Advertisement
ಮದ್ರಾಸ್ ಐ ಪ್ರಕರಣಗಳು ಮಕ್ಕಳು ಹಾಗೂ ಯುವ ಜನರಲ್ಲಿ ಹಬ್ಬುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಅವಧಿಗೆ ಮುನ್ನವೇ ಕಾಣಿಸಿಕೊಂಡಿದ್ದು, ಪ್ರಸ್ತುತ ಕಣ್ಣಿನ ಆಸ್ಪತ್ರೆಗಳಿಗೆ ಬರುವ 10 ರೋಗಿಗಳಲ್ಲಿ 5 ರೋಗಿಗಳು ಮದ್ರಾಸ್ ಐಯಿಂದ ಬಳಲುತ್ತಿದ್ದಾರೆ. ವಯಸ್ಕರಿಗಿಂತ ಮಕ್ಕಳಲ್ಲಿ ಈ ರೋಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ.
ಕಣ್ಣು ವಿಪರೀತ ಕೆಂಪಾಗುವುದು, ದೃಷ್ಟಿ ಅಸ್ಪಷ್ಟವಾಗುವುದು, ವಿಪರೀತ ಜ್ವರ ಹಾಗೂ ಮೈ-ಕೈ ನೋವು ಮದ್ರಾಸ್ ಐಯ ಪ್ರಮುಖ ಲಕ್ಷಣ. ಈ ವೈರಾಣುವಿನಿಂದ ಕಣ್ಣಿನ ಕಾರ್ನಿಯಾ ಸೋಂಕಿಗೆ ತುತ್ತಾಗುವುದರ ಜತೆಗೆ ದೃಷ್ಟಿ ಸ್ವಲ್ಪ ಮಂಕಾಗಬಹುದು. ಕಾರಣವೇನು?
ಹವಾಮಾನ ವೈಪರೀತ್ಯ ಹಾಗೂ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮದ್ರಾಸ್ ಐ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿವೆ. ಸಾಮಾನ್ಯವಾಗಿ ಈ ಸೋಂಕು ಚಳಿಗಾಲದಲ್ಲಿ ಹೆಚ್ಚಾಗಿರುತ್ತದೆ. ಪ್ರಸ್ತುತ ಸುರಿಯುತ್ತಿರುವ ಮಳೆ ಹಾಗೂ ಮೋಡ ಕವಿದ ವಾತಾವರಣ ಈ ಸೋಂಕು ಹರಡಲು ಪೂರಕ ವಾತಾವರಣ ನಿರ್ಮಿಸಿದೆ. ಪರಿಸರದಲ್ಲಿ ತೇವಾಂಶ ಹೆಚ್ಚಿದಾಗ ಈ ವೈರಾಣುಗಳು ಕಣ್ಣಿನ ಮೇಲೆ ಪರಿಣಾಮ ಉಂಟು ಮಾಡುತ್ತವೆ. ಜತೆಗೆ ಜನರು ಸ್ವತ್ಛತೆಗೆ ಒತ್ತು ನೀಡದಿರುವುದು ಹಾಗೂ ಮುಂಜಾಗ್ರತ ಕ್ರಮಗಳ ಬಗ್ಗೆ ನಿರ್ಲಕ್ಷ್ಯ ಮದ್ರಾಸ್ ಐ ಸೋಂಕು ವ್ಯಾಪಕವಾಗಿ ಹರಡಲು ಕಾರಣ ಎಂದು ತಜ್ಞ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
Related Articles
ಈ ಸೋಂಕು ಬಹುಬೇಗ ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತದೆ. ಸೋಂಕುಪೀಡಿತ ವ್ಯಕ್ತಿ ಬಳಸಿದ ವಸ್ತುಗಳನ್ನು ಮತ್ತೂಬ್ಬರು ಬಳಸಬಾರದು. ರೋಗಿಗಳು ಕಣ್ಣುಗಳಿಂದ ಸೋರುವ ನೀರು, ಇತರ ಅಂಶಗಳನ್ನು ಶುಚಿಗೊಳಿಸಲು ಪೇಪರ್ ನ್ಯಾಪ್‌ಕಿನ್‌ಗಳನ್ನು ಮಾತ್ರ ಬಳಸಬೇಕು. ಅದನ್ನು ಮರು ಬಳಕೆ ಮಾಡಬಾರದು. ಆಗಾಗ ಕೈಗಳನ್ನು ತೊಳೆದುಕೊಳ್ಳಬೇಕು. ಸೋಂಕು ಪೀಡಿತರು ಶಾಲೆಗಳು, ಕಚೇರಿಗಳು ಅಥವಾ ಜನಸಂದಣಿ ಇರುವ ಪ್ರದೇಶಗಳಿಗೆ ಹೋಗಬಾರದು.
