Advertisement

“ಭ್ರಷ್ಟಾಚಾರ ಹೆಚ್ಚಳ, ಅನುಷ್ಠಾನಗೊಳ್ಳದ ಭರವಸೆ, ಅಭಿವೃದ್ಧಿ ಶೂನ್ಯ’

06:55 AM Mar 24, 2018 | Team Udayavani |

ಉಡುಪಿ: ಸಚಿವ ಪ್ರಮೋದ್‌ ಮಧ್ವರಾಜ್‌ ಚುನಾವಣೆ ಸಂದರ್ಭ ನೀಡಿದ ಭರವಸೆಗಳನ್ನು ಈಡೇರಿಸಿಲ್ಲ. ಕಳೆದ 5 ವರ್ಷಗಳ ಕಾಲ ಭ್ರಷ್ಟಾಚಾರಕ್ಕೆ ಅವಕಾಶ ನೀಡಿರುವ ಅವರು ಉಡುಪಿಯಲ್ಲಿ ಅಭಿವೃದ್ಧಿ ಕೆಲಸಗಳನ್ನು ನಡೆಸಿಲ್ಲ ಎಂದು ಮಾಜಿ ಶಾಸಕ ಕೆ. ರಘುಪತಿ ಭಟ್‌ ಆರೋಪಿಸಿದ್ದಾರೆ.

Advertisement

ಮಾ. 23ರಂದು ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರ ಬಿಜೆಪಿ ವತಿಯಿಂದ  “ಆರೋಪ ಪಟ್ಟಿ’ಯ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

“ಉಡುಪಿಗೆ 2,000 ಕೋ.ರೂ. ಅನುದಾನ ತಂದಿದ್ದೇನೆ ಎಂದು ಸಚಿವರು ಹೇಳುತ್ತಿದ್ದಾರೆ. ಇದರಲ್ಲಿ ಸಂಧ್ಯಾ ಸುರಕ್ಷಾ, ಅನ್ನಭಾಗ್ಯಕ್ಕೆ ಬಿಡುಗಡೆಯಾಗುವ ಮೊತ್ತ, ನೌಕರರ ಸಂಬಳವನ್ನು ಕೂಡ ಸೇರಿಸಿದ್ದಾರೆ. ಅವರು ನಂ.1 ಶಾಸಕರೆಂಬ ಹೇಳಿಕೆಗಳನ್ನು ಒಪ್ಪಲಾಗದು. ಇದು ಅವರ ವಿರುದ್ಧದ ಮೊದಲ ಕಂತಿನ ಆರೋಪ ಪಟ್ಟಿ. ಇನ್ನು 15 ದಿನಕ್ಕೊಮ್ಮೆ ಇಂತಹ ಆರೋಪ ಪಟ್ಟಿ ಬಿಡುಗಡೆ ಮಾಡುತ್ತೇವೆ’ ಎಂದರು.

500 ಕೋ.ರೂ. ಆಸ್ಪತ್ರೆ ಏನಾಯಿತು?: ಅಜ್ಜರಕಾಡು ಜಿಲ್ಲಾಸ್ಪತ್ರೆಯನ್ನು 500 ಕೋ.ರೂ. ವೆಚ್ಚದಲ್ಲಿ ಮೇಲ್ದರ್ಜೆಗೇರಿ ಸಲಾಗುವುದು ಎಂದು ಸಚಿವರು ಚುನಾವಣಾ ಪ್ರಣಾಳಿಕೆ ಯಲ್ಲಿ ಹೇಳಿದ್ದರು. ಈಗ ಆಸ್ಪತ್ರೆಯ ಸ್ಥಿತಿ ಅಧೋಗತಿಗೆ ಇಳಿದಿದ್ದು, ರೋಗಿಗಳನ್ನು ಮಂಗಳೂರಿನ ವೆನಾÉಕ್‌ ಆಸ್ಪತ್ರೆಗೆ ಕರೆದೊಯ್ಯ ಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಟೆಂಡರ್‌ ಕರೆಯದೆ ಖಾಸಗಿಯವರಿಗೆ ನೀಡಲಾಗಿದೆ. ಇದರಲ್ಲಿ ಭ್ರಷ್ಟಾಚಾರ ನಡೆದಿದೆ ಎಂದರು.

ಒಂದು ಕಿ.ಮೀ. ರಸ್ತೆ ಚತುಷ್ಪಥ !: ಕಳೆದ 5 ವರ್ಷಗಳಲ್ಲಿ ಉಡುಪಿಯಲ್ಲಿ ಒಂದು ಕಿ.ಮೀ. ರಸ್ತೆ (ಪೆರಂಪಳ್ಳಿ) ಮಾತ್ರ ಚತುಷ್ಪಥಗೊಂಡಿದೆ. ಅದು ಕೂಡ ಅವೈಜ್ಞಾನಿಕವಾಗಿದೆ. ಇದಲ್ಲದೆ ಯಾವುದೇ ರಸ್ತೆಯ ಚತುಷ್ಪಥವಾಗಲಿ, ಭೂಸ್ವಾಧೀನ ಪಡಿಸಿ ರಸ್ತೆ ಅಭಿವೃದ್ಧಿ ಮಾಡುವುದಾಗಲೀ ನಡೆದಿಲ್ಲ.  ಸಣ್ಣ ಪುಟ್ಟ ಕಾಮಗಾರಿಗಳಿಗೂ ಗುತ್ತಿಗೆದಾರರಿಂದ ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ ಎಂದು ಟೀಕಿಸಿದರು.
 
ಸ್ನಾತಕೋತ್ತರ ಕೇಂದ್ರವೂ ಹೋಯಿತು:
“ಡಾ| ವಿ.ಎಸ್‌.ಆಚಾರ್ಯರು ಸಚಿವರಾಗಿದ್ದು ನಾನು ಶಾಸಕನಾಗಿದ್ದಾಗ ಉಡುಪಿ ವಿ.ಸಭಾ ಕ್ಷೇತ್ರದ ಉಪ್ಪೂರಿನಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರಕ್ಕಾಗಿ 30 ಎಕರೆ ಜಾಗ ಗುರುತಿಸಲಾಗಿತ್ತು. ಆದರೆ ಸೊರಕೆ ಅವರು ಸಚಿವರಾಗಿದ್ದಾಗ ಬೆಳಪುವಿಗೆ ವರ್ಗಾಯಿಸಲಾಯಿತು. ಪ್ರಮೋದ್‌ ಪ್ರತಿರೋಧ ವ್ಯಕ್ತಪಡಿಸದೆ ದ್ರೋಹ ಬಗೆದರು’ ಎಂದು ಆರೋಪಿಸಿದರು.

Advertisement

ಪುರಸಭೆ ಇಲ್ಲ, ಕೊನೆಕ್ಷಣದಲ್ಲಿ ತಾಲೂಕು: ಬ್ರಹ್ಮಾವರ ಪುರಸಭೆಯಾಗಬೇಕೆಂಬ ಬೇಡಿಕೆ ಈಡೇರಿಸಿಲ್ಲ. ಕಡಿಮೆ ಅರ್ಹತಾ ಯೋಗ್ಯವಾದ ಕಾಪು ಪುರಸಭೆಯಾಯಿತು. ಬ್ರಹ್ಮಾ ವರವನ್ನು  ಕೊನೆ ಕ್ಷಣಕ್ಕೆ ತಾಲೂಕಾಗಿ ಘೋಷಣೆಮಾಡಿದ್ದು ಹೊರತುಪಡಿಸಿದರೆ ಬೇರಾವುದೇ ಕೆಲಸಗಳಾಗಿಲ್ಲ ಎಂದರು. 

ಮರಳು ಮಾಫಿಯಾ: ಮರಳು ಮಾಫಿಯಾಕ್ಕೆ ಅವಕಾಶ ನೀಡಲಾಗಿದೆ. ಕೃತಕ ಮರಳು ಅಭಾವ ಸೃಷ್ಟಿಸಲಾಗಿದೆ. ಸಾವಿರಾರು ಕಟ್ಟಡ ಕಾರ್ಮಿಕರನ್ನು ಅತಂತ್ರ ಸ್ಥಿತಿಗೆ ತಳ್ಳಿದ ಶ್ರೇಯಸ್ಸು ಸಚಿವರದ್ದು. ಕರಾವಳಿಗೆ ಪ್ರತ್ಯೇಕ ಮರಳು ನೀತಿ ತರುವಲ್ಲಿಯೂ ಪ್ರಮೋದ್‌ ವಿಫ‌ಲರಾಗಿದ್ದಾರೆ ಎಂದರು.

ತೆರಿಗೆ, ಶುಲ್ಕ ಹೆಚ್ಚಳ: ಉಡುಪಿಯಲ್ಲಿ ತೆರಿಗೆ ಹೆಚ್ಚಿಸುವುದಿಲ್ಲ ಎಂದು ಭರವಸೆ ನೀಡಲಾಗಿತ್ತು. ಆದರೆ ಈಗ ಬೇರೆ ಎಲ್ಲಿಯೂ ಇರದಷ್ಟು ಉದ್ಯಮ ಪರವಾನಿಗೆ ಶುಲ್ಕ ವಿಧಿಸಲಾಗಿದೆ. ಮನೆ ತೆರಿಗೆಗಳಲ್ಲಿಯೂ ಹೆಚ್ಚಳ ಮಾಡಲಾಗಿದೆ. ನಗರಾಡಳಿತವೂ ವಿಫ‌ಲವಾಗಿದೆ ಎಂದು ಭಟ್‌ ಆರೋಪಿಸಿದರು.
 
ಕ್ರಿಕೆಟ್‌ ಸ್ಟೇಡಿಯಂ ಇಲ್ಲ: ಬೀಡಿನಗುಡ್ಡೆಯಲ್ಲಿ ಕ್ರಿಕೆಟ್‌ ಸ್ಟೇಡಿಯಂ ಮತ್ತು ಸುಸಜ್ಜಿತ ರಂಗಮಂದಿರ ನಿರ್ಮಿಸಲು ಯೋಜನೆ ಸಿದ್ಧಪಡಿಸಲಾಗಿತ್ತು. ಆದರೆ ಪ್ರಮೋದ್‌ ಅಲ್ಲಿನ ಒಂದು ಎಕರೆಯನ್ನು ಆಫೀಸರ್ಸ್‌ ಕ್ಲಬ್‌ಗ ನೀಡಿ ಮಧ್ಯೆರ‌ಸ್ತೆ ಮಾಡಿ ಪೂರ್ವಯೋಜನೆಯನ್ನೇ ಬುಡಮೇಲು ಮಾಡಿದ್ದಾರೆ ಎಂದರು. 

ಮೀನುಗಾರರ ಮೇಲೆ ಅಪನಂಬಿಕೆ: ಮೀನುಗಾರರಿಗೆ ಈ ಹಿಂದೆ ಡೀಸೆಲ್‌ ಮೇಲಿನ ತೆರಿಗೆ ವಿನಾಯಿತಿಯನ್ನು ಖರೀದಿಸುವಾಗಲೇ ಹೊಂದಾಣಿಕೆ ಮಾಡುವ ವಿಧಾನ ಅನುಸರಿಸುತ್ತಿದ್ದು ಪ್ರಮೋದ್‌ ಮಧ್ವರಾಜ್‌ ಶಾಸಕರಾದ ಅನಂತರ ಅದನ್ನು ನೇರವಾಗಿ ಖಾತೆಗೆ ವರ್ಗಾಯಿಸುವ ಪದ್ಧತಿ ಹೇರಲಾಯಿತು. ಇದು ಸರಕಾರಕ್ಕೆ ಮೀನುಗಾರರ ಮೇಲೆ ಅಪನಂಬಿಕೆ ಇರುವುದನ್ನು ತೋರಿಸುತ್ತದೆ. ಮೀನುಗಾರರ ಯಾವುದೇ ಸಮಸ್ಯೆಗಳ ಬಗ್ಗೆ ಸಚಿವರು ಸ್ಪಂದಿಸಿಲ್ಲ. ಮೀನು ಗಾರರ‌ು ಪ್ರತಿಭಟನೆ ನಡೆಸಿದಾಗಲೂ ಅವರ ಅಹವಾಲು ಕೇಳುವ ಸೌಜನ್ಯ ತೋರಿಸಿಲ್ಲ ಎಂದು ಭಟ್‌ ಹೇಳಿದರು. 

ವಾರಾಹಿ ಯೋಜನೆ; ನಾಟಕ: ವಾರಾಹಿಯಿಂದ ಉಡುಪಿಗೆ ಕುಡಿಯುವ ನೀರು ತರುವ ಯೋಜನೆ ಒಂದು ನಾಟಕ. ಅಧಿಕಾರದ ಅವಧಿ ಮುಗಿಯುವವರೆಗೂ ಈ ಬಗ್ಗೆ ತುಟಿ ಬಿಚ್ಚದೆ ಚುನಾವಣೆ ಬರುತ್ತಿದ್ದಂತೆಯೇ ಟೆಂಡರ್‌ ಪ್ರಕ್ರಿಯೆ ಕೂಡ ಮಾಡದೆ ಶಿಲಾನ್ಯಾಸ ಮಾಡಿ ನಾಟಕ ಮಾಡುತ್ತಿದ್ದಾರೆ ಎಂದು ಭಟ್‌ ಆರೋಪಿಸಿದರು. 

“ನಾನು ಶಾಸಕನಾಗಿದ್ದ ಸಂದರ್ಭ ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ 5 ಪ್ರೌಢಶಾಲೆ, 2 ಪ.ಪೂ. ಕಾಲೇಜು, 1 ಡಿಗ್ರಿ ಕಾಲೇಜು, 3 ಸ್ನಾತಕೋತ್ತರ ಕಾಲೇಜು, 1 ಸ್ನಾತಕೋತ್ತರ ಕೇಂದ್ರ, 1 ಪಾಲಿಟೆಕ್ನಿಕ್‌ ಕಾಲೇಜು ಮತ್ತು 1 ಐಟಿಐ ಕಾಲೇಜು ಸ್ಥಾಪನೆಯಾಗಿತ್ತು. ಆದರೆ ಪ್ರಮೋದ್‌ ಕಾಲದಲ್ಲಿ ಅಂತಹ ಕೆಲಸಗಳೇ ನಡೆದಿಲ್ಲ’ ಎಂದು ರಘುಪತಿ ಭಟ್‌ ಹೇಳಿದರು. 

ಭ್ರಷ್ಟರ ರಕ್ಷಣೆ 
ಪ್ರಮೋದ್‌ ಅವರ ಶಾಸಕತ್ವ ಅವಧಿಯಲ್ಲಿ ಮಹಿಳಾ ಜಿಲ್ಲಾಧಿಕಾರಿ, ಸಹಾಯಕ ಜಿಲ್ಲಾಧಿಕಾರಿ ಮೇಲೆ ಮರಳು ಮಾಫಿಯಾದವರಿಂದ ಮಾರಣಾಂತಿಕ ಹಲ್ಲೆ ನಡೆದಿತ್ತು.  ಕಳೆದ ನಾಲ್ಕೂವರೆ ವರ್ಷಗಳಲ್ಲಿ 4-5 ಜಿಲ್ಲಾಧಿಕಾರಿ, ಎಸ್‌ಪಿಗಳನ್ನು ವರ್ಗಾವಣೆ ಮಾಡಲಾಗಿದೆ. ಆದರೆ ಕಳೆದ 5 ವರ್ಷಗಳಿಂದ ನಗರಸಭೆ ಆಯುಕ್ತರನ್ನು ವರ್ಗಾವಣೆ ಯಾಕೆ ಮಾಡಿಲ್ಲ? ಎಂದು ಭಟ್‌ ಪ್ರಶ್ನಿಸಿದರು. 

ಕಿಟ್‌ ವಿತರಣೆಯಲ್ಲೂ  ಅವ್ಯವಹಾರ
15,000 ರೂ. ಮಾರುಕಟ್ಟೆ ಮೌಲ್ಯದ ಕ್ರೀಡಾ ಕಿಟ್‌ಗಳನ್ನು ವಿತರಿಸಲಾಗಿದ್ದು,ಅದನ್ನು  40,000 ರೂ.ಗಳಿಗೆ ಖರೀದಿಸಲಾಗಿದೆ. ಸುಮಾರು 20 ಕೋ.ರೂ. ಮೌಲ್ಯದ ಅವ್ಯವಹಾರ ನಡೆದಿದೆ ಎಂದು ಭಟ್‌ ಆರೋಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next