Advertisement

ಉತ್ಪಾದನೆ ಹೆಚ್ಚಳ: ಮಾಂಸ, ತರಕಾರಿ ಅಗ್ಗ

11:15 PM Mar 13, 2020 | mahesh |

ಕುಂದಾಪುರ: ಉತ್ಪಾದನೆ ಹೆಚ್ಚಳ ಹಾಗೂ ಕೊರೊನಾ ಭೀತಿಯಿಂದಾಗಿ ಮಾರುಕಟ್ಟೆಯಲ್ಲಿ ಮಾಂಸ ಹಾಗೂ ತರಕಾರಿ ದರದಲ್ಲಿ ಭಾರೀ ಇಳಿಕೆಯಾಗಿದೆ. ಆರಂಭದಲ್ಲಿ ಕೊರೊನಾ ಭೀತಿಯಿಂದ ಕೋಳಿ ದರ ಇಳಿದಿದೆ ಎಂದೇ ನಂಬಲಾಗಿತ್ತು. ಆದರೆ ಮಾರುಕಟ್ಟೆ ಪರಿಣತರು ಅದೊಂದೇ ಕಾರಣ ಅಲ್ಲ; ಉತ್ಪಾದನೆ ಹೆಚ್ಚಳವೂ ದರ ಇಳಿಕೆಗೆ ಕಾರಣ ಎನ್ನುತ್ತಾರೆ. 22ರೂ.ಗೆ ಕೋಳಿ ಮಾಂಸ ದೊರೆಯುತ್ತಿದೆ.

Advertisement

ಸಾಕಾಣಿಕೆ ನಷ್ಟ
ಕೋಳಿ ಫಾರಂಗಳ ಸಂಖ್ಯೆಯಲ್ಲಿ ಏರಿಕೆಯಾಗಿದ್ದು ಫಾರಂ ಕೋಳಿ ಉತ್ಪಾದನೆ ಹೆಚ್ಚಾಗಿದೆ. ಆದರೆ ಸಮಾರಂಭಗಳ ಸಂಖ್ಯೆಯಲ್ಲಿ ಇಳಿಕೆಯಾಗಿದ್ದು ಬೇಡಿಕೆ ಕಡಿಮೆಯಾಗಿದೆ. ಆದರೆ ಇಟ್ಟುಕೊಳ್ಳುವಂತಿಲ್ಲ. ಆದ್ದರಿಂದ ಉತ್ಪಾದನೆಗಿಂತಲೂ ನಷ್ಟದಲ್ಲಿ ಕೋಳಿಗಳನ್ನು ಮಾರಾಟ ಮಾಡಲಾಗುತ್ತಿದೆ. ಕೋಳಿಗಳಿಗೆ ಆಹಾರ ಹಾಕಿ ನಷ್ಟ ಮಾಡಿಕೊಳ್ಳುವ ಬದಲು ಸಿಕ್ಕ ದರಕ್ಕೆ ಕೋಳಿಗಳನ್ನು ವಿತರಿಸುತ್ತಿದ್ದಾರೆ. ಕೋಳಿ ಫಾರ್ಮ್ಗಳು ಕೂಡ ಪೂರ್ತಿ ಖಾಲಿ ಆಗುತ್ತಿವೆ. ಕೋಳಿ ಫಾರಂ ಉದ್ಯಮ ಹಾಗೂ ಮಾರುಕಟ್ಟೆ ತಲ್ಲಣಗೊಂಡಿದೆ.

