Advertisement

ಹಸಿರು ಹೊದಿಕೆ ಪ್ರಮಾಣ ಹೆಚ್ಚಳ: ಅರಣ್ಯ ಇಲಾಖೆ

12:14 AM Jul 10, 2022 | Team Udayavani |

ಬೆಂಗಳೂರು: ರಾಜ್ಯದ ಒಟ್ಟಾರೆ ಭೂ ಪ್ರದೇಶದ ಪೈಕಿ ವೃಕ್ಷಾ ಕವಚದ ಪ್ರಮಾಣ ಶೇ.10ರಷ್ಟು ಕಡಿಮೆಯಿದ್ದು, ಹಸಿರು ಹೊದಿಕೆ ಪ್ರಮಾಣ ಹೆಚ್ಚಿಸಲು ಅರಣ್ಯ ಇಲಾಖೆ ಮುಂದಾಗಿದೆ.

Advertisement

ಈ ನಿಟ್ಟಿನಲ್ಲಿ ಪ್ರಸ್ತುತ ರಾಜ್ಯದ 127 ವಿಧಾನಸಭೆ ಕ್ಷೇತ್ರಗಳಲ್ಲಿ 160 ಟ್ರೀ ಪಾರ್ಕ್‌ ನಿರ್ಮಿಸಿದ್ದು, ವರ್ಷಾಂತ್ಯಕ್ಕೆ 224 ಕ್ಷೇತ್ರಗಳಲ್ಲಿ ಟ್ರೀ ಪಾರ್ಕ್‌ ನಿರ್ಮಿಸುವ ಗುರಿ ಹೊಂದಲಾಗಿದೆ.

ಜತೆಗೆ ಅರಣ್ಯ ಪ್ರದೇಶಗಳಷ್ಟೇ ಸಾರ್ವ ಜನಿಕ ಸಹಭಾಗಿತ್ವದಲ್ಲಿ ಅಲ್ಲದೆ ಸರಕಾರಿ ಜಾಗ, ಶಾಲಾ ಕಾಲೇಜು ಆವರಣ, ಸಂಘ-ಸಂಸ್ಥೆಗಳ ಆವರಣ ಹಾಗೂ ಬಹು ಮುಖ್ಯವಾಗಿ ರೈತರ ಜಮೀನುಗಳಲ್ಲಿ ಅರಣ್ಯ ಕೃಷಿಗೆ ಒತ್ತು ನೀಡಲು ವರ್ಷ ಇಡೀ ಕಾರ್ಯಕ್ರಮ ರೂಪಿಸಿದೆ.

ರಾಷ್ಟ್ರೀಯ ಅರಣ್ಯ ನೀತಿ ಪ್ರಕಾರ ರಾಜ್ಯದ ಒಟ್ಟಾರೆ ಭೂ ಪ್ರದೇಶದ ಶೇ.33 ರಷ್ಟು ಪ್ರದೇಶ ವೃಕ್ಷ ಹೊದಿಕೆಯಿಂದ ಕೂಡಿರಬೇಕಿದ್ದು, ಈಗ ತುಂಬಾ ಕಡಿಮೆ ಇರುವ ಕಾರಣ ಈ ಕ್ರಮಕ್ಕೆ ತೀರ್ಮಾನಿಸಲಾಗಿದೆ.

3.23 ಕೋಟಿ ಸಸಿ ನೆಡುವ ಗುರಿ
2022-23ನೇ ಸಾಲಿನಲ್ಲಿ 34,999 ಹೆಕ್ಟೇರ್‌ ಪ್ರದೇಶದಲ್ಲಿ ನೆಡುತೋಪು ನಿರ್ಮಿಸಲು ನಿರ್ಧರಿಸಲಾಗಿದ್ದು, ರೈತರು ಹಾಗೂ ಸಾರ್ವಜನಿಕರಿಗೆ ವಿತರಿಸಲು 3.23 ಕೋಟಿ ಸಸಿ ಬೆಳೆಸಿದ್ದು, ಇದನ್ನು ನೆಡುವ ಗುರಿ ಹೊಂದಲಾಗಿದೆ.

Advertisement

ರೈತರಿಗೆ ನರೇಗಾ ಯೋಜನೆಯಡಿ ಉಚಿತವಾಗಿ ಸಸಿ ವಿತರಿಸಲು ತೀರ್ಮಾನಿಸ ಲಾಗಿದ್ದು, ರೈತರಿಗೆ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ಗಿಡಕ್ಕೆ 125 ರೂ. ಪ್ರೋತ್ಸಾಹ ಧನ ಸಹ ನೀಡಲಾಗುತ್ತಿದೆ.

