು.
ಕಾಂಗ್ರೆಸ್ ಪಕ್ಷವು ಮೀಸಲಾತಿ ಪ್ರಮಾಣ ಹೆಚ್ಚಿಸಲು ಸಮಿತಿ ರಚಿಸಿ, ಹೋರಾಟ ಮಾಡಿ ಈಗ ಈ ಮೀಸಲಾತಿ ನೀಡುವುದಕ್ಕೆ ಬೆಂಬಲ ವ್ಯಕ್ತಪಡಿಸಿದ್ದೇವೆ. ಬಿಜೆಪಿಯವರು ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಮೀಸಲಾತಿ ಹೆಚ್ಚಳ ಮಾಡುವುದಾಗಿ ಹೇಳಿದ್ದರು. ಆದರೆ ಮಾಡಲಿಲ್ಲ.
ಈಗ ಕೊನೆ ಗಳಿಗೆಯಲ್ಲಿ ಒತ್ತಡ ಹೆಚ್ಚಾದ ಕಾರಣ ಮಾಡಿದ್ದಾರೆ. ಅವರಿಗೆ ಪರಿಶಿಷ್ಟರ ಮೇಲೆ ನಂಬಿಕೆ ಇರಲಿಲ್ಲ. ಇದ್ದಿದ್ದರೆ ಇಷ್ಟು ದಿನ ಕಾಲಹರಣ ಮಾಡದೇ ಅಧಿಕಾರಕ್ಕೆ ಬಂದ ದಿನವೇ ಮಾಡುತ್ತಿದ್ದರು ಎಂದು ತಿಳಿಸಿದರು.