ಬೆಂಗಳೂರು: ಬಮೂಲ್‌ನ ಹಾಲು ಮಾರಾಟದಲ್ಲೀಗ ಹೆಚ್ಚಳವಾಗಿದೆ. ಖಾಸಗಿಯವರಿಗಿಂತಲೂ ಕಡಿಮೆ ದರದಲ್ಲಿ ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟ (ಕೆಎಂಎಫ್)ಉತ್ತಮ ಗುಣಮಟ್ಟದ ಹಾಲು ಪೂರೈಕೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಗ್ರಾಹಕರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.
ಈ ಹಿಂದೆ ರಾಜಧಾನಿಯಲ್ಲಿ ನಂದಿನಿ ಹಾಲು ಪ್ರತಿ ನಿತ್ಯ 9 ಲಕ್ಷ ಲೀಟರ್ ಮಾರಾಟವಾಗುತ್ತಿತ್ತು. ಆದರೆ, ಕೆಲವು ತಿಂಗಳಿಂದ ಪ್ರತಿ ದಿನ 10 ಲಕ್ಷ ಲೀಟರ್ ಹಾಲು ಮಾರಾಟವಾಗುತ್ತಿದೆ. ಜತೆಗೆ ನಂದಿನಿ ಹಾಲಿನ ಮೊಸರು ಬಳಕೆ ಮಾಡುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.
ಈ ಹಿಂದೆ ನಂದಿನಿ ಮೊಸರು ರಾಜಧಾನಿ ಬೆಂಗಳೂರಿನಲ್ಲಿ 1 ಲಕ್ಷ 20 ಸಾವಿರ ಲೀಟರ್‌ನಿಂದ 1ಲಕ್ಷ 30 ಸಾವಿರವರೆಗೂ ಮಾರಾಟವಾಗುತ್ತಿತ್ತು. ಆದರೆ, ಈಗ 1 ಲಕ್ಷದ 80 ಸಾವಿರ ಲೀಟರ್ ಮೊಸರು ಪ್ರತಿ ದಿನ ಗ್ರಾಹಕರು ಖರೀದಿಸುತ್ತಿದ್ದಾರೆ. ಖಾಸಗಿ ಹಾಲು ಸಂಸ್ಥೆಗಳು ಕೆಎಂಎಫ್ನ ದರಕ್ಕೆ ಪೈಪೋಟಿ ನೀಡಲು ಆಗುತ್ತಿಲ್ಲ. ಈ ಎಲ್ಲ ಕಾರಣಗಳಿಂದಾಗಿ ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಕೆಎಂಎಫ್ ಹಾಲಿನ ಉತ್ಪನ್ನಗಳನ್ನು ಖರೀದಿ ಮಾಡುತ್ತಿದ್ದಾರೆ. ಕರ್ನಾಟಕ ಹಾಲು ಮಾರಾಟ ಮಹಾ ಮಂಡಲ (ಕೆಎಂಎಫ್) ಪ್ರತಿ ಲೀಟರ್ ಹಾಲನ್ನು 42 ರೂ.ಗೆ ನೀಡುತ್ತದೆ. ಆದರೆ, ಖಾಸಗಿ ಸಂಸ್ಥೆಗಳು ಒಂದು ಲೀಟರ್ ಹಾಲಿಗೆ 52 ರೂ. ನಂತೆ ಗ್ರಾಹಕರಿಗೆ ಮಾರಾಟ ಮಾಡುತ್ತವೆ. ನಂದಿನಿ ಹಾಲು ಖರೀದಿಸಿದರೆ ಗ್ರಾಹಕರಿಗೆ 10 ರೂ. ಉಳಿತಾಯವಾಗಲಿದೆ ಎಂದು ಬಮೂಲ್‌ನ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಖಾಸಗಿ ಸಂಸ್ಥೆಗಳು ಹಾಲಿನ ಉತ್ಪನ್ನ ಮಾಡುತ್ತಿವೆ: ಕೇವಲ ಹಾಲು ಮಾರಾಟದಿಂದ ಯಾವುದೇ ಪ್ರಯೋಜನವಿಲ್ಲ. ಹಾಲಿನಿಂದ ವಿವಿಧ ಉತ್ಪನ್ನಗಳನ್ನು ಮಾಡಿ ಮಾರಾಟ ಮಾಡುವುದರಿಂದ ಹೆಚ್ಚಿನ ಲಾಭವಿದೆ. ಈ ಹಿನ್ನೆಲೆಯಲ್ಲಿ ಕೆಲ ಖಾಸಗಿ ಹಾಲು ಸಂಸ್ಥೆಗಳು ಅಧಿಕ ಪ್ರಮಾಣದಲ್ಲಿ ಹಾಲನ್ನು ಗ್ರಾಹಕರಿಗೆ ಮಾರಾಟ ಮಾಡದೇ, ಹೊಸ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತವೆ ಎಂದು ಬಮೂಲ್ ಅಧ್ಯಕ್ಷ ಎಚ್ .ಪಿ.ರಾಜಕುಮಾರ್ ಹೇಳಿದ್ದಾರೆ.