ಜನವರಿಯಿಂದ ಇದುವರೆಗೆ ಕೈಗೊಂಡಿರುವ ಕ್ರಮಗಳಿಂದಾಗಿ 154.51 ಚದರ ಕಿ.ಮೀ.ನಷ್ಟು ಹಸಿರು ಹೊದಿಕೆ ಹೆಚ್ಚಳಕ್ಕೆ ಪೂರಕವಾಗಿ ಗಿಡಗಳನ್ನು ನೆಡಲಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ಪ್ರಸಕ್ತ ವರ್ಷ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಬೀಜ ಬಿತ್ತನೆ ಅಭಿಯಾನದಡಿ ಒಂದು ತಿಂಗಳಲ್ಲಿ 269 ಸ್ಥಳೀಯ ಜಾತಿಯ 2.5 ಕೋಟಿ ಬೀಜಗಳನ್ನು ರಾಜ್ಯದಲ್ಲಿ ಬಿತ್ತನೆ ಮಾಡಲಾಗಿದೆ.
ಜುಲೈ ತಿಂಗಳಲ್ಲಿ ಎಲ್ಲ ವಿಧಾನಸಭೆ ಕ್ಷೇತ್ರಗಳಲ್ಲಿ ವನ ಮಹೋತ್ಸವ ಆಚರಣೆಗೂ ತೀರ್ಮಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿನಲ್ಲೂ ಟ್ರೀಪಾರ್ಕ್‌
ಈ ಮಧ್ಯೆ, ದೇಶದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ ಎಂಬ ಖ್ಯಾತಿಗೆ ಒಳಗಾದ ಬೆಂಗಳೂರಿನಲ್ಲಿ ಭಾರತೀಯ ಅರಣ್ಯ ಸಮೀಕ್ಷಾ ವರದಿಯಂತೆ ಅತಿ ದೊಡ್ಡ ಅರಣ್ಯ ಭೂ ಪ್ರದೇಶ ಹೊಂದಿದ್ದ ನಗರವಾಗಿದ್ದು 89 ಚದರ ಕಿ.ಮೀ. ಅರಣ್ಯದ ಮೂಲಕ ವೃಕ್ಷ ಹೊದಿಕೆ ಶೇ.6.81ರಷ್ಟಿದೆ. ಕಳವಳಕಾರಿ ಸಂಗತಿ ಎಂದರೆ, ಹತ್ತು ವರ್ಷಗಳಲ್ಲಿ ಐದು ಚದರ ಕಿ.ಮೀ.ನಷ್ಟು ಹಸಿರು ಹೊದಿಕೆ ಕಳೆದುಕೊಂಡಿದೆ. ಹೀಗಾಗಿ ಬೆಂಗಳೂರಿನಲ್ಲೂ ಅವಕಾಶ ಇರುವಲ್ಲಿ ಟ್ರೀ ಪಾರ್ಕ್‌ ಹಾಗೂ ಕಿರು ಅರಣ್ಯ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ ಎಂದು ಹೇಳಿದ್ದಾರೆ.

ರಾಜ್ಯದ ಒಟ್ಟಾರೆ ಭೌಗೋಳಿಕ ವಿಸ್ತೀರ್ಣದ ಶೇ.21.88
ರಷ್ಟು ಪ್ರದೇಶ ಅರಣ್ಯದಿಂದ ಕೂಡಿದ್ದು, ಭೂ ಪ್ರದೇಶದ ಶೇ.33 ರಷ್ಟು ವೃಕ್ಷ ಹೊದಿಕೆ ಕೂಡಿರಬೇಕಾಗಿದೆ. ಹೀಗಾಗಿ ಅರಣ್ಯ ಇಲಾಖೆ ಅಭಿಯಾನದ ಮಾದರಿಯಲ್ಲಿ ಟ್ರೀ ಪಾರ್ಕ್‌ ನಿರ್ಮಾಣ ಸೇರಿ ಹಲವು ಯೋಜನೆ ರೂಪಿಸಿದೆ. ವರ್ಷಾಂತ್ಯದೊಳಗೆ ಎಲ್ಲವನ್ನೂ ಪೂರ್ಣಗೊಳಿಸುವ ಗುರಿ ನೀಡಲಾಗಿದೆ.
-ಉಮೇಶ್‌ ಕತ್ತಿ, ಅರಣ್ಯ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next