Advertisement

ಮೀನಿಗೆ ಬೇಡಿಕೆ ಹೆಚ್ಚಳ : 14 ದಿನಗಳಲ್ಲಿ ಕೇವಲ 60,924 ಕೆ.ಜಿ. ಮೀನು ಲಭ್ಯ

10:47 PM Apr 26, 2020 | Sriram |

ವಿಶೇಷ ವರದಿ- ಮಹಾನಗರ: ಸರಕಾರ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾ ವ್ಯಾಪ್ತಿ ಯಲ್ಲಿಯೂ ಎ. 13ರಿಂದ ನಾಡದೋಣಿ ಮೀನುಗಾರಿಕೆ ಆರಂಭಗೊಂಡಿದೆ. ಆದರೆ ಜಿಲ್ಲೆಯ ಗ್ರಾಹಕರ ಬೇಡಿಕೆ, ನಿರೀಕ್ಷೆಗೆ ತಕ್ಕಂತೆ ಮೀನು ದೊರೆಯುತ್ತಿಲ್ಲ.ಇತ್ತ ಮೀನುಗಾರರಿಗೂ ನರಾಶೆ ಮೂಡಿಸಿದೆ. ಮುಖ್ಯವಾಗಿ ಬೆಲೆ ಗಗನಕ್ಕೇರಿದೆ.

Advertisement

60, 924 ಕೆ.ಜಿ. ಮೀನು ಲಭ್ಯ
ಕಳೆದ 14 ದಿನಗಳಲ್ಲಿ ಒಟ್ಟು 1,384 ನಾಡದೋಣಿಗಳು ಮೀನುಗಾರಿಕೆ ನಡೆಸಿದ್ದು ಎ.26ರ ವರೆಗೆ ಒಟ್ಟು 60,924 ಕೆ.ಜಿ. ಮೀನು ಲಭ್ಯವಾಗಿದೆ. ಕೆಲವು ದಿನ ಸುಮಾರು ಒಂದು ಸಾವಿರ ಕೆ.ಜಿ.ಯಷ್ಟು ಮಾತ್ರ ಮೀನು ದೊರೆತಿದೆ. ಇನ್ನು ಕೆಲವು ದಿನ 6,575 ಕೆ.ಜಿ.ಯಷ್ಟು ಮೀನು ಸಿಕ್ಕಿದೆ. ಆದರೆ ಮೀನುಗಾರರ ಪ್ರಕಾರ ಮೀನಿನ ಲಭ್ಯತೆ ತೀರಾ ಕಡಿಮೆ. ದಿನವೊಂದಕ್ಕೆ ಸರಾಸರಿ ಸುಮಾರು 80ಕ್ಕೂ ಅಧಿಕ ದೋಣಿಗಳು ಮೀನುಗಾರಿಕೆ ನಡೆಸುತ್ತಿವೆ.

ಪ್ರಸ್ತುತ ನಾಡದೋಣಿ ಬಲೆಗೆ ಕೊಡ್ಡೆಯಿ, ಬೊಳಿಂಜಿರ್‌, ಸ್ವಾಡಿ, ಬಂಗುಡೆ, ಕೇದಾರ್‌, ಮಿಶ್ರ ಮೀನುಗಳು ಬೀಳುತ್ತಿವೆ. ಎ.26ರಂದು ಕೆಲವು ಕಡೆಗಳಲ್ಲಿ ಕಾನೆ, ಅಂಜಲ್‌, ಕಲ್ಲೂರ್‌ ಮೀನುಗಳು ಸಿಕ್ಕಿವೆ. ಆದರೆ ಬೆಲೆ ಗಗನಕ್ಕೇರಿದೆ. ದೋಣಿಗಳು ವಾಪಸ್ಸು ಬರುವಾಗಲೇ ವ್ಯಾಪಾರಿಗಳು ಸಾಲುಗಟ್ಟಿ ನಿಂತಿರುತ್ತಾರೆ. ಗ್ರಾಹಕರಿಂದ ಬೇಡಿಕೆ ಹೆಚ್ಚುತ್ತಿರುವುದರಿಂದ ವ್ಯಾಪಾರಿಗಳು ಬೆಲೆ ಇಳಿಸಲು ಒಪ್ಪುತ್ತಿಲ್ಲ. ಮೀನಿನ ದರದ ಮೇಲೆ ಇಲಾಖೆಗೂ ನಿಯಂತ್ರಣ ಇಲ್ಲ. ಆಳಸಮುದ್ರ ಸೇರಿದಂತೆ ಯಾಂತ್ರೀಕೃತ ಮೀನುಗಾರಿಕೆ ಆರಂಭವಾದರಷ್ಟೆ ಜಿಲ್ಲೆಯ ಅಗತ್ಯವಿರುವಷ್ಟು ಮೀನು ಲಭ್ಯವಾಗಬಹುದು. ಬೆಲೆಯೂ ಇಳಿಮುಖವಾಗಬಹುದು.

ಸಾಮಾಜಿಕ ಅಂತರ ಕಡ್ಡಾಯ
ಒಟ್ಟು 10 ಮೀನು ಇಳಿದಾಣ ಗುರುತಿಸಲಾಗಿದ್ದು, ಎಲ್ಲ ಇಳಿದಾಣ ಕೇಂದ್ರ ಗಳಲ್ಲಿಯೂ ಸಾಮಾಜಿಕ ಅಂತರ ಕಟ್ಟು ನಿಟ್ಟಾಗಿ ಪಾಲನೆಯಾಗುವಂತೆ ಕ್ರಮ ಕೈಗೊಂಡು ನಿಗಾ ವಹಿಸಲಾಗುತ್ತಿದೆ. ಇಂತಹ ಪಾಯಿಂಟ್‌ಗಳಿಗೆ ಪಾಸ್‌ ಹೊಂದಿರುವ ವ್ಯಾಪಾರಿಗಳಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಜನರು ಗುಂಪುಗೂಡುವುದನ್ನು ತಪ್ಪಿಸಲು, ವ್ಯವಸ್ಥಿತವಾಗಿ ವ್ಯವಹಾರ ನಡೆಯುವಂತಾಗಲು ಈ ಕ್ರಮ ಅಗತ್ಯ. ಸಾರ್ವಜನಿಕರು ಸಹಕರಿಸಬೇಕಿದೆ.
 -ಹರೀಶ್‌ ಕುಮಾರ್‌, ಮೀನುಗಾರಿಕಾ ಉಪನಿರ್ದೇಶಕರು, ದ.ಕ.

Advertisement

Udayavani is now on Telegram. Click here to join our channel and stay updated with the latest news.

Next