ಹಾಲು ಉತ್ಪಾದನೆಯಲ್ಲಿ ಹೆಚ್ಚಳವಾಗಿಲ್ಲ : ಬಮೂಲ್‌ನ ಹಾಲಿನ ಉತ್ಪಾದನೆಯಲ್ಲಿ ಹೆಚ್ಚಳವಾಗುತ್ತಿಲ್ಲ. ಕಳೆದ ವರ್ಷ ಈ ಸೀಜನ್‌ನಲ್ಲಿ 17 ಲಕ್ಷ ಲೀಟರ್ ಹಾಲಿ ಪ್ರತಿ ದಿನ ಪೂರೈಕೆ ಆಗುತ್ತಿತ್ತು. ಆದರೆ, ಈ ವರ್ಷ ಆ ವಾತಾವರಣವಿಲ್ಲ. ಬೆಂಗಳೂರು ಸಹಕಾರ ಹಾಲು ಒಕ್ಕೂಟ ವ್ಯಾಪ್ತಿಯಲ್ಲಿ ಪ್ರತಿ ದಿನ ಈಗ 15 ಲಕ್ಷ ಲೀಟರ್ ಹಾಲು ಪೂರೈಕೆ ಆಗುತ್ತಿದೆ. 15 ಲಕ್ಷ ಲೀಟರ್ ಗಡಿ ದಾಟುತ್ತಲೇ ಇಲ್ಲ ಎಂದು ಬಮೂಲ್‌ನ ಅಧಿಕಾರಿಗಳು ಮಾಹಿತಿ ನೀಡುತ್ತಾರೆ.
ಖಾಸಗಿ ಹಾಲಿನ ಸಂಸ್ಥೆಗಳು ಕೆಎಂಎಫ್ನೊಂದಿಗೆ ದರ ಪೈಪೋಟಿ ಮಾಡಲು ಸಾಧ್ಯವಿಲ್ಲ. ಖಾಸಗಿ ಸಂಸ್ಥೆಗಳ ಹಾಲಿನ ದರ ಹೆಚ್ಚಳದಿಂದ ಬಹುತೇಕ ಗ್ರಾಹಕರು ನಂದಿನಿ ಹಾಲಿನತ್ತ ಮುಖ ಮಾಡಿದ್ದಾರೆ. ಹೀಗಾಗಿ ಬಮೂಲ್‌ನ ಹಾಲು ಮಾರಾಟದಲ್ಲಿ ಹೆಚ್ಚಳವಾಗಿದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ದುಪ್ಪಟ್ಟಾಗುವ ನಿರೀಕ್ಷೆಯಿದೆ.
–ಎಚ್.ಪಿ.ರಾಜಕುಮಾರ್, ಬಮೂಲ್ ಅಧ್ಯಕ್ಷ .