Advertisement

ಏರಿಸುವುದಲ್ಲ , ಇಳಿಸಿ: ಗ್ರಾಹಕರ ಆಗ್ರಹ

11:43 PM Feb 19, 2021 | Team Udayavani |

ಮಂಗಳೂರು: ವಿದ್ಯುತ್‌ ದರವನ್ನು ಪ್ರತೀ ಯೂನಿಟ್‌ಗೆ 1.67 ರೂ.ಗಳಂತೆ  ಹೆಚ್ಚಿಸಬೇಕು ಎಂಬ ಮೆಸ್ಕಾಂ ಮನವಿಗೆ ಸಾರ್ವಜನಿಕ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಜತೆಗೆ ಈಗಿರುವ ದರವನ್ನೂ ಕಡಿಮೆ ಮಾಡಬೇಕೆಂದು ಆಗ್ರಹಿಸಲಾಗಿದೆ.

Advertisement

ಅಹವಾಲನ್ನು ಆಲಿಸಿದ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗದ ಅಧ್ಯಕ್ಷರು ನಿರ್ಧಾರವನ್ನು ಮುಂದೆ ಪ್ರಕಟಿಸುವುದಾಗಿ ತಿಳಿಸಿದರು.

ದರ ಪರಿಷ್ಕರಣೆ ಕುರಿತು ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ)ದ ಅಧ್ಯಕ್ಷ ಶಂಭು ದಯಾಳ್‌ ಮೀಣ ಅಧ್ಯಕ್ಷತೆಯಲ್ಲಿ ದ.ಕ. ಡಿಸಿ ಕಚೇರಿಯಲ್ಲಿ ಶುಕ್ರವಾರ ಸಾರ್ವಜನಿಕ ವಿಚಾರಣೆ ನಡೆಯಿತು. ಆಯೋಗದ ಸದಸ್ಯರಾದ ಎಂ.ಡಿ. ರವಿ, ಮಂಜುನಾಥ್‌ ಇದ್ದರು. ಮೆಸ್ಕಾಂ ಎಂಡಿ ಪ್ರಶಾಂತ್‌ ಕುಮಾರ್‌ ಮಿಶ್ರಾ ಕಂಪೆನಿಯ ಆರ್ಥಿಕ ಫಲಿತಾಂಶದ ವಿವರ ನೀಡಿದರು.

ಮೆಸ್ಕಾಂ ಲೆಕ್ಕಾಧಿಕಾರಿಗೆ ಎಚ್ಚರಿಕೆ :

ವಿದ್ಯುತ್‌ ಕಾಮಗಾರಿಗಳಲ್ಲಿ ಗುಣಮಟ್ಟ ಖಾತರಿಗಾಗಿ ತಜ್ಞ ಸಮಾಲೋಚನ ತಂಡದ ಮೂಲಕ ಆಯ್ದ ಕಾಮಗಾರಿಗಳ ಪರಿಶೀಲನೆ ನಡೆಸಿ ನ್ಯೂನತೆ ಕಂಡುಬಂದಲ್ಲಿ ದರ ಪರಿಷ್ಕರಣೆ ಸಂದರ್ಭ ಪರಿಗಣಿಸಲಾಗುತ್ತದೆ ಎಂದು ಕೆಇಆರ್‌ಸಿ ಅಧ್ಯಕ್ಷರು ಹೇಳಿದರು.

Advertisement

ಲೈನ್‌ಮೆನ್‌ ನೇಮಿಸಿ :

ಮೆಸ್ಕಾಂನಲ್ಲಿ ಶೇ. 50 ಸಿಬಂದಿ ಕೊರತೆ ಇದ್ದು, ಆಯೋಗವು ಲೈನ್‌ಮೆನ್‌ ನೇಮಕಾತಿಗೆ ಆದೇಶ ನೀಡಬೇಕು ಎಂದು ಉಡುಪಿಯ ಭಾರತೀಯ ಕಿಸಾನ್‌ ಸಂಘದ ಸತ್ಯನಾರಾಯಣ ಹೇಳಿದರು. ನೀರಾವರಿ ಪಂಪ್‌ಸೆಟ್‌ಗಳಿಗೆ ಮೀಟರ್‌ ಅಳವಡಿಸಿದರೆ ರೈತರು ಬಳಸುವ ವಿದ್ಯುತ್‌ ಲೆಕ್ಕ ಸಿಗುತ್ತದೆ. ಪ್ರಾಯೋಗಿಕವಾಗಿ ದ.ಕ., ಉಡುಪಿ ಜಿಲ್ಲೆಗಳ ಒಂದೊಂದು ತಾಲೂಕಿನಲ್ಲಿ  ಮೀಟರ್‌ ಅಳವಡಿಸಿ ಎಂದು ಸಲಹೆ ನೀಡಿದರು.