Advertisement
ಮನೆ ಮದ್ದು ಬೇಡಕಾಂಜಂಕ್ಟಿವಿಟಿಸ್ ಎಂಬ ವೈರಾಣುವಿನಿಂದ ಉಂಟಾಗುವ ಮದ್ರಾಸ್ ಕಣ್ಣು ರೋಗಕ್ಕೆ ಮನೆಯಲ್ಲಿ ಸ್ವತಃ ಔಷಧ ಬಳಕೆ ಮಾಡಬಾರದು. ಕಣ್ಣಿನಲ್ಲಿ ಬಹಳ ಸಮಯದವರೆಗೆ ನೀರು ಸುರಿಯುತ್ತಿದ್ದರೆ ಹಾಗೂ ತುರಿಕೆ, ಅಸಹಜತೆ ಕಂಡುಬರುತ್ತಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಏನು ಮಾಡಬೇಕು?
*ಸ್ವತ್ಛ ನೀರಿನಿಂದ ಕಣ್ಣುಗಳನ್ನು ಶುಚಿಗೊಳಿಸಬೇಕು
* ಸೋಂಕು ಕಂಡುಬಂದ ತತ್‌ಕ್ಷಣ ವೈದ್ಯರಿಂದ ಚಿಕಿತ್ಸೆ ಪಡೆಯಬೇಕು
* ಸೋಂಕುಪೀಡಿತ ವ್ಯಕ್ತಿ ಪೌಷ್ಟಿಕ ಆಹಾರ ಸೇವಿಸಬೇಕು
* ಸೋಂಕುಪೀಡಿತ ವ್ಯಕ್ತಿ ಬಳಸಿದ ಬಟ್ಟೆ ಹಾಗೂ ವಸ್ತುಗಳನ್ನು ಸಂಸ್ಕರಿಸಿ ಬಳಸಬೇಕು. ಏನು ಮಾಡಬಾರದು?
*ಕೈಗಳಿಂದ ಪದೇ ಪದೆ ಕಣ್ಣುಗಳನ್ನು ಮುಟ್ಟಬಾರದು
* ಸ್ವಯಂ ಚಿಕಿತ್ಸೆ ವಿಧಾನಗಳನ್ನು ಅನುಸರಿಸಬಾರದು
* ಸೋಂಕುಪೀಡಿತರಿಂದ ಅಂತರ ಕಾಯ್ದುಕೊಳ್ಳಬೇಕು
* ಸೋಂಕುಪೀಡಿತ ವ್ಯಕ್ತಿ ಬಳಸಿದ ವಸ್ತುಗಳನ್ನು ಮುಟ್ಟಬಾರದು. ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ. ಮಧುಮೇಹ ಸೇರಿದಂತೆ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಅಲ್ಸರ್ ಉಂಟಾಗುವ ಅಥವಾ ಕಣ್ಣಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸಾಧ್ಯವಾದಷ್ಟು ಬೇರೆಯವರು ಬಳಸಿದ ವಸ್ತುಗಳನ್ನು ಬಳಸದೆ ಇರುವುದು ಉತ್ತಮ.
-ಡಾ| ರೋಹಿತ್ ಶೆಟ್ಟಿ, ಅಧ್ಯಕ್ಷ, ನಾರಾಯಾಣ ನೇತ್ರಾಲಯ