ಸುಳ್ಯ: ಹೆಚ್ಚು ಹೆಚ್ಚು ಭಕ್ತರು ಆಗಮಿಸಿ ಪ್ರಾರ್ಥನೆ ಸಲ್ಲಿಸಿದರೆ ಶ್ರೀ ಕ್ಷೇತ್ರದ ಸಾನ್ನಿಧ್ಯ ವೃದ್ಧಿಯಾಗುತ್ತದೆ. ವರ್ಷದ ಹಿಂದೆ ಪ್ರಶಾಂತ ಪರಿಸರದಲ್ಲಿ ಪಯಸ್ವಿನಿ ನದಿ ತಟದಲ್ಲಿ ಸ್ಥಾಪಿತವಾಗಿರುವ ಶ್ರೀ ಗುರು ರಾಘವೇಂದ್ರ ಮಠ ಶೀಘ್ರಗತಿಯಲ್ಲಿ ಅಭಿವೃದ್ಧಿ ಹೊಂದುತ್ತಾ ಬರುತ್ತಿರುವುದು ಶ್ಲಾಘನೀಯ ಎಂದು ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಅಧ್ಯಕ್ಷ ಹಾಗೂ ಮಠ ನಿರ್ಮಾಣ ಸಮಿತಿ ಅಧ್ಯಕ್ಷ ಡಾ| ಕೆ.ವಿ. ಚಿದಾನಂದ ಅವರು ಹೇಳಿದರು.
ಇಲ್ಲಿನ ಶ್ರೀಗುರು ರಾಘವೇಂದ್ರ ಮಠದ ಪ್ರಥಮ ಪ್ರತಿಷ್ಠಾ ವಾರ್ಷಿಕ ಮಹೋತ್ಸವದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮುಖ್ಯ ಅತಿಥಿಗಳಾಗಿದ್ದ ಶ್ರೀ ವೆಂಕಟರಮಣ ದೇವ ಮಂದಿರದ ಆಡಳಿತ ಮೊಕ್ತೇಸರ ಕೆ. ಕೃಷ್ಣ ಕಾಮತ್ ಶುಭ ಹಾರೈಸಿದರು.
ಟ್ರಸ್ಟಿಗಳಾದ ಸುಮಾ ಸುಬ್ಬರಾವ್, ಸುಂದರ ಸರಳಾಯ, ಶ್ರೀಧರ ಭಾಗವತ ಅವರು ಮಾತನಾಡಿದರು. ಬೃಂದಾವನ ಸೇವಾ ಚಾರಿಟೆಬಲ್ ಟ್ರಸ್ಟ್‌ನ ಅಧ್ಯಕ್ಷ ಎಂ.ಎನ್. ಶ್ರೀಕೃಷ್ಣ ಸೋಮಯಾಗಿ ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ಕೋರಿದರು. ಟ್ರಸ್ಟಿ ಪ್ರಕಾಶ ಮೂಡಿತ್ತಾಯ ಪ್ರಸ್ತಾವಿಕ ಮಾತುಗಳನ್ನಾಡಿದರು. ಮಮತಾ ಮೂಡಿತ್ತಾಯ ನಿರೂಪಿಸಿದರು. ಟ್ರಸ್ಟ್ ಖಜಾಂಚಿ ನಾರಾಯಣ ಕೇಳತ್ತಾಯ ವಂದಿಸಿದರು.
ಶ್ರೀ ಗುರು ರಾಘವೇಂದ್ರ ಭಜನ ಮಂಡಳಿ, ಶ್ರೀ ಗುರುಗಣಪತಿ ಭಕ್ತ ಭಜನ ಮಂಡಳಿ ಧರ್ಮಾರಣ್ಯ ಮತ್ತು ಶಾಂತಿನಗರ ದೀಪಾಂಜಲಿ ಮಹಿಳಾ ಭಜನ ತಂಡದವರಿಂದ ಭಜನೆ ಸೇವೆ ನಡೆಯಿತು.
ಆಶ್ಲೇಷ ಬಲಿ ಪೂಜೆ, ರಂಗಪೂಜೆ, ಮಂತ್ರಾಕ್ಷತೆ, ಅನ್ನಸಂತರ್ಪಣೆ ನಡೆದ ಬಳಿಕ ಸುಳ್ಯದ ಶಿಕ್ಷಕರ ಯಕ್ಷಗಾನ ಒಕ್ಕೂಟದವರಿಂದ ರತಿ ಕಲ್ಯಾಣ ಯಕ್ಷಗಾನ ಬಯಲಾಟ ನಡೆಯಿತು. ಕುಂಟಾರು ವಾಸುದೇವ ತಂತ್ರಿ ಮತ್ತು ಬಳಗದವರು ಭಕ್ತಿಗಾನ ಕಾರ್ಯಕ್ರಮ ನಡೆಸಿಕೊಟ್ಟರು.
ಸಂತಾಪ
ಮಠದ ತಂತ್ರಿಗಳಾಗಿದ್ದ ದೇರೆಬೈಲು ಮುಕ್ಕೂರು ರಾಘವೇಂದ್ರ ಪ್ರಸಾದ ಶಾಸಿŒ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕರ್ತವ್ಯದಲ್ಲಿ ಶ್ರದ್ಧೆ
ಕೆಮ್ಮಿಂಜೆ ಕಾರ್ತಿಕ ತಂತ್ರಿ ಅವರು ಧಾರ್ಮಿಕ ಉಪನ್ಯಾಸ ನೀಡಿ, ಸಂಸ್ಕೃತಿ, ಸಂಸ್ಕಾರ ನೀಡುವ ಕಾರ್ಯಗಳನ್ನು ಮಠ-ಮಂದಿರಗಳು ಮಾಡುತ್ತಾ ಬರಬೇಕು. ದೇವರ ಇಚ್ಛೆ ಬಿಟ್ಟು ಬೇರೆ ಯಾವುದೂ ನಡೆಯುವುದಿಲ್ಲವಾದರೂ ಪ್ರತಿಫಲಾಪೇಕ್ಷೆ ಬಯಸದೆ ನಮ್ಮ ಕರ್ತವ್ಯವನ್ನು ಶ್ರದ್ಧೆಯಿಂದ ಮಾಡಬೇಕು ಎಂದರು.