ಸಭೆಯಲ್ಲಿ ವ್ಯಕ್ತವಾದ ದೂರಿನಂತೆ ವಾಹನಗಳ ದುರುಪಯೋಗ, ಸಿಬಂದಿ ಕಾರ್ಯಾಚರಣೆಯಲ್ಲಿ ಪಾರ‌ ದರ್ಶಕತೆ ಬಗ್ಗೆ ಕ್ರಮ ಕೈಗೊಳ್ಳುವಂತೆ ಮೆಸ್ಕಾಂ ಮುಖ್ಯಸ್ಥರಿಗೆ ಸೂಚಿಸಿದರು. ಮೆಸ್ಕಾಂ ಎಂಡಿಯವರನ್ನೇ ಸಂಸ್ಥೆಯ ಲೆಕ್ಕ ಪರಿಶೋಧಕರು ದಾರಿ ತಪ್ಪಿಸಲು ಯತ್ನಿಸುತ್ತಿರುವುದು ಗಮನಕ್ಕೆ ಬಂದಿದೆ ಎಂದು ಎಚ್ಚರಿಸಿದರು.

ಮೆಸ್ಕಾಂ ಅಧಿಕಾರಿಗಳ ಕೆಲಸದ ಗುಣಮಟ್ಟದ ಬಗ್ಗೆಯೂ ಗಮನಿಸ ಬೇಕು, ಸಾಮಗ್ರಿ ಖರೀದಿಸುವಾಗ ಗುಣಮಟ್ಟ ಪರಿಶೀಲಿಸಬೇಕು ಎಂದು ಸಲಹೆ ಮಾಡಿದರು.

ಮಲೆನಾಡಿನಲ್ಲಿ ದಿನಕ್ಕೆ 4 ತಾಸು  ಸಮರ್ಪಕ ವಿದ್ಯುತ್‌ ಇಲ್ಲ  :

ಮಲೆನಾಡಿನಲ್ಲಿ ತೀರ್ಥಹಳ್ಳಿ ನಗರ ಬಿಟ್ಟು ಇತರ ಕಡೆ ದಿನಕ್ಕೆ 4 ತಾಸು ಸರಿಯಾಗಿ ವಿದ್ಯುತ್‌ ಲಭಿಸಿದರೆ ಪುಣ್ಯ. ಮೆಸ್ಕಾಂ ಸಿಬಂದಿ ಜವಾಬ್ದಾರಿಯಿಂದ ಕೆಲಸ ನಿರ್ವಹಿಸುತ್ತಿಲ್ಲ. ಟ್ರಾನ್ಸ್‌ ಫಾರ್ಮರ್‌ ಬದಲಾಯಿಸಬೇಕಾದರೆ ಗ್ರಾಹಕರೇ ಹಣ ಮತ್ತು ವಾಹನ ಒದಗಿಸಬೇಕಾದ ಪರಿಸ್ಥಿತಿ ಇದೆ. ಈಗ ಮತ್ತೆ ಏರಿಕೆ ಸರಿಯಲ್ಲ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು. ಸೌರ ವಿದ್ಯುತ್‌ ಉತ್ಪಾದಿಸಿ ಯೂನಿಟ್‌ಗೆ 4 ರೂ.ಗಳಂತೆ ಪೂರೈಸಲು ಸಾಕಷ್ಟು ಮಂದಿ ಸಿದ್ಧರಿದ್ದು, ಖರೀದಿಸಲು ಮೆಸ್ಕಾಂ ಮುಂದಾ ಗಬೇಕು. ವಿದ್ಯುತ್‌ ದುರಂತಗಳ ಸಂದರ್ಭ ತತ್‌ಕ್ಷಣ ಪರಿಹಾರ ನೀಡ ಬೇಕು ಎಂದು ಸಲಹೆ ನೀಡಿದರು.

ಅನಿವಾರ್ಯತೆ: ಮಿಶ್ರಾ :

ಮೆಸ್ಕಾಂ ಎಂಡಿ ಪ್ರಶಾಂತ್‌ ಕುಮಾರ್‌ ಮಿಶ್ರಾ ಮಾತನಾಡಿ, ಕಂಪೆನಿಯು 943.46 ಕೋಟಿ ರೂ. ಆದಾಯ ಕೊರತೆ ಎದುರಿಸುತ್ತಿದ್ದು, ಅದನ್ನು ಸರಿದೂಗಿಸಲು ಪ್ರತಿ ಯೂನಿಟ್‌ಗೆ ಸರಾಸರಿ 1.67 ರೂ. ಏರಿಸುವ ಅನಿವಾರ್ಯತೆ ಇದೆ ಎಂದರು.  ದ.ಕ., ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳ 29 ತಾಲೂಕು ವ್ಯಾಪ್ತಿ ಹೊಂದಿರುವ ಮೆಸ್ಕಾಂಗೆ 24.88 ಲಕ್ಷ ಗ್ರಾಹಕರಿದ್ದಾರೆ. ಸಿಬಂದಿ ಕೊರತೆಯಿದ್ದರೂ ಉತ್ತಮ ಸೇವೆ ಒದಗಿಸುತ್ತಿದೆ ಎಂದು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next