22 ರೂ.ಗೆ ಬಿಕರಿ
ತಾಲೂಕಿನ ಹಲವು ಮಾಂಸದ ಅಂಗಡಿಗಳಲ್ಲಿ ಕೆ.ಜಿ. ಧಾರಣೆ 22 ಹಾಗೂ 27 ರೂ.ಗಳಷ್ಟಾಗಿದೆ. ಕೆಲವೆಡೆ ಎರಡು ಕೆ.ಜಿ. ಮೇಲ್ಪಟ್ಟಿರುವ ಇಡೀ ಕೋಳಿಯನ್ನು 50 ರೂ.ಗಳಿಗೆ ಮಾರಾಟ ಮಾಡುತ್ತಿದ್ದಾರೆ. ಇನ್ನು ಕೆಲವರು 30 ರೂ.ಗೆ ಖರೀದಿಸಿ ಕೆಲವೆಡೆ 50 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಫಾರಂ ಮಾಲಿಕರಿಗೆ ಇದರಿಂದಾಗಿ 70 ರೂ.ಗಳಷ್ಟು ನಷ್ಟವಾಗುತ್ತಿದೆ. ಫಾರಂ ಮಾಡುವವರು ಇದರಿಂದಾಗಿ ಪೂರ್ಣ ನಷ್ಟ ಅನುಭವಿಸುತ್ತಿದ್ದಾರೆ. ಇಷ್ಟಲ್ಲದೇ ದೂರದ ಊರಿನಿಂದ ಕೋಳಿ ಬರುತ್ತಿದೆ. ಅಲ್ಲಿ ಇನ್ನಷ್ಟು ಅಗ್ಗದ ದರದಲ್ಲಿ ಕೋಳಿ ದೊರೆಯುತ್ತಿದೆ. ಪೂನಾ ಮಾರುಕಟ್ಟೆಯಲ್ಲಿ ಕೆಜಿಗೆ 6 ರೂ., ಹುಬ್ಬಳ್ಳಿ ಮಾರುಕಟ್ಟೆಯಲ್ಲಿ 8 ರೂ. ದರ ಇದೆ. ಮೂರು ವಾರಗಳ ಹಿಂದೆ ಕೆ.ಜಿ. ಮಾಂಸಕ್ಕೆ 160ರಿಂದ 190 ರೂ. ತನಕ ಇದ್ದ ಧಾರಣೆ ಈಗ 20 ರೂ. ಆಜೂಬಾಜಿನಲ್ಲಿದೆ. ಕೋಳಿ ಆಹಾರ ದರ ಪ್ರತಿ ಕೆಜಿಗೆ 100 ರೂ. ಗಡಿ ದಾಟಿದೆ. ಒಂದು ಕೆ.ಜಿ. ತೂಕದ ಕೋಳಿ ಸಾಕಾಣೆಗೆ 95 ರೂ. ಖರ್ಚು ತಗಲುತ್ತಿದೆ. ಬೆಲೆ ಇಲ್ಲದೆ ಕೋಳಿಗಳಿಗೆ ಆಹಾರ ಹಾಕುವುದು ಕಷ್ಟ. ಹಾಗಾಗಿ ಕೋಳಿ ಬೆಳೆಸಿ ನಷ್ಟ ಹೆಚ್ಚಿಸಿಕೊಳ್ಳುವುದಕ್ಕಿಂತ ಸಿಕ್ಕ ದರದಲ್ಲಿ ಕೋಳಿ ಫಾರ್ಮ್ನಿಂದ ಮಾರಾಟ ಆಗುತ್ತಿದೆ. ಆದರೆ ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆಯಾಗಿ ಸಮಾರಂಭಗಳಿಲ್ಲದೇ ಧಾರಣೆ ಇಲ್ಲದ ಕಾರಣ ವ್ಯಾಪಾರಿಗಳು ಖರೀದಿಗೆ ಮುಂದಾಗುತ್ತಿಲ್ಲ.

