ಹುಬ್ಬಳ್ಳಿ: ಭರತನಾಟ್ಯದಿಂದ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಹೆಚ್ಚಾಗುತ್ತದೆ. ಇದರಿಂದ ನಮ್ಮ ದೇಶಿ ಕಲೆಯನ್ನು ಮುಂದಿನ ಜನಾಂಗಕ್ಕೆ ತೆಗೆದುಕೊಂಡು ಹೋಗಬಹುದಾಗಿದೆ ಎಂದು ನಾಟ್ಯಾಂಜಲಿ ಕಲಾಮಂದಿರದ ವಿದುಷಿ ವನಿತಾ ಮಹಾಲೆ ಹೇಳಿದರು.
ಇಲ್ಲಿನ ದೇಶಪಾಂಡೆ ನಗರದ ಸವಾಯಿ ಗಂಧರ್ವ ಕಲಾ ಮಂದಿರದಲ್ಲಿ ರವಿವಾರ ನಡೆದ ಸುಜನಿ ನಾಟ್ಯಶಾಲೆಯ ನೃತ್ಯ ಸಂಗಮ-2022 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಕ್ಕಳಿಗೆ ಶಿಕ್ಷಣದ ಜತೆಗೆ ಪಠ್ಯೇತರ ಚಟುವಟಿಕೆಗಳು ಕೂಡ ಮುಖ್ಯವಾಗಿರುತ್ತದೆ. ಒತ್ತಡದ ನಿವಾರಣೆಗಾಗಿ ಭರತನಾಟ್ಯ, ಕೀಡೆಗಳು, ಇನ್ನಿತರೆ ಚಟುವಟಿಕೆಗಳು ಅತ್ಯುಪಯುಕ್ತವಾಗಿದ್ದು, ಇವುಗಳ ಬಗ್ಗೆ ಪೋಷಕರು ಮಕ್ಕಳಲ್ಲಿ ಬಗ್ಗೆ ಆಸಕ್ತಿ ಮೂಡಿಸಬೇಕು ಎಂದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಎಚ್.ಎಸ್.ಕಿರಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಹುತೇಕ ನಾಟ್ಯ ಶಾಲೆಗಳು, ಕ್ರೀಡೆಗಳ ತರಬೇತಿ ನಗರ ಪ್ರದೇಶಕ್ಕೆ ಸೀಮಿತವಾಗುತ್ತಿದ್ದು, ಇದರಿಂದ ಗ್ರಾಮೀಣ ಭಾಗದ ಪ್ರತಿಭೆಗಳು ವೇದಿಕೆ ಇಲ್ಲದಂತಾಗಿದೆ. ಇಂತಹ ಸಂದರ್ಭದಲ್ಲಿ ಸುಜನಿ ನಾಟ್ಯಶಾಲೆ ಗ್ರಾಮೀಣ ಭಾಗದ ಪ್ರತಿಭೆಗಳಿಗೆ ಹೆಚ್ಚು ಒತ್ತು ನೀಡುತ್ತಿರುವುದು ಶ್ಲಾಘನೀಯ ಎಂದರು.
ಹೊಟೇಲ್ ಉದ್ಯಮಿ ವಿಜಯ ಪೂಜಾರಿ, ನೃತ್ಯಶಾಲೆಯ ಹಿರಿಯ ವಿದ್ಯಾರ್ಥಿಗಳಾದ ಉಷಾ ಗೋಂದಕರ್, ಸಹನಾ ದಾಸನ ಕೊಪ್ಪರನ್ನು ಸನ್ಮಾನಿಸಲಾಯಿತು. ವಿಶ್ವಧರ್ಮ ಅಂಗವಿಕಲ ಮಕ್ಕಳ ಶಾಲೆ ಅಧ್ಯಕ್ಷ ಐ.ಕೆ. ಲಕ್ಕುಂಡಿ, ಮುಖ್ಯಶಿಕ್ಷಕಿ ಲಕ್ಷ್ಮೀ ನರಗುಂದ, ಸುಜನಿ ನಾಟ್ಯಶಾಲೆಯ ಸುನಿತಾ ಜಗನ್ನಾಥ ಹಾಗೂ ವಿದ್ಯಾರ್ಥಿಗಳಿದ್ದರು.