ತರಕಾರಿ ದರ
ತರಕಾರಿ ದರದಲ್ಲಿ ಭಾರೀ ಇಳಿಕೆಯಾಗಿದೆ. ಕಳೆದ 15 ದಿನಗಳಿಂದ ದರ ಸ್ಥಿರವಾಗಿದೆ. ಬೆಂಡೆ, ಬೀನ್ಸ್‌ ದರದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಇನ್ನೆರಡು ವಾರದಲ್ಲಿ ಇತರ ತರಕಾರಿ ದರದ ಸ್ಪಷ್ಟ ನಿರ್ಧಾರ ಸಿಗಲಿದೆ. ಚೆಂಪಿ, ಚಿಕ್ಕಮಗಳೂರು ಮೊದಲಾದೆಡೆ ಹೊಸ ಬೆಳೆ ಬೆಳೆಯುವವರು ಯಾವ ಬೆಳೆ ಬೆಳೆಯುವುದು ಎಂಬ ಎಣಿಕೆಯಲ್ಲಿಯೇ ಬಾಕಿಯಾಗಿದ್ದಾರೆ. ಒಮ್ಮೆಲೆ ಮಾರುಕಟ್ಟೆಗೆ ತರಕಾರಿ ಬಂದ ಕಾರಣ ಬೆಲೆ ಇಳಿಕೆಯಾಗಿದೆ. ಇನ್ನು ನೀರಿನ ಅಭಾವ ತಲೆದೋರಲಿದ್ದು ಈ ಸಂದರ್ಭ ಬೆಳೆಯುವ ತರಕಾರಿಗಳ ಪ್ರಮಾಣದಲ್ಲಿ ವ್ಯತ್ತಾಸವಾಗಲಿದೆ. ಆಗ ದರದಲ್ಲೂ ಏರುಪೇರಾಗಲಿದೆ. ಎಪ್ರಿಲ್‌ನಲ್ಲಿ ಶುಭ ಸಮಾರಂಭಗಳ ಸೀಸನ್‌ ಆರಂಭವಾಗುವಾಗ ದರ ಯಾವ ಪ್ರಮಾಣದಲ್ಲಿ ಇರಲಿದೆ ಎನ್ನುವ ಊಹೆ ಈಗ ಕಷ್ಟ ಎನ್ನುತ್ತಾರೆ ತರಕಾರಿ ಅಂಗಡಿಯವರು. 5ರಿಂದ 10 ರೂ.ವರೆಗೆ ಹೋಗಿದ್ದ ಲಿಂಬೆಹಣ್ಣಿನ ದರ ಈಗ 2 ರೂ.ಗೆ ಬಂದಿದೆ.

ಕೊರೊನಾ ಭೀತಿ
ಮಾರ್ಚ್‌ ಅಂತ್ಯದಲ್ಲಿ ಸಮಾರಂಭಗಳ ಸೀಸನ್‌ ಆರಂಭವಾಗುತ್ತದೆ. ಆದರೆ ಕೊರೊನಾ ಭೀತಿಯಿಂದಾಗಿ ಸಾಮೂಹಿಕ ಸಮಾರಂಭ ಮಾಡುವವರು ಹಿಂದೆ ಸರಿಯುತ್ತಿದ್ದಾರೆ. ಅಷ್ಟಲ್ಲದೇ ಕೋಳಿ ಮಾಂಸದಿಂದ ಕೊರೊನಾ ವೈರಸ್‌ ಹರಡುವ ವದಂತಿಯಿಂದ ಭೀತಿ ಹೊಂದಿದ್ದಾರೆ. ಅಸಲಿಗೆ ಕೋಳಿಮಾಂಸದಿಂದ ವೈರಸ್‌ ಹರಡುವ ಕುರಿತು ಯಾವುದೇ ಅಧಿಕೃತ ಪ್ರಕರಣಗಳು ನಡೆದಿಲ್ಲ. ಹಾಗಿದ್ದರೂ ಜನ ಕೋಳಿ ಮಾಂಸ ಉಪಯೋಗಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಇದರ ಜತೆಗೆ ಹಕ್ಕಿ ಜ್ವರದ ಭೀತಿಯೂ ಆವರಿಸಿದೆ.

Advertisement

ಉತ್ಪಾದನೆ ಹೆಚ್ಚಳ
ಕೊರೊನಾ ಭೀತಿಗಿಂತಲೂ ಉತ್ಪಾದನೆಯಲ್ಲಿ ಹೆಚ್ಚಳವಾಗಿರು ವುದೇ ದರ ಇಳಿಕೆಗೆ ಕಾರಣ. ಭಾರೀ ಪ್ರಮಾಣದಲ್ಲಿ ದರ ಇಳಿಕೆಯಾಗಿದ್ದು ಮಾರುಕಟ್ಟೆ ತಲ್ಲಣಗೊಂಡಿದೆ. ಉತ್ಪಾದಕರಿಗೂ ತೊಂದರೆಯಾಗಿದೆ.
-ಕಿರಣ್‌, ಕೋಳಿ ವ್ಯಾಪಾರಸ್ಥರು

Advertisement

Udayavani is now on Telegram. Click here to join our channel and stay updated with the latest news